ADVERTISEMENT

ಬಯಲುಸೀಮೆಯಲ್ಲಿ ಮಳೆಗಾಗಿ ದೇವರಿಗೆ ಮೊರೆ; ಪೂಜೆ, ಕಪ್ಪೆ, ಕತ್ತೆ ಮದುವೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 5:10 IST
Last Updated 14 ಜುಲೈ 2012, 5:10 IST

ಚಿತ್ರದುರ್ಗ: ಮಳೆಗಾಗಿ ಜನರ ಪ್ರಾರ್ಥನೆ ಮುಗಿಲು ಮುಟ್ಟಿದೆ. ದೇವರಿಗೆ ವಿಶೇಷ ಪೂಜೆ, ಹೋಮ ಹವನ, ರುದ್ರಾಭಿಷೇಕ ನಡೆಯುತ್ತಿವೆ. ಶುಕ್ರವಾರ ನಗರದ ಹೊರವಲಯದ ಮಠದ ಕುರಬರಹಟ್ಟಿಯಲ್ಲಿ ಕತ್ತೆಗಳಿಗೆ ಮದುವೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡಿದರು.

ಜೂನ್ ತಿಂಗಳಲ್ಲಿ ಬರಬೇಕಾದ ಮುಂಗಾರು ಮಳೆ ಕೈಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಬರುವ ಹಿಂಗಾರು ಮಳೆಯನ್ನು ಜನತೆ ನಂಬಿಕೊಂಡಿದ್ದಾರೆ. ಮಳೆ ಇಲ್ಲದೆ ಈಗಾಗಲೇ ಕರೆ ಬಾವಿಗಳ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಕೆಲವೆಡೆ ಬತ್ತಿವೆ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಹಲವೆಡೆ ಉಂಟಾಗಿದೆ. 

ಹಿಂದಿನ ಕಾಲದಲ್ಲಿ ಮಳೆ ಬಾರದಿದ್ದರೆ ಕತ್ತೆಗಳ ಮದುವೆ ಮಾಡುವ ಮೂಲಕ ವರುಣನ ಕೃಪೆಗಾಗಿ ಪ್ರಾರ್ಥಿಸಿದ್ದರು. ಈಗಲೂ ಅದೇ ಸಂಪ್ರದಾಯ ಮುಂದುವರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗುತ್ತಿದೆ.

ನಾಯಕನಹಟ್ಟಿ ವರದಿ
ಮಳೆಗೆ ಪ್ರಾರ್ಥಿಸಿ ಶುಕ್ರವಾರ ಇಲ್ಲಿನ ಗ್ರಾಮಸ್ಥರು ಹಾಗೂ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಹಕಾರದೊಂದಿಗೆ ಪೂರ್ಣಕುಂಭ ಮೇಳ ನಡೆಸಲಾಯಿತು.

ಹೊರಮಠದ ಆವರಣದಲ್ಲಿ ಕುಂಭಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನ ಸಮಿತಿಯವರು, ಗ್ರಾಮಸ್ಥರು ಕಂಕಣ ಧಾರಣೆ ನೆರವೇರಿಸಿದರು.
 

ಅಲಂಕೃತ 101 ಕುಂಭಗಳನ್ನು ಮಹಿಳೆಯರು, ಯುವತಿಯರು ಹೊತ್ತು ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿದರು.

ದಾರಿಯುದ್ದಕ್ಕೂ ಕರಡಿ ವಾದ್ಯ, ಜನಪದ ಕಲಾಮೇಳಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಊರಿನ ಕೇಂದ್ರ ಭಾಗದಲ್ಲಿರುವ ಈಶ್ವರ ದೇವಸ್ಥಾನದ ಬಳಿ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ಹೋಮ, ಪೂಜೆ ಕಾರ್ಯಕ್ರಮದ ಬಳಿಗೆ ಪೂರ್ಣಕುಂಭಗಳನ್ನು ಹೊತ್ತು ತರಲಾಯಿತು. ವಿಧಿವತ್ತಾಗಿ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಶುಕ್ರವಾರ ರಾತ್ರಿಯಿಂದ ಜುಲೈ 15ರವರೆಗೆ ವಿವಿಧ ರೀತಿಯ ಪೂಜಾ ಕಾರ್ಯಕ್ರಮಗಳನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ.

ಜುಲೈ 15ರಂದು ಅನ್ನಸಂತರ್ಪಣೆಯೊಂದಿಗೆ ಪೂಜಾ ಕಾರ್ಯಗಳನ್ನು ಮುಗಿಸಲಾಗುವುದು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ ತಿಳಿಸಿದರು.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಹಾಲಪ್ಪ, ಸಮಿತಿಯ ಸದಸ್ಯರು, ಮಹಿಳೆಯರು, ವಿದ್ಯಾರ್ಥಿನಿಯರು, ಗ್ರಾಮಸ್ಥರು ಪೂರ್ಣಕುಂಭ ಮೇಳ ಯಶಸ್ವಿಗೊಳಿಸಿದರು.

`ಮಳೆ ಮಲ್ಲಪ್ಪನ~ ಸೇವೆ ಆರಂಭ
ಚಿಕ್ಕಜಾಜೂರು:
ಮಳೆ ಬಾರದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಐದು ದಿನಗಳ ಕಾಲದ ಮಳೆ ಮಲ್ಲಪ್ಪನ ಸೇವೆಯನ್ನು ಶುಕ್ರವಾರ ಆರಂಭಿಸಿದರು.

ಮಳೆ ಕೈಕೊಟ್ಟಾಗ ಸಂಪ್ರದಾಯದದಂತೆ ಪರಿಶಿಷ್ಟರು ಮಳೆ ಮಲ್ಲಪ್ಪನ ಸೇವೆ ಮಾಡಿದರೆ ಮಳೆ ಬರುವುದು ಎಂಬ ನಂಬಿಕೆ ಇಲ್ಲಿದೆ. 13 ವರ್ಷದ ಬಾಲಕನನ್ನು ಅರೆ ಬೆತ್ತಲೆಯಾಗಿಸಿ ಆತನ ತಲೆಯ ಮೇಲೆ ಮಲ್ಲಪ್ಪನ ಮಾದರಿ ಪ್ರತಿಷ್ಠಾಪಿಸಿ ಗ್ರಾಮದ ಪ್ರತಿ ಮನೆಗೂ ತೆರಳಿ ಅವರು ನೀಡುವ ಅಕ್ಕಿ, ಬೇಳೆ, ಬೆಲ್ಲ, ಮೆಣಸಿನಕಾಯಿ, ಉಪ್ಪು, ತೆಂಗಿನ ಕಾಯಿ, ಅಡಿಗೆ ಎಣ್ಣೆ ಪಡೆಯಲಾಗುತ್ತದೆ.

ಮಳೆ ಮಲ್ಲಪ್ಪನ ಜತೆ ಹಟ್ಟಿಯ ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ಮಳೆರಾಯನ ಕುರಿತು ಜನಪದ ಹಾಡುಗಳ ಮೂಲಕ ಮಳೆರಾಯನನ್ನು ಓಲೈಸುವರು.

ಗ್ರಾಮಸ್ಥರು ನೀಡಿದ ದಾನ್ಯವನ್ನು ಪರಿಶಿಷ್ಟರ ಹಟ್ಟಿಯಲ್ಲಿನ ಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ಇಟ್ಟು, ಕೊನೆಯ ದಿನ ಹಟ್ಟಿಯ ಜನರು ಸೇರಿ ತಾವು ಸಂಗ್ರಹಿಸಿದ ವಸ್ತುಗಳಿಂದ ದೇವಿಗೆ ಹೋಳಿಗೆ ಅಡುಗೆ ಸಿದ್ಧಪಡಿಸುತ್ತಾರೆ. 
ದೇವಿಗೆ ಮಹಾ ಮಂಗಳಾರತಿ ಆದ ನಂತರ ಸಿಹಿ ಊಟವನ್ನು ದೇವಿಗೆ ಎಡೆ ನೀಡಿ, ಹಟ್ಟಿಯವರೆಲ್ಲಾ ಸೇರಿ ದೇವಸ್ಥಾನದ ಮುಂಭಾಗದಲ್ಲಿ ಪ್ರಸಾದ ಸ್ವೀಕರಿಸುವರು. ಇದರಿಂದ ತೃಪ್ತಿ ಹೊಂದಿದ ಮಳೆರಾಯ ಧರೆಯನ್ನು ತಣಿಸುತ್ತಾನೆ ಎಂಬ ನಂಬಿಕೆ ಇಲ್ಲಿನವರದಾಗಿದೆ.

ಕಪ್ಪೆಗಳ ಮದುವೆ

ಮಳೆಗಾಗಿ ಪ್ರಾರ್ಥಿಸಿ ಇಲ್ಲಿಗೆ ಸಮೀಪದ ಹಿರಿಯೂರು ಗ್ರಾಮದಲ್ಲಿ ಗುರುವಾರ ಕಪ್ಪೆಗಳಿಗೆ ಮದುವೆ ಮಾಡಲಾಯಿತು.

ಮುಂಗಾರಿನ ಹಿನ್ನೆಡೆಯಿಂದ ಕಂಗಾಲಾದ ರೈತರು, ಹಿಂದಿನ ಹಿರಿಯರ ಸಂಪ್ರದಾಯಕ್ಕೆ ಶರಣಾಗಿದ್ದಾರೆ. ಗ್ರಾಮದಲ್ಲಿ ಹಿರಿಯರ ಸಲಹೆಯಂತೆ, ಕಪ್ಪೆಗಳಿಗೆ ಮದುವೆ ಮಾಡಲಾಯಿತು.

ಎರಡು ದೊಡ್ಡ ಕಪ್ಪೆಗಳನ್ನು ಹಿಡಿದು ಅವುಗಳನ್ನು ತೊಳೆದು, ಬಟ್ಟೆ ಹಾಕಿ ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿ ಮದುವೆ ನಡೆಸಲಾಯಿತು.

ಗ್ರಾಮದ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯ ಎನ್.ಓ. ಚಂದ್ರಶೇಖರಪ್ಪ ಮತ್ತು ಗ್ರಾಮಸ್ಥರು ಈ ವಿಶಿಷ್ಟ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಜೋಡಿ ಕಪ್ಪೆಗಳ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದ ಮುಂದೆ ಫಲಾಹಾರ ನೀಡಲಾಯಿತು.

`ಹೋಳಿಗೆಮ್ಮ~ ಹಬ್ಬ ಆಚರಣೆ

ಮೊಳಕಾಲ್ಮುರು:
ಕೈ ಕೊಟ್ಟಿರುವ ವರುಣನ ಆಗಮನ ನಿರೀಕ್ಷೆ ಇಟ್ಟಿಕೊಂಡಿರುವ ತಾಲ್ಲೂಕಿನ ಜನತೆ ದಿನಕ್ಕೊಂದು ಆಚರಣೆಗೆ ಮುಂದಾಗಿದ್ದಾರೆ.

ಒಂದೊಂದು ಗ್ರಾಮದಲ್ಲಿ ಒಂದೊಂದು ಬಗೆ ಆಚರಣೆ ಮಾಡಲಾಗುತ್ತಿದ್ದು, ಶುಕ್ರವಾರ ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಹೋಳಿಗೆಮ್ಮ ಆಚರಣೆ ಮಾಡಲಾಯಿತು.

ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಪದಿಯಲ್ಲಿ ಹೋಳಿಗೆಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪ್ರತಿ ಮನೆಯಿಂದ ತರಲಾಗಿದ್ದ ಹೋಳಿಗೆ ಎಡೆ ಅರ್ಪಿಸಿ ಅಂತಿಮವಾಗಿ ಗ್ರಾಮದ ಹೊರಭಾಗಕ್ಕೆ ದೇವರ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT