ಚಿತ್ರದುರ್ಗ: `ನೀಲಂ~ ಚರಂಡ ಮಾರುತದ ಅಬ್ಬರಕ್ಕೆ ಬಯಲು ಸೀಮೆಯೂ ತತ್ತರಿಸಿದೆ. ಬುಧವಾರ ರಾತ್ರಿಯಿಂದ ಸುರಿದ ಸತತ ಮಳೆ ಮಲೆನಾಡಿನ ವಾತಾವರಣ ಕಲ್ಪಿಸಿತು.
ಆಗಾಗ ಅಲ್ಪವಿರಾಮದ ನೀಡುತ್ತಿದ್ದ ಮಳೆರಾಯ ಗುರುವಾರ ಇಡೀ ದಿನ ಸುರಿದ. ಮಳೆಯಿಂದಾಗಿ ಅಲ್ಪಮಟ್ಟಿಗೆ ಜನಜೀವನ ಅಸ್ತವ್ಯವಸ್ತಗೊಂಡಿತು.
ಮಳೆಯಿಂದಾಗಿ ನಗರದ ರಸ್ತೆಗಳು ಜಲಾವೃತಗೊಂಡವು. ರಸ್ತೆಗಳಲ್ಲಿನ ಗುಂಡಿಗಳು ಕೆಸರು ನೀರು ತುಂಬಿಕೊಂಡು ಸಂಚಾರಕ್ಕೆ ಸಂಚಕಾರ ತಂದಿತು. ಮಾರುಕಟ್ಟೆ ಪ್ರದೇಶ ಕೊಳಚೆ ಪ್ರದೇಶದಂತಾಗಿತ್ತು. ನಾಯಕನ ಹಟ್ಟಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಚಿತ್ರದುರ್ಗ ಕಸಬಾದಲ್ಲಿ 7 ಸೆಂ.ಮೀ., ಹಿರೇಗುಂಟನೂರಿನಲ್ಲಿ 7.8, ಭರಮಸಾಗರದಲ್ಲಿ 5.7, ಚಳ್ಳಕೆರೆ ಕಸಬಾದಲ್ಲಿ 7.4, ನಾಯಕನ ಹಟ್ಟಿಯಲ್ಲಿ 9.1, ಪರಶುರಾಂಪುರದಲ್ಲಿ 6.4, ಹೊಳಲ್ಕೆರೆ ಕಸಬಾದಲ್ಲಿ 4.8, ಬಿ. ದುರ್ಗಾದಲ್ಲಿ 5.4, ರಾಮಗಿರಿಯಲ್ಲಿ 4.8, ಐಮಂಗಲದಲ್ಲಿ 8.3 ಹಿರಿಯೂರು ಕಸಬಾದಲ್ಲಿ 7.1, ಹೊಸದುರ್ಗ ಕಸಬಾದಲ್ಲಿ 5.45, ಮಾಡದಕೆರೆಯಲ್ಲಿ 6.65, ದೇವಸಮುದ್ರದಲ್ಲಿ 3.8, ಮತ್ತೋಡದಲ್ಲಿ 6.6, ಮೊಳಕಾಲ್ಮುರಿನಲ್ಲಿ 7.8 ಸೆಂ.ಮೀ. ಮಳೆಯಾಗಿದೆ.
ಮಳೆಯಂದಾಗಿ, ಕೆಲವೆಡೆ ಮರಗಳು ಉರುಳಿ ಬಿದ್ದಿರುವುದು ವರದಿಯಾಗಿದೆ.
ಬಾಳೆ ತೋಟಕ್ಕೆ ಹಾನಿ
ಹಿರಿಯೂರು: ತಾಲ್ಲೂಕಿನಲ್ಲಿ `ನೀಲಂ~ ಚಂಡಮಾರುತದಿಂದ ಬುಧವಾರ ಸಂಜೆಯಿಂದ ಬೀಳುತ್ತಿರುವ ಮಳೆ ರೈತರ ಮೊಗದಲ್ಲಿ ಸಂತಸ ತರಿಸಿದೆ. ಕೆಲವು ಕಡೆ ಸ್ವಲ್ಪಮಟ್ಟಿನ ಹಾನಿ ಉಂಟು ಮಾಡಿದೆ.
ಹುಚ್ಚವ್ವನಹಳ್ಳಿಯಲ್ಲಿ ಉಪ್ಪಾರ ಹಳ್ಳಿ ಮಾರಣ್ಣ ಎಂಬ ರೈತರ ತೋಟದಲ್ಲಿ ಸುಮಾರು ಒಂದು ಎಕರೆಯಲ್ಲಿ ಫಸಲಿಗೆ ಬಂದಿದ್ದ ನೂರಕ್ಕೂ ಹೆಚ್ಚು ಬಾಳೆ ಗಿಡಗಳು ಮಳೆ- ಗಾಳಿಗೆ ನೆಲಕ್ಕೆ ಉರುಳಿವೆ. ಇದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಹಿರಿಯೂರಿನಲ್ಲಿ 7.1 ಸೆಂ.ಮೀ., ಬಬ್ಬೂರಿನಲ್ಲಿ 7.0, ಐಮಂಗಲ, ಧರ್ಮಪುರ, ಯರಬಳ್ಳಿ ಮತ್ತು ವಾಣಿವಿಲಾಸಪುರದಲ್ಲಿ 6ರಿಂದ 6.5 ಸೆಂ.ಮೀ. ಜವನಗೊಂಡನ ಹಳ್ಳಿಯಲ್ಲಿ ಕೇವಲ 1.2 ಸೆಂ.ಮೀ. ಮಳೆಯಾಗಿದೆ ಎಂದು ತಹಶೀಲ್ದಾರ್‌ಎನ್. ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.
ನೆಲಕ್ಕುರುಳಿದ ಬಾಳೆ
ಧರ್ಮಪುರ: ಹೋಬಳಿಯ ಸುತ್ತ ಮುತ್ತ ಬುಧವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದ ಸಮೀಪದ ಖಂಡೇನಹಳ್ಳಿ ಪಾಳ್ಯದಲ್ಲಿ 8 ಎಕರೆಯ ಬಾಳೆ ತೋಟ ನೆಲಕ್ಕುರುಳಿದೆ.
ಖಂಡೇನಹಳ್ಳಿ ಪಾಳ್ಯದ ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಎಸ್. ವೀರಣ್ಣ ಅವರಿಗೆ ಸೇರಿದ 8 ಎಕರೆಯಲ್ಲಿ ಉತ್ತಮವಾಗಿ ಬೆಳೆದಿದ್ದ 4,600 ಏಲಕ್ಕಿ ಬಾಳೆ ಫಸಲಿಗೆ ಬಂದಿತ್ತು. ಪ್ರತಿ ಗೊನೆ ಕನಿಷ್ಠ 15ರಿಂದ 18 ಕೆ.ಜಿ. ತೂಕವಿದ್ದು, ಮಾರಾಟಕ್ಕೆ ಕಠಾವು ಮಾಡಬೇಕಾಗಿತ್ತು. ಆದರೆ, ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಬಾಳೆ ತೋಪು ಸಂಪೂರ್ಣವಾಗಿ ನೆಲಕಚ್ಚಿದೆ.
ಇದರಿಂದಾಗಿ ಸುಮಾರು ್ಙ 15 ಲಕ್ಷ ನಷ್ಟ ಸಂಭವಿಸಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ನೀಡಿದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ.ಸವಿತಾ ತಿಳಿಸಿದ್ದಾರೆ.
`ನೀಲಂ~ ತಂದ ಸಿಹಿ-ಕಹಿ
ಮೊಳಕಾಲ್ಮುರು: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಬುಧವಾರ ಸಂಜೆಯಿಂದ ಬೀಳುತ್ತಿರುವ ಮಳೆ ಗುರುವಾರದವರೆಗೂ ಮುಂದುವರಿಯಿತು.
ಬುಧವಾರ ರಾತ್ರಿ ಆರಂಭವಾದ ಮಳೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಾ ಹೋಯಿತು. ಜತೆಗೆ ಗಾಳಿ ವೇಗ ಸಹ ಹೆಚ್ಚಾಯಿತು. ತಾಂತ್ರಿಕ ಕಾರಣ ಉಂಟಾದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನವರೆಗೆ ವಿದ್ಯುತ್ ಕಡಿತಗೊಂಡಿತ್ತು.
`ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 4.5 ಸೆಂಮೀ, ದೇವಸಮುದ್ರ 4.2 ಸೆಮೀ, ರಾಂಪುರ ಕೇಂದ್ರದಲ್ಲಿ 5.8 ಸೆಂಮೀ, ಬಿ.ಜಿ.ಕೆರೆಯಲ್ಲಿ 3.5 ಸೆಂಮೀ, ಕೇಂದ್ರದಲ್ಲಿ 3.5 ಸೆಂಮೀ, ರಾಯಾಪುರ ಕೇಂದ್ರದಲ್ಲಿ ಹೆಚ್ಚು 7.8 ಸೆಂಮೀ ಮಳೆ ದಾಖಲಾಗಿದೆ. ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಳೆಯಿಂದಾಗಿ ಜಾನುವಾರುಗಳಿಗೆ ಮೇವು, ನೀರಿಗೆ ಅನುಕೂಲವಾಗಿದೆ ಎಂದು ತಹಶೀಲ್ದಾರ್ ಎಂ.ಪಿ. ಮಾರುತಿ ತಿಳಿಸಿದರು.
ಮಳೆಯಿಂದಾಗಿ ಮುಂಚೆ ಬಿತ್ತನೆ ಮಾಡಿದ್ದ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದ ಶೇಂಗಾಕ್ಕೆ ತೊಂದರೆಯಾಗಿದೆ. ಮಳೆ ಮುಂದುವರಿದಲ್ಲಿ ಕಾಯಿ ಮೊಳಕೆ ಒಡೆಯುವ ಜತೆಗೆ ಬಳ್ಳಿ ಕೊಳೆಯುವ ಸಾಧ್ಯತೆ ಹೆಚ್ಚಾಗಿದೆ. ತಡವಾಗಿ ಬಿತ್ತನೆ ಮಾಡಿರುವ 12 ಸಾವಿರ ಹೆಕ್ಟೇರ್ ಪ್ರದೇಶದ ಶೇಂಗಾಕ್ಕೆ ಮಳೆ ತುಸು ಅನುಕೂಲ ಕಲ್ಪಿಸಿದೆ. ಈ ಹಸಿಯಲ್ಲಿ ಸೂರ್ಯಕಾಂತಿ ಮತ್ತು ಕಡ್ಲೆ ಬಿತ್ತನೆ ಮಾಡಬಹುದಾಗಿದ್ದು, ಇಲಾಖೆಯಲ್ಲಿ 50 ರಿಯಾಯತಿ ದರದಲ್ಲಿ ಬಿತ್ತನೆಬೀಜ ಲಭ್ಯವಿದೆ ಎಂದು ಕೃಷಿ ಅಧಿಕಾರಿ ಮಹಮದ್ ಒಬೇದುಲ್ಲಾ ತಿಳಿಸಿದರು.
ಮುಂಚೆ ಬಿತ್ತನೆ ಮಾಡಿದ್ದ ಶೇಂಗಾ ಗಿಡ ಒಣಗುತ್ತಿದ್ದ ಪರಿಣಾಮ ಬಹುತೇಕ ಕಡೆ ಕಟಾವು ಮಾಡಲಾಗಿದೆ. ಬಳ್ಳಿ ನೆನೆಯದಂತೆ ಸಂರಕ್ಷಣೆ ಮಾಡುವುದು ರೈತರಿಗೆ ಕಷ್ಟವಾಗಿದೆ.
ಸಿರಿಗೆರೆ ವರದಿ
`ನೀಲಂ~ ಚಂಡಮಾರುತದ ಪ್ರಭಾವದಿಂದಾಗಿ ಬುಧವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಇಲ್ಲಿನ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತ ಕಚೇರಿ ಆವರಣದಲ್ಲಿ ನಿಂತಿದ್ದ ಕಾರಿನ ಮೇಲೆ ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಅರಳಿಮರ ಉರುಳಿ ಕಾರು ಮತ್ತು ದ್ವಿಚಕ್ರ ವಾಹನ ಜಖಂಗೊಂಡಿವೆ.
ವ್ಯಾಪಾರಕ್ಕೂ ತೊಂದರೆ
ಆಡಳಿತ ಕಚೇರಿಯ ಆವರಣದಲ್ಲಿಯೇ ಬಾಲಕಿಯರ ವಿದ್ಯಾರ್ಥಿನಿಲಯವಿದೆ. ಸದಾ ಮಕ್ಕಳು ಓಡಾಡುತ್ತಿದ್ದರಾದರೂ ರಾಜ್ಯೋತ್ಸವ ಆಚರಣೆಗೆ ಶಾಲಾ- ಕಾಲೇಜುಗಳಿಗೆ ವಿದ್ಯಾರ್ಥಿನಿಯರು ತೆರಳಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗ್ರಾಮದ ವಾರದ ಸಂತೆಯೂ ಕೂಡಾ ಇದೇ ದಿನ ಇದ್ದು, ಸಂತೇ ಮೈದಾನ ನೀರು ಮತ್ತು ಕೆಸರಿನಿಂದ ಆವೃತವಾಗಿದ್ದು ವ್ಯಾಪಾರಸ್ಥರ ವಹಿವಾಟಿಗೆ ತೊಂದರೆಯಾಗಿ ಜನಜೀವನ ಅಸ್ಥವ್ಯಸ್ತಗೊಂಡಿತ್ತು.
ಬೇರೆಬೇರೆ ಊರುಗಳಿಂದ ಸಂತೆಗಾಗಿ ಬಂದಿದ್ದ ಜನಸಾಮಾನ್ಯರು ರಸ್ತೆ ಬದಿಯ ಗಲೀಜು ಮತ್ತು ಅವ್ಯವಸ್ಥೆಗಳ ಮಧ್ಯೆಯೇ ತರಕಾರಿ ಮತ್ತು ಇತರ ದಿನನಿತ್ಯ ಉಪಯೋಗದ ವಸ್ತುಗಳನ್ನು ಖರೀದಿಸಲು ಪರದಾಡುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.