ADVERTISEMENT

ಬರದ ದವಡೆಗೆ ಸಿಲುಕಿದವರ ಬೆಂದ ಕಾಳೂರ ಪಯಣ!

ಜಡೇಕುಂಟೆ ಮಂಜುನಾಥ್
Published 15 ಮಾರ್ಚ್ 2012, 10:25 IST
Last Updated 15 ಮಾರ್ಚ್ 2012, 10:25 IST
ಬರದ ದವಡೆಗೆ ಸಿಲುಕಿದವರ ಬೆಂದ ಕಾಳೂರ ಪಯಣ!
ಬರದ ದವಡೆಗೆ ಸಿಲುಕಿದವರ ಬೆಂದ ಕಾಳೂರ ಪಯಣ!   

ಚಳ್ಳಕೆರೆ ತಾಲ್ಲೂಕಿಗೆ ಕೇವಲ 19 ಕಿ.ಮೀ. ದೂರದಲ್ಲಿರುವ ಜಡೇಕುಂಟೆ ಎಂಬ ಗ್ರಾಮ ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ಆವರಿಸಿರುವ ಬರದ ಛಾಯೆಗೆ ತತ್ತರಿಸಿ ಹತ್ತಾರು ಕುಟುಂಬಗಳು ಇಂದು ರಾಜಧಾನಿಯತ್ತ ಹೆಜ್ಜೆ ಹಾಕುತ್ತಾ ಮಾಯಾನಗರಿಯಲ್ಲಿ ತಮ್ಮ ಬದುಕು ಕಂಡುಕೊಳ್ಳುತ್ತಿವೆ.

ಇರುವ 1,200 ಮತದಾರರಲ್ಲಿ ಇಂದು ಬಹುತೇಕ ಬೆಂಗಳೂರಿನಲ್ಲಿ ತಮ್ಮ ಬದುಕನ್ನು ಸಾಗಿಸುತ್ತಾ ಅಲ್ಲಿಂದಲೇ ಕ್ಷೇಮ ಸಮಾಚಾರ ತಿಳಿಸುವ ಕುಟುಂಬಗಳು ಸದ್ಯಕ್ಕಂತೂ ತಾತ್ಕಾಲಿಕ ನೆಮ್ಮದಿಯಲ್ಲಿ ಜೀವನ ಸಾಗಿಸುತ್ತಿವೆ.

ಬಹುತೇಕ ಒಣ ಭೂಮಿಯಲ್ಲಿ ಮಳೆಯಾಶ್ರಿತ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಲ್ಲಿನ ಜನರು ಕಾಲಕ್ಕೆ ಸರಿಯಾಗಿ ಮಳೆ-ಬೆಳೆ ಆಗದೇ ಇರುವುದರಿಂದ ಮುಂದಿನ ದಿನಗಳಲ್ಲಿ ಜೀವನ ನಿರ್ವಹಣೆಗೂ ಕಷ್ಟಕರವಾಗುವ ದುಸ್ಥಿತಿಗೆ ಮುನ್ಸೂಚನೆಗಳು ಕಾಣಸಿಗುತ್ತಿವೆ.

ಇರುವ ಒಂದಿಷ್ಟು ನೀರಾವರಿ ಜಮೀನುಗಳಲ್ಲಿ ಬೆಳೆದ ಈರುಳ್ಳಿ ಈ ಬಾರಿ ರೈತರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಮೆಕ್ಕೆಜೋಳದ ಫಸಲು ಕೈಗೆ ಸಿಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲವಾಗಿದೆ. ಮಳೆ ಇಲ್ಲದೇ ಅಂತರ್ಜಲ ಮಟ್ಟದಲ್ಲಿ ಏರುಪೇರುಗಳಾಗಿ ನೀರಾವರಿ ಪಂಪ್‌ಸೆಟ್‌ಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ ಇಲ್ಲಿನದು.

ಗ್ರಾಮದ ಇತಿಹಾಸ: ಗ್ರಾಮಕ್ಕೆ ಜಡೇಕುಂಟೆ ಎಂಬ ಹೆಸರು ಬರಲು ಇಂತಹುದೇ ಎಂಬುದಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳು ಇಲ್ಲ. ಆದರೆ, ಜನಪದರು ಹೇಳುವ ಕತೆಯೊಂದು ಇಂದಿಗೂ ಚಾಲ್ತಿಯಲ್ಲಿದೆ. ಒಂದು ಕಾಲಕ್ಕೆ ಸಮೃದ್ಧ ಮಳೆ-ಬೆಳೆ ಆಗುತ್ತಿದ್ದ ಗ್ರಾಮದಲ್ಲಿ ಹೆಂಗಳೆಯರು ಮಾರುದ್ದ `ಜಡೆ~ ಹಾಕಿಕೊಂಡು ಊರ ಹೊರಗಿನ ಬಾವಿ, ಕೆರೆ-ಕುಂಟೆಯಲ್ಲಿ ನೀರು ತರುತ್ತಿದ್ದರು. ಆದ್ದರಿಂದ, `ಜಡೆ ಬಿಟ್ಟು ಕೊಂಡು ಕೆರೆ-ಕುಂಟೆಯಲ್ಲಿ ನೀರು ತರುವುದರಿಂದ `ಜಡೇಕುಂಟೆ~ ಎಂಬ ಹೆಸರು ಬಂದಿತು ಎನ್ನುತ್ತಾರೆ ಹಿರಿತಲೆಮಾರಿನವರು.

ಇಲ್ಲಿರುವ ಕಾಟಪ್ಪ ದೇವರು ಇಲ್ಲಿನ ಜನರ ಭಕ್ತಿ ಪರಾಕಾಷ್ಠೆಯ ಪ್ರತೀಕ ಎಂಬಂತೆ ಪರಂಪರೆಯಿಂದಲೂ ಗೋಚರಿಸುತ್ತಾ ಬಂದಿದ್ದಾನೆ. ಇಂದಿಗೂ ಮೈಸೂರು ದಸರಾ ಮಹೋತ್ಸವ ನಡೆಯುವ ಸಮಯದಲ್ಲೇ ಇಲ್ಲಿಯೂ ಒಂದು ವಾರಗಳ ಕಾಲ ಕಾಟಪ್ಪನ ದಸರಾ ಜಾತ್ರೆ ನಡೆಯುತ್ತದೆ.

ಮೂಲತಃ ಬುಡಕಟ್ಟು ಸಮುದಾಯದ ಕಾಟಪ್ಪ, ಒಡಮೂಡಿರುವ ಪ್ರತಿಮೆಯಾಗಿ ಇಲ್ಲಿನ ಜನರಲ್ಲಿ ಭಕ್ತಿ ಭಾವದ ಸಂಕೇತ ಎಂಬಂತೆ ಪೂಜಿಸಲ್ಪಡುತ್ತಾನೆ. ಇಂತಹ ಜಾತ್ರೆಯಲ್ಲಿ ಹತ್ತು-ಹಲವು ವೈಶಿಷ್ಟ್ಯಗಳು ನಡೆಯಲ್ಪಡುತ್ತವೆ. ದೇವರಿಗೆ ಒಂದ್ಹೊತ್ತು, ಹತ್ತು ಬೆರಳ ಆರತಿ, ಕಾಟಪ್ಪ ದೇವರ ಗುಡಿಯ ಪಕ್ಕದಲ್ಲಿರುವ ಹೊಂಡದ ನೀರನ್ನು ಮೈ ಮೇಲೆ ಹಾಕಿಕೊಂಡು ಉರುಳು ಸೇವೆ ಮಾಡುವುದು, ದೇವರ ಉಚ್ಚಯ್ಯನ ಬಂಡಿ ಕಟ್ಟುವುದು, ಅಂಬಿನೋತ್ಸವ ಮಾಡುವುದು ಹೀಗೇ ಅನೇಕ ಆಚರಣೆಗಳು ಇಂದಿಗೂ ಇಲ್ಲಿ ನಡೆಯುತ್ತಿವೆ.

ಜನಪದ ಇತಿಹಾಸ: ಈ ಕಾಟಪ್ಪ ದೇವರ ಕುರಿತು ಇಲ್ಲಿನ ಅನೇಕ ಅನಕ್ಷರಸ್ಥ ಮಹಿಳೆಯರು ಮತ್ತು ಪುರುಷರು ಜನಪದ ಕತೆ ಮತ್ತು ಸಾವಿರಾರು ಹಾಡುಗಳನ್ನು ಹಾಡುತ್ತಾರೆ. ಕಾಟಪ್ಪ ಎಂದರೆ ಅಂದುಕೊಂಡಿದ್ದನ್ನು ಈಡೇರಿಸುವ ದೈವ ಎಂಬ ನಂಬಿಕೆ ಇಂದಿಗೂ ಇಲ್ಲಿದೆ.

ಕಾಟಪ್ಪನ ಹುಟ್ಟು, ಬೆಳವಣಿಗೆ ಹಾಗೂ ಇಲ್ಲಿ ನೆಲೆಗೊಂಡು ಪರಿಯನ್ನು ಹಾಡುಗಳ ಮೂಲಕ ಸವಿಸ್ತಾರವಾದ ಜನಪದ ಮಹಾಕಾವ್ಯವನ್ನು ಇಲ್ಲಿನ ಮಹಿಳೆಯರು ಹೇಳುತ್ತಾರೆ.

ಅಭಿವೃದ್ಧಿ ಮರೀಚಿಕೆ
ಮಾಜಿ ಸಚಿವ ದಿವಂಗತ ಬಿ.ಎಲ್. ಗೌಡ ಅವರ ತವರು ಮನೆ ಎಂದೇ ಕರೆಯಲ್ಪಡುತ್ತಿದ್ದ ಜಡೇಕುಂಟೆ ಗ್ರಾಮ ಅಂದುಕೊಂಡಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎನ್ನಬಹುದಾಗಿದೆ. ಬಹುಸಂಖ್ಯಾತರಾಗಿ ಒಕ್ಕಲಿಗರಿದ್ದಾರೆ. ಇದರ ಜತೆಗೆ ಪರಿಶಿಷ್ಟ ಜಾತಿ ಹಾಗೂ ಅಲೆಮಾರಿ ಹೆಳವ, ಯಾದವ (ಗೊಲ್ಲ), ಮಡಿವಾಳ, ಕುಂಬಾರ, ಲಿಂಗಾಯಿತ ಸಮುದಾಯಗಳು ಇಲ್ಲಿರುವುದರಿಂದ ಎಲ್ಲಾರೂ ಸೌಹಾರ್ದತೆಯಿಂದ ತಮ್ಮ ಬದುಕು ಸಾಗಿಸುತ್ತಿದ್ದಾರೆ. 

ಸಾಣೀಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುವ ಜಡೇಕುಂಟೆಯಲ್ಲಿ 500 ಮನೆಗಳಿದ್ದರೂ ಕನಿಷ್ಠ 50ರಿಂದ 70 ಕುಟುಂಬಗಳು ಬೆಂದಕಾಳೂರಿನಲ್ಲಿ ಬದುಕು ಸಾಗಿಸುತ್ತಿವೆ. ಉಳಿದಂತೆ ಇಂದಿರಾನಗರ, ಬಿ.ಎಲ್. ಗೌಡ ನಗರ ಹಾಗೂ ಅಜ್ಜಿಕಟ್ಟೆ ನಗರಗಳಲ್ಲಿ ಕೆಲವರು ವಾಸಿಸುತ್ತಿದ್ದಾರೆ.

ಮೂರು ಜನ ಗ್ರಾಮ ಪಂಚಾಯ್ತಿ ಸದಸ್ಯರು ಇಲ್ಲಿನ ಮತದಾರರಿಂದ ಆರಿಸಿ ಹೋಗುತ್ತಾರೆ. ಆದರೂ, ಇಲ್ಲಿ ಸಮಸ್ಯೆಗಳ ಸರಮಾಲೆಗಳೇ ಮನೆಮಾಡಿವೆ. ಇಂದಿಗೂ ಈ ಊರಿನಲ್ಲಿ ಮಹಿಳೆಯರು ಊರಿನ ಮುಖ್ಯ ರಸ್ತೆಯಿಂದ ತಾಲ್ಲೂಕು ಕೇಂದ್ರಕ್ಕೆ ಹೋಗುವ ರಸ್ತೆ ಬದಿಯಲ್ಲೇ ಬಯಲು ಶೌಚಾಲಯಕ್ಕೆ ಮೊರೆ ಹೋಗುವುದನ್ನು ದಿನನಿತ್ಯ ಕಾಣಬಹುದಾಗಿದೆ.

ಈ ಊರಿನ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಬೆರಳೆಣಿಕೆಯಷ್ಟು. ಅದ್ದರಿಂದಲೇ ಬಯಲಿಗೆ ಮೊರೆ ಹೋಗುವುದು ಇಂದಿಗೂ ತಪ್ಪಿಲ್ಲ. ಸೂರ್ಯನ ಕಿರಣಗಳು ಭೂಮಿಗೆ ಅಪ್ಪಳಿಸುವ ಮುನ್ನ ಮತ್ತು ಹುಟ್ಟಿದ ಸೂರ್ಯ ಸಂಜೆಗೆ ಮರೆಯಾದ ಮೇಲೆಯೇ ಹೆಂಗಳೆಯರು ಬಯಲಿಗೆ ಮೊರೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ.

ಬೇರೆ ಸಮಯಗಳಲ್ಲಿ ಇಲ್ಲಿ ಓಡಾಡುವ ವಾಹನಗಳು ಹಾಗೂ ಮನುಷ್ಯರು ಬಂದಾಗಲೆಲ್ಲಾ ಎದ್ದು ನಿಲ್ಲುವ ಹೆಂಗಳೆಯರ ಗೋಳು ಮಾತ್ರ ಯಾವ ಜನಪ್ರತಿನಿಧಿಗಳ ಕಣ್ಣಿಗೂ ಕಾಣಿಸುತ್ತಿಲ್ಲ.

ಇಲ್ಲಿನ ಬಸ್‌ನಿಲ್ದಾಣದಲ್ಲಿ ತಂಗುದಾಣ ಇಲ್ಲದೇ ಅಂಗಡಿ ಮನೆ ಮುಂದೆ ಬಸ್‌ಗಳನ್ನು ಕಾಯುತ್ತಾ ನಿಲ್ಲುವುದು ಇಂದಿಗೂ ಮುಂದುವರೆದಿದೆ. ಊರಿನ ಹೆಸರು ಸೂಚಿಸುವ ಜಡೇಕುಂಟೆ ಎಂಬ ನಾಮಫಲಕವೂ ಇಲ್ಲಿ ಮಾಯವಾಗಿರುವುದು ಕಳೆದ ಐದಾರು ವರ್ಷಗಳಿಂದ ಕಂಡುಬರುತ್ತಿದೆ. ಆದರೂ, ಯಾವೊಬ್ಬ ಜನಪ್ರತಿನಿಧಿ ಹಾಗೂ ಸಂಬಂಧಿಸಿದ ಇಲಾಖೆ ಗಮನಹರಿಸಿಲ್ಲದಿರುವುದು ಎದ್ದು ಕಾಣಿಸುತ್ತಿದೆ.

ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲದೇ ಬೇಸಿಗೆ ಹಾಗೂ ಮಳೆಗಾಲದಲ್ಲಿ ಇಲ್ಲಿನ ಜನರು ಅನುಭವಿಸುವ ಯಾತನೆ ಹೇಳತೀರದಾಗಿದೆ. ಬಸ್ ನಿಲ್ದಾಣದಿಂದ ಊರೊಳಗೆ ಹೋಗಬೇಕಾದರೆ ಇಲ್ಲಿನ ರಸ್ತೆಗೆ ಹಾಸಿರುವ ಹಾಸು ಬಂಡೆ ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳ ಚಕ್ರಕ್ಕೆ ಸಿಲುಕಿ ಹೊಡೆದು ಹೋಗಿವೆ. ಕೆಲವು ಕಡೆ ಬಿರುಕು ಬಿಟ್ಟು ಓಡಾಡದ ಪರಿಸ್ಥಿತಿ ಇದೆ. ಇದರ ಕೆಳಗೆ ಇರುವ ಚರಂಡಿ ಸ್ವಚ್ಛಗೊಳಿಸಲು ಬಾರದಂತೆ ಹಾಸುಬಂಡೆ ಹಾಕಲಾಗಿದೆ.

1ರಿಂದ 5ನೇ ತರಗತಿವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಮುಂದಿನ ವಿದ್ಯಾಭ್ಯಾಸಕ್ಕೆ ಸಮೀಪದ ಕಾಪರಹಳ್ಳಿಗೆ ಹೋಗಬೇಕು. ಜಡೇಕುಂಟೆಯ ಇಂದಿರಾ ನಗರ, ಅಜ್ಜಿಕಟ್ಟೆಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಇವೆಯಾದರೂ ಅಜ್ಜಿಕಟ್ಟೆ ಶಾಲೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಮುಚ್ಚಲ್ಪಟ್ಟಿದೆ. ಇನ್ನು ಬಿ.ಎಲ್. ಗೌಡ ನಗರದಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸಬೇಕು ಎಂದು ಇಲ್ಲಿ ವಾಸಿಸುವ ನಿವಾಸಿಗಳ ಅಭಿಮತ.

ಊರಾಚೆ ಇರುವ ಬಿ.ಎಲ್. ಗೌಡ ನಗರಕ್ಕೆ ಬಸ್‌ಗಳು ಬರಬೇಕು. ಗ್ರಾಮದಿಂದ ನಗರಕ್ಕೆ ಬರುವ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲಿರುವ ಸರ್ಕಾರಿ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಲು ಸಂಬಂಧಿಸಿದ ಇಲಾಖೆ ಶ್ರಮಿಸಬೇಕು ಎಂಬುದು ಇಲ್ಲಿನವರ ಒತ್ತಾಯ.

 ಗ್ರಾಮದಲ್ಲಿ ಅಲೆಮಾರಿ ಹೆಳವ ಸಮುದಾಯದವರು ಇಲ್ಲಿರುವುದರಿಂದ ಕಳೆದ ಏಳು ವರ್ಷಗಳ ಹಿಂದೆ `ಅಲೆಮಾರಿ ಗ್ರಂಥಾಲಯ~ ಪ್ರಾರಂಭಿಸಲಾಗಿದೆ.  ಆದರೆ, ಇಲ್ಲಿ ಪುಸ್ತಕಗಳ ಕೊರೆತೆ ಎದ್ದು ಕಾಣಿಸುತ್ತಿದೆ. ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದೇ ಸಮುದಾಯ ಭವನದಲ್ಲೇ ನಡೆಯುತ್ತಿರುವುದರಿಂದ ಗ್ರಂಥಾಲಯಕ್ಕೆ ಕಟ್ಟಡದ ಅವಶ್ಯಕತೆ ಇದೆ.

ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗಳ ಸುತ್ತಮುತ್ತಲಿನಲ್ಲಿ ಗಲೀಜು ಇದ್ದರೂ ಸ್ವಚ್ಛ ಮಾಡುವ ಗೋಜಿಗೆ ಯಾರೂ ಮುಂದಾಗಿಲ್ಲ. ಇರುವ ಮೂರು ಕೈಪಂಪ್‌ಗಳು ಸೂಕ್ತ ನಿರ್ವಹಣೆ ಇಲ್ಲದೇ ಹಾಳಾಗಿವೆ.
ವಿದ್ಯುತ್ ಸಮಸ್ಯೆ ತಲೆದೋರಿದಾಗ ಸಂಭವಿಸುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಇಂತಹ ಕೈಪಂಪ್‌ಗಳು ರಿಪೇರಿ ಆಗಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.