ಹೊಳಲ್ಕೆರೆ: ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದೆ. ರಾತ್ರಿ 10ಕ್ಕೆ ಆರಂಭವಾದ ಮಳೆ 11.30ರವರೆಗೆ ಎಡೆಬಿಡದೆ ಸುರಿಯಿತು. ಬಿರುಸಿನ ಮಳೆಯಿಂದ ಪಟ್ಟಣದ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯಿತು. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಮಳೆಯೊಂದಿಗೆ ಗುಡುಗು, ಮಿಂಚು, ಸಿಡಿಲಿನ ಆರ್ಭಟ ಜೋರಾಗಿತ್ತು.
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬಿರುಸಿನ ಮಳೆ ಸುರಿದಿದೆ. ತಾಲ್ಲೂಕಿನ ಈಚಘಟ್ಟದಲ್ಲಿ ಗೀತಮ್ಮ ಎಂಬುವರ ಮನೆಯ ಮೇಲೆ ಬೃಹತ್ ನೀಲಗಿರಿ ಮರಗಳು ಬಿದ್ದಿದ್ದರಿಂದ ಮನೆ ಸಂಪೂರ್ಣ ಜಖಂ ಆಗಿದೆ. ಗೀತಮ್ಮ ಅವರ ಕುಟುಂಬ ಬೀದಿಪಾಲಾಗಿದೆ.
ಪಟ್ಟಣದ ಸಿದ್ದರಾಮಪ್ಪ ಬಡಾವಣೆಯಲ್ಲಿ ಮನೆ ನೆಲಕಚ್ಚಿದೆ. ಮಳೆಹಾನಿಗೆ ಒಳಗಾದ ಪ್ರದೇಶಕ್ಕೆ ಶುಕ್ರವಾರ ಚುನಾಯಿತ ಸದಸ್ಯ ಎಂ.ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ್, ಎಪಿಎಂಸಿ ಸದಸ್ಯ ಈಶ್ವರಪ್ಪ ಭೇಟಿ ನೀಡಿದರು.
ಭಾರೀ ಮಳೆಯಿಂದ ಹಳ್ಳಗಳಲ್ಲಿ ನೀರು ಹರಿದಿದ್ದು, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹ ಆಗಿದೆ. ಅಂತರ್ಜಲ ಕುಸಿತದಿಂದ ಕಂಗೆಟ್ಟಿದ್ದ ಅಡಿಕೆ ಬೆಳೆಗಾರರು ಹದಮಳೆ ಸುರಿದ್ದರಿಂದ ಸಂತಸಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.