ADVERTISEMENT

ಬರವಿದ್ದಲ್ಲಿ ಪರ್ಯಾಯ ಬೆಳೆ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 9:25 IST
Last Updated 4 ಜುಲೈ 2012, 9:25 IST

ಚಿತ್ರದುರ್ಗ: ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳ ಬಗ್ಗೆ `ಇಕ್ರಿಸ್ಯಾಟ್~ ಸಂಸ್ಥೆ ಅಧ್ಯಯನ ನಡೆಸುತ್ತಿದೆ ಎಂದು ಕೃಷಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ತಿಳಿಸಿದರು.

ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬರದ ನಾಡಿನಲ್ಲಿ ಯಾವ ಬೆಳೆ ಬೆಳೆಯಲು ಸಾಧ್ಯವಿದೆ ಎಂದು ಸಂಸ್ಥೆ ಸಂಶೋಧನಾ ಅಧ್ಯಯನ ಆರಂಭಿಸಿದೆ. ಪ್ರಸಕ್ತ ವರ್ಷ ಮುಂಗಾರು ಮಳೆಯ ಕೊರತೆಯಿಂದ ಬಿತ್ತನೆ ಕಡಿಮೆಯಾಗಿದ್ದು, ಜುಲೈ 15ರವರೆಗೆ ಶೇಂಗಾ, ರಾಗಿ ಬಿತ್ತನೆ ಮಾಡಲು ಅವಕಾಶವಿದೆ. ಆ ನಂತರವೂ ಮಳೆಬಾರದಿದ್ದಲ್ಲಿ ಪರ್ಯಾಯ ಬೆಳೆ ಬಗ್ಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರಾಸಾಯಿನಿಕ ಗೊಬ್ಬರ ಮತ್ತು ಬಿತ್ತನೆ ಬೀಜದ ದಾಸ್ತಾನಿದ್ದು, ಯಾವುದೇ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಶೇಂಗಾ ಬಿತ್ತನೆಬೀಜ ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಲಾಗುತ್ತಿದೆ. ಆದರೆ, ಪ್ರಾಮಾಣಿಕೃತ ಬಿತ್ತನೆ ಬೀಜವನ್ನು ರೈತರಿಂದ ಬೆಳೆಯಿಸಿ ಖರೀದಿ ಮಾಡಲಾಗುತ್ತದೆ. ಬಿತ್ತನೆ ಬೀಜವಾಗಿದ್ದರಿಂದ ವೈಜ್ಞಾನಿಕವಾಗಿ ಇಂತಹ ಬೀಜಗಳ ಸಂಸ್ಕರಣೆ ಮಾಡಬೇಕಾಗುತ್ತದೆ. ನಿರ್ವಹಣೆ, ಸಾಗಣೆ ವೆಚ್ಚ ಸೇರಿರುವುದರಿಂದ ಸಹಜವಾಗಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿರುತ್ತದೆ. ಆದರೆ ಇದು ಪ್ರಾಮಾಣಿತ ಬೀಜವಿದು. ಇದರಿಂದ ಹೆಚ್ಚಿನ ಇಳುವರಿ ಸಾಧ್ಯವಿದೆ ಎಂದು ಬೀಜ ನಿಗಮದ ಅಧಿಕಾರಿ ಕಾರ್ಯದರ್ಶಿಗೆ ತಿಳಿಸಿದರು.

 ಜಲಾನಯನ ಇಲಾಖೆಯಲ್ಲಿ ಕಿರು ಜಲಾನಯನ ಯೋಜನೆಗಳ ಮೂಲಕ ಸ್ವ ಸಹಾಯ ಗುಂಪುಗಳನ್ನು ರಚಿಸಿ ಚಟುವಟಿಕೆ ಕೈಗೊಳ್ಳಲು ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ ಇಂತಹ ಸೌಲಭ್ಯಗಳು ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ  ಸೌಲಭ್ಯಗಳು ಇದಕ್ಕೆ ಸೇರಬಾರದು.
ಜಲಾನಯನ ಇಲಾಖೆಯಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಡಿ ಜಲ ಸಂರಕ್ಷಣೆ ಕಾರ್ಯಕ್ಕೆ ಅವಕಾಶವಿದ್ದು, ಇದಕ್ಕಾಗಿ ಕ್ರಿಯಾ ಯೋಜನೆ ಮಾಡಿಕೊಳ್ಳಬೇಕು ಎಂದು ಜಲಾನಯನ ಇಲಾಖೆ ಅಧಿಕಾರಿಗೆ ತಿಳಿಸಿದರು.

ರಾಸಾಯಿನಿಕ ಗೊಬ್ಬರವನ್ನು ನಿಗದಿತ ಬೆಲೆಗೆ ಮಾತ್ರ ಮಾರಾಟ ಮಾಡುವುದು ಕಡ್ಡಾಯ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಗಮನ ನೀಡಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿ.ಪಂ. ಸಿಇಒ ಗೋಪಾಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.