ADVERTISEMENT

ಬಿಆರ್‌ಜಿಎಫ್ ಯೋಜನೆಯಲ್ಲಿ ದುರುಪಯೋಗ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:25 IST
Last Updated 14 ಅಕ್ಟೋಬರ್ 2011, 8:25 IST

ಚಿತ್ರದುರ್ಗ: ಬಿಆರ್‌ಜಿಎಂ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೊನಿಗಳಿಗೆ ಸೋಡಿಯಂ ದೀಪಗಳನ್ನು ಅಳವಡಿಸುವಲ್ಲಿ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಇಲ್ಲಿನ ತಾಲ್ಲೂಕು ಪಂಚಾಯ್ತಿ ಸದಸ್ಯರು ಆರೋಪಿಸಿದ್ದಾರೆ.

2009-10ನೇ ಸಾಲಿನಲ್ಲಿ ಬಿಆರ್‌ಜಿಎಫ್ ಯೋಜನೆ ಅಡಿಯಲ್ಲಿ ಸಮರ್ಪಕವಾಗಿ ಸೋಡಿಯಂ ದೀಪಗಳನ್ನು ಅಳವಡಿಸಿಲ್ಲ. ಈ ದೀಪಗಳನ್ನು ಅಳವಡಿಸುವಲ್ಲಿ ಲೋಪದೋಷಗಳು ಕಂಡು ಬಂದಿವೆ. ಕೆಲವೆಡೆ ದೀಪಗಳನ್ನು ಹಾಕದಿದ್ದರೂ ಗ್ರಾ.ಪಂ. ಕಾರ್ಯದರ್ಶಿ ದೃಢೀಕರಣ ಪತ್ರ ನೀಡಿದ್ದಾರೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಹ ತಪಾಸಣೆ ಮಾಡದೆ ಬಿಲ್ ಪಾವತಿಸಿದ್ದಾರೆ ಎಂದು ದೂರಿದ್ದಾರೆ.

2010-11ನೇ ಸಾಲಿನ 13ನೇ ಹಣಕಾಸಿನ ಯೋಜನೆ ಅಡಿಯಲ್ಲೂ ಹಣ ದುರುಪಯೋಗವಾಗಿದೆ ಎಂದು ಸದಸ್ಯರು ದೂರಿದ್ದಾರೆ.

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ ತೀರ್ಮಾನವಾಗದ ವಿಷಯಗಳನ್ನು ಟೆಂಡರ್ ಕರೆಯದೆ ಕಾಮಗಾರಿ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಗೂ ಮತ್ತು ವಾರ್ತಾ ಇಲಾಖೆ ಕಚೇರಿಗೂ ಟೆಂಡರ್ ಪ್ರತಿ ಕಳುಹಿಸಿಲ್ಲ. 13ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಕೆಲವು ಶಾಲೆಗಳಿಗೆ ಡೆಸ್ಕ್ ವಿತರಿಸಲಾಗಿದೆ ಮತ್ತು ಕೆಲವು ಶಾಲೆಗಳಿಗೆ ವಿತರಿಸಿಲ್ಲ. ಆದರೆ, ಈಗಾಗಲೇ ಹಣ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಎರಡು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ತಾ.ಪಂ. ಉಪಾಧ್ಯಕ್ಷೆ ಟಿ.ಎಂ. ನಿರ್ಮಲಾ, ಕೆ. ಸಿರುವಲ್ಲಪ್ಪ, ಪಿ. ಹಂಪೇಶ್, ಆರ್. ಪರಮೇಶ್ವರ, ಟಿ.ಜಿ. ಶೇಖರಪ್ಪ, ಕೊಂಚೆ ಸತೀಶ್, ಮೀಟ್ಯಾನಾಯ್ಕ, ಮಂಜುಳಾ, ಕಮಲಮ್ಮ, ಎಸ್. ಸುಧಾ, ತಿಪ್ಪೇಸ್ವಾಮಿ, ಎಂ.ಜೆ. ಸಾಕಮ್ಮ, ಕುಮಾರಸ್ವಾಮಿ, ಲಕ್ಷ್ಮೀದೇವಿ, ವತ್ಸಲಾಪ್ರಭು, ಲಕ್ಷ್ಮೀಬಾಯಿ, ರಾಜಕುಮಾರ್ ಮನವಿ ಸಲ್ಲಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.