ADVERTISEMENT

`ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಸೇರಲಿ'

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 11:11 IST
Last Updated 11 ಡಿಸೆಂಬರ್ 2012, 11:11 IST

ಚಿತ್ರದುರ್ಗ: ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಬಿ.ಜೆ. ಪುಟ್ಟಸ್ವಾಮಿ ಅವರು ಸಚಿವರಾಗಿದ್ದ ಅವಧಿಯಲ್ಲಿ  ಭ್ರಷ್ಟಾಚಾರದಲ್ಲಿ ತೊಡಗಿ ಅಕ್ರಮ ಹಣ ಗಳಿಸಿದ್ದಾರೆ. ಇಂತಹ ಅಧಿಕಾರಿಗಳನ್ನು ಬೇರೆಡೆಗೆ ವರ್ಗ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಸಿದ್ದೇಶ್ ಯಾದವ್ ತಿಳಿಸಿದರು.

ಸಹಕಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ.   ಬಿಜೆಪಿಯಲ್ಲಿದ್ದುಕೊಂಡು ಸಚಿವರಾಗಿ ಕೆಜೆಪಿ ಪರ ಕೆಲಸ ಮಾಡಿದ್ದಾರೆ. ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಹಣ ನೀಡಿ ಜನರನ್ನು ಸಂಘಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಲಾಗಿತ್ತು. ಅದರಂತೆ ಸರ್ಕಾರ ಅವರನ್ನು ಕೈಬಿಟ್ಟಿರುವುದು ಸ್ವಾಗರ್ತಾಹವಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೊಳಲ್ಕೆರೆ ಶಾಸಕ ಸೇರಿದಂತೆ ಮತ್ತಿತರರು ಕೆಜೆಪಿಯತ್ತ ಒಲವು ತೋರಿದ್ದು ಅವರ ವಿರುದ್ಧವೂ ಶಿಸ್ತುಕ್ರಮ ಜರುಗಿಸುವಂತೆ ಪಕ್ಷದ ಹೈಕಮಾಂಡ್ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.ಬಹು ದಿನಗಳಿಂದ ಜಿಲ್ಲೆಗೆ ಯಾವುದೇ ಮಂತ್ರಿ ಸ್ಥಾನ ದೊರೆತಿಲ್ಲ. ಈ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಅವರಿಗೆ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ವಹಿಸಬೇಕು. ಅದರಂತೆ ಜಿಲ್ಲೆಯವರಿಗೆ ಯಾವುದಾದರೂ ನಿಗಮ ಮಂಡಳಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.

ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಲು ಅಭ್ಯಂತರವಿಲ್ಲ. ಆದರೆ, ಅದಕ್ಕೂ ಮುನ್ನ ಪಕ್ಷ ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರಲಿ. ಜಿಲ್ಲೆಯಲ್ಲಿ ಪಕ್ಷದಲ್ಲಿದ್ದು, ಬೇರೆ ಪಕ್ಷಕ್ಕೆ ಬೆಂಬಲ ನೀಡುತ್ತಿರುವವರ ವಿರುದ್ಧ ಜಿಲ್ಲಾ ಸಮಿತಿ ರಾಜ್ಯ ಮಂಡಳಿಗೆ ವರದಿ ನೀಡಲಿದೆ. ಡಿ.12 ರಂದು ಬೆಳಗಾವಿಯಲ್ಲಿ ರಾಜ್ಯದ ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನು ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರು ನಡೆಸಲಿದ್ದಾರೆ. ಅಂದು ಜಿಲ್ಲೆಯ ಸ್ಥಿತಿಯನ್ನು ವಿವರಿಸಲಾಗುವುದು ಎಂದು ಸಿದ್ದೇಶ್ ಹೇಳಿದರು.

ಹೊಳಲ್ಕೆರೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಕ್ಷದ ಕೆಲವು ಜಿ.ಪಂ. ಸದಸ್ಯರು ಭಾಗವಹಿಸಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ. ಅವರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ ಎಂದರು.

ಡಿ. 13ರಂದು ಚಳ್ಳಕೆರೆಯಲ್ಲಿ ಬಿಜೆಪಿ ಕಾರ್ಯರ್ತರ ಸಭೆ ನಡೆಸಲಾಗುವುದು. ಡಿಸೆಂಬರ್ ಅಂತ್ಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸಮಾವೇಶ ನಡೆಸಲಾಗುವುದು. ನಂತರ ಪರಿಶಿಷ್ಟ ಜಾತಿ, ಪಂಗಡ ಮೋರ್ಚಾದ ಸಮಾನ್ಯ ಸಭೆಗಳನ್ನು ನಡೆಸಲಾಗುವುದು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಭೆಗಳನ್ನು ನಡೆಸಿ ಕಾರ್ಯಕರ್ತರ ಜತೆ ಚರ್ಚಿಸಲಾಗುವುದೆಂದರು.

ರಾಜ್ಯ ರೈತ ಮೋರ್ಚಾ ಖಜಾಂಚಿ ಜಿ.ಎಂ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದರಿನಾಥ್, ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷ ನರೇಂದ್ರ, ಎಚ್.ಎಂ. ಮೋಹನ್ ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.