ADVERTISEMENT

ಬರಗಾಲ ಪೀಡಿತ ತಾಲ್ಲೂಕಿನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:45 IST
Last Updated 10 ಫೆಬ್ರುವರಿ 2012, 9:45 IST

ಚಳ್ಳಕೆರೆ: ಬರಪೀಡಿತ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ವಿಪುಲ್‌ಬನ್ಸಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಳ್ಳಕೆರೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಕರೆದ ತುರ್ತು ಸಭೆಯಲ್ಲಿ ಅವರು ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಉದ್ಭವಿಸುವ ಸಮಸ್ಯೆಗಳ ಕುರಿತು ಮಾತನಾಡಿದರು.

ತಾಲ್ಲೂಕಿನ ಹುಲಿಕುಂಟೆ ಗೊಲ್ಲರಹಟ್ಟಿ, ಚೌಳೂರು ಜಗಜೀವನರಾಂ ಕಾಲೊನಿ, ಗೊರ‌್ಲತ್ತು ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಬಗ್ಗೆ ದೂರುಗಳು ಬಂದಿದ್ದು, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‌ಗಳು ಶೀಘ್ರವೇ ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದರು.

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒಗಳು ಇಂತಹ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುವ ಕೆಲಸದಲ್ಲಿ ನಿರತರಾಗಬೇಕು. ಪ್ರತೀ ದಿನವೂ ಅಧಿಕಾರಿಗಳು ಗ್ರಾಮ ಪಂಚಾಯ್ತಿಗೆ ತೆರಳಬೇಕು. ಸರ್ಕಾರಿ ಹಾಗೂ ಖಾಸಗಿ ಬೋರ್‌ವೆಲ್‌ಗಳಲ್ಲಿ ವಿನಾಕಾರಣ ಪೋಲಾಗುತ್ತಿರುವ ನೀರನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.

ಸರ್ಕಾರದ ಹಣವನ್ನು ಅಧಿಕಾರಿಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ಖರ್ಚಾಗುವಂತೆ ಮಾಡಬಾರದು. ಯೋಜನೆಗಳ ಹಣವನ್ನು ಪ್ರಾಮಾಣಿಕವಾಗಿ ವಿನಿಯೋಗಿಸಬೇಕು. ಎಂಜಿನಿಯರ್‌ಗಳು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಡಿ ಎಂದು ಆದೇಶಿಸಿದರು.

ಪ್ರಸಕ್ತ ವರ್ಷದಲ್ಲಿ ಬಂದಿರುವ ಬರಗಾಲ ಜಿಲ್ಲೆಯಲ್ಲಿ ಮುಂದಿನ ವರ್ಷಕ್ಕೂ ವಿಸ್ತರಿಸಬಹುದು. ಆದ್ದರಿಂದ, ಅಧಿಕಾರಿಗಳು ದೂರದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿ ಎನ್. ಜಯರಾಂ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರುಗಳು ಕಾಮಗಾರಿ ಮಾಡುತ್ತಿದ್ದಾರೆ ಹಾಗೂ ಜೆಸಿಬಿ ಯಂತ್ರಗಳನ್ನು ಉಪಯೋಗಿಸಿ ಕೆಲವು ಕಡೆ ಕೆಲಸ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ.

ಅದ್ದರಿಂದ ಪಿಡಿಒಗಳು ಇಂತಹ ಕಾಮಗಾರಿಗಳ ಮೇಲು ಉಸ್ತುವಾರಿ ನೋಡದಿದ್ದರೆ ಸದಸ್ಯರನ್ನು ಮತ್ತು ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಈಗಾಗಲೇ ಮನೆಗಳು ಇದ್ದರೂ ನೀಡಲಾಗಿದೆ ಎಂಬ ದೂರುಗಳು ಬರುತ್ತಿವೆ. ಈ ರೀತಿ ಸರ್ಕಾರದ ಹಣ ದುರುಪಯೋಗ ಆಗುವುದನ್ನು ಸಹಿಸುವುದಿಲ್ಲ. ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಮನೆ ನಿರ್ಮಾಣ ಮಾಡಿಕೊಳ್ಳುವಂತೆ ಪಿಡಿಒಗಳು ಕ್ರಮಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಎನ್.ಎಂ. ನಾಗರಾಜ, ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ತಿಪ್ಪುರಾವ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.