ADVERTISEMENT

ಭೂ ಸ್ವಾಧೀನ ಪ್ರಕ್ರಿಯೆ ಚಾಲನೆಗೆ ಒತ್ತಾಯ

ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 4:55 IST
Last Updated 5 ಜುಲೈ 2013, 4:55 IST

ಚಿತ್ರದುರ್ಗ:  `ಚಿತ್ರದುರ್ಗ- ತುಮಕೂರು-  ಬೆಂಗಳೂರು ನಡುವಿನ ನೇರ ರೈಲು ಮಾರ್ಗ ಯೋಜನೆಯ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು, ವರದಿಗೆ ರೈಲ್ವೆ ಮಂಡಳಿಯಿಂದ ಅನುಮೋದನೆಯೂ ದೊರೆತಿದೆ. ರಾಜ್ಯ ಸರ್ಕಾರ ಯೋಜನೆಗೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ' ಎಂದು ಚಿತ್ರದುರ್ಗ ಜಿಲ್ಲಾ ರೈಲ್ವೆ ಹೋರಾಟ ಸಮಿತಿಯ ಅಧ್ಯಕ ಪಿ.ಕೋದಂಡರಾಮಯ್ಯ ಅಭಿಪ್ರಾಯ ಪಟ್ಟರು.

ನಗರದಲ್ಲಿ ಗುರುವಾರ ನಡೆದ ರೈಲ್ವೆ ಹೋರಾಟ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಮೋದನೆ ದೊರೆತಿರುವ ಜಂಟಿ ಸಮೀಕ್ಷಾ ವರದಿಯನ್ನು ಕೇಂದ್ರ ರೈಲ್ವೆ ಸಚಿವಾಲಯ ರಾಜ್ಯ ಸರ್ಕಾರಕ್ಕೆ ರವಾನಿಸಿ, ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚನೆ ನೀಡಬೇಕು. ಹಾಗೆಯೇ ರೈಲ್ವೆ ಮಂಡಳಿಗೆ ಸಲ್ಲಿಸಿರುವ ಯೋಜನೆಯ ಅಂದಾಜು ವೆಚ್ಚಕ್ಕೆ ಒಪ್ಪಿಗೆ ನೀಡಬೇಕು ಎಂದು ಅವರು  ಒತ್ತಾಯಿಸಿದರು.

ಜಂಟಿ ಸಮೀಕ್ಷೆ ಸಮಿತಿ ರೈಲ್ವೆ ಮಾರ್ಗಕ್ಕಾಗಿ 1900 ಎಕರೆ ಭೂಮಿ ಯನ್ನು ಗುರುತಿಸಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಭೂಮಿಯನ್ನು ಉಚಿತವಾಗಿ ನೀಡಲು ಒಪ್ಪಿಕೊಂಡಿತ್ತು. ಯಾವುದೇ ಪಕ್ಷದ ಸರ್ಕಾರವಿರಲಿ, ಇದು ರಾಜ್ಯ ಸರ್ಕಾರದ ಬದ್ಧತೆಯ ಪ್ರಶ್ನೆಯಾಗಿದೆ. ಹಾಗಾಗಿ ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಆ ಬದ್ಧತೆಯನ್ನು ಒಪ್ಪಿ ಕೊಂಡು ಯೋಜನೆಗೆ ಸಹಕಾರ ನೀಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಬೇಕಾದ ಹಣವನ್ನು ಮೀಸಲಿಡಬೇಕೆಂದು ಅವರು ಒತ್ತಾಯಿಸಿದರು.

ರೈಲ್ವೆ ಯೋಜನೆಗೆ ತಗಲುವ ಒಟ್ಟು ವೆಚ್ಚದ ಅರ್ಧ ಭಾಗವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಉಳಿದದ್ದನ್ನು ರಾಜ್ಯ ಸರ್ಕಾರ ನೀಡಬೇಕು. ಯೋಜನೆಗೆ ಉಚಿತವಾಗಿ ಭೂಮಿ ನೀಡಲು ಒಪ್ಪಿರುವುದರಿಂದ ಯೋಜನೆಯ ಶೇ 75 ಭಾಗದಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸ ಬೇಕಾಗಿದೆ ಎಂದರು. ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಂಡರೆ, ಯೋಜನೆ ತ್ವರಿತಗತಿಯಲ್ಲಿ ಮುಂದುವರಿಯಲು ಸಹಾಯವಾಗುತ್ತದೆ ಎಂದರು.

ಮುಂದಿನ ತಿಂಗಳು ರೈಲ್ವೆ ಹೋರಾಟ ಸಮಿತಿಯ ನಿಯೋಗ ರೈಲ್ವೆ ಸಚಿವರನ್ನು ಭೇಟಿಯಾಗಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವರಿಕೆ ಮಾಡಿ ಕೊಡಲಿದೆ. ಹಾಗೆಯೇ ಮುಖ್ಯಮಂತ್ರಿ ಅವರ ಬಳಿಗೆ ನಿಯೋಗ ಕೊಂಡೊಯ್ದು, ರಾಜ್ಯ ಸರ್ಕಾರ ನೀಡಬೇಕಾದ ಸಹಕಾರದ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಕೋದಂಡರಾಮಯ್ಯ ತಿಳಿಸಿದರು.

ರೈಲ್ವೆ ಸಚಿವರ ಪ್ರಕಾರ ಇಲಾಖೆಯಲ್ಲಿ ಸಂಪನ್ಮೂಲಗಳ ಕೊರತೆ ಇದೆ. ರಾಜಕೀಯ ಪ್ರಭಾವದಿಂದಾಗಿ   ಸುಮ್ಮನೆ ರೈಲ್ವೆ ಯೋಜನೆಗಳನ್ನು ಘೋಷಿಸಲಾಗಿದೆ. ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಘೋಷಣೆಯಾಗಿರುವ ರೈಲ್ವೆ ಯೋಜನೆಗಳ ಪೊರೈಸಲು ರೂ. 1.75 ಸಾವಿರ ಕೋಟಿ  ಅಗತ್ಯವಿದೆ. ನಮ್ಮ ರಾಜ್ಯದಲ್ಲಿ ಘೋಷಣೆಯಾಗಿರುವ ಹೊಸ ರೈಲ್ವೆ ಮಾರ್ಗಗಳ ಅನುಷ್ಠಾನಕ್ಕೆ ರೂ. 17 ಸಾವಿರ ಕೋಟಿ ಅವಶ್ಯಕತೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ಮುಂದೆ ಪ್ರತಿ ತಿಂಗಳ ಎರಡನೇ ಶನಿವಾರ ರೈಲ್ವೆ ಹೋರಾಟ ಸಮಿತಿ  ಸಭೆ ಸೇರಬೇಕೆಂದು ಇಂದು ನಡೆದ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ರಮಾ ನಾಗರಾಜ್, ಮುರುಘರಾಜೇಂದ್ರ ಒಡೆಯರ್, ಎನ್.ಇ.ನಾಗರಾಜ್, ಶಿವಣ್ಣ, ಶಿವುಯಾದವ್, ತಾರಾನಾಥ್, ಟಿ.ಶಫೀವುಲ್ಲಾ, ವಿಜಯ ಹಾಜರಿದ್ದರು.

ಮುಖ್ಯಾಂಶಗಳು...
ಕೇಂದ್ರ ಸಂಪುಟ ಪುನರ್‌ರಚನೆ ಮತ್ತು ರಾಜ್ಯದಲ್ಲಿ ಚುನಾವಣೆ ಚಾಲ್ತಿಯಲ್ಲಿದ್ದ ಕಾರಣ ರೈಲ್ವೆ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಈ ಹಿಂದೆ ರೈಲ್ವೆ ಸಚಿವರಾಗಿದ್ದ ಮುನಿಯಪ್ಪ ಅವರನ್ನು ಯೋಜನೆ ಅನುಷ್ಠಾನಕ್ಕಾಗಿ ಸಾಕಷ್ಟು ಒತ್ತಾಯಿಸಲಾಗಿದೆ. ಆದರೆ ಭೂಮಿ ಸ್ವಾಧೀನ ಪ್ರಕ್ರಿಯೆ ಮತ್ತು ಸಮೀಕ್ಷಾ ಕಾರ್ಯ ತಡವಾಗಿದ್ದರಿಂದ ಯೋಜನೆ ಕುಂಟುತ್ತಾ ಸಾಗುತ್ತಿದೆ. ಇದನ್ನು ಸ್ವತಃ ರೈಲ್ವೆ ಸಚಿವರೇ  ಒಪ್ಪಿಕೊಂಡಿದ್ದಾರೆ.
ಯೋಜನೆ ಶೀಘ್ರ ಅನುಷ್ಠಾನಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬಹುದೇ ವಿನಃ ಪ್ರತಿಭಟನೆ ಮುಷ್ಕರಗಳಲ್ಲಿ ಭಾಗಿಯಾಗುವುದಿಲ್ಲ.
- ಪಿ.ಕೋದಂಡರಾಮಯ್ಯ, ಅಧ್ಯಕ್ಷರು, ಜಿಲ್ಲಾ ರೈಲ್ವೆ ಹೋರಾಟ ಸಮಿತಿ

ರೈಲ್ವೆ ಹೋರಾಟ ಸಮಿತಿ ಸಭೆ ಕಡ್ಡಾಯವಾಗಿ ನಡೆಯಬೇಕು. ನಿರಂತರವಾಗಿ ಸಭೆ ನಡೆದಾಗ ಸಮಿತಿ ಚಾಲ್ತಿಯಲ್ಲಿರುತ್ತದೆ. ಸಂಪುಟ ವಿಸ್ತರಣೆ, ಚುನಾವಣೆಯ ನೆಪ ಹೇಳಿಕೊಂಡು ಸಭೆ ನಡೆಸದಿರುವುದು ಸರಿಯಲ್ಲ. ಇಂಥ ಸಭೆಗೆ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಶಾಸಕರು, ಸಂಸದರನ್ನು ಆಹ್ವಾನಿಸಿ, ಸಾಧಕ ಬಾಧಕಗಳನ್ನು ಚರ್ಚಿಸಬೇಕು.
ಚಿತ್ರಲಿಂಗಪ್ಪ, ಸಮಿತಿ ಪದಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT