ADVERTISEMENT

ಮತ್ತಷ್ಟು ಕಗ್ಗಂಟ್ಟಾದ ಬಿಜೆಪಿ ಟಿಕೆಟ್‌ ಬಿಕ್ಕಟ್ಟು

ಮೊಳಕಾಲ್ಮುರು: ತಿಪ್ಪೇಸ್ವಾಮಿ ಬೆಂಬಲಿಗರಿಂದ ಪ್ರತಿಭಟನೆ, ಮತ್ತೊಂದು ಬಣದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 10:08 IST
Last Updated 11 ಏಪ್ರಿಲ್ 2018, 10:08 IST

ಮೊಳಕಾಲ್ಮುರು: ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರಿಗೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದ ನಂತರ ಮೊಳಕಾಲ್ಮುರು ರಾಜ್ಯದ ಗಮನ ಸೆಳೆಯುತ್ತಿದೆ.ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ದೊರೆಯಲಿದೆ ಎಂಬ ನಿರೀಕ್ಷೆ ಒಮ್ಮೆಲೇ ತಲೆಕೆಳಗಾಗಿದೆ. ಈ ಪರಿಣಾಮ ಬಿಜೆಪಿಯಲ್ಲಿ ಅತೃಪ್ತಿಯ ಅಲೆ ಎಬ್ಬಿಸಿದೆ. ಪಕ್ಷದೊಳಗೆ ಅಸಮಾಧಾನ ತೀವ್ರಗೊಂಡಿದ್ದು, ಕಾರ್ಯಕರ್ತರು ಪ್ರತಿಭಟನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.

ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಮೊಳಕಾಲ್ಮುರಿನಿಂದ ರಾಮುಲು ಸ್ಪರ್ಧೆ ಮಾಡಿದರೆ ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳ ಮೀಸಲು ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಿ ಗೆಲ್ಲಲು ಸಾಧ್ಯವಾಗಲಿದೆ ಎಂಬುದು ರಾಮುಲು ಸ್ಪರ್ಧೆಗೆ ಪಕ್ಷ ನೀಡುತ್ತಿರುವ ಉತ್ತರ. ಆದರೆ, ಇದು ತಿಪ್ಪೇಸ್ವಾಮಿ ವಿಷಯದಲ್ಲಿ ಸರಿಯಲ್ಲ. ಯಾವ ತಪ್ಪೂ ಮಾಡದ ತಿಪ್ಪೇಸ್ವಾಮಿಗೆ ಟಿಕೆಟ್‌ ತಪ್ಪಿಸುವ ಬದಲು ಚಳ್ಳಕೆರೆಯಿಂದ ಸ್ಪರ್ಧೆ ಮಾಡಲು ಸಾಧ್ಯವಿತ್ತು. ಇದನ್ನು ಪರಿಗಣಿಸಬೇಕಿತ್ತು ಎಂದು ಬೆಂಬಲಿಗರು ಪ್ರಶ್ನೆ ಮಾಡಿದರು.

ಟಿಕೆಟ್‌ ತಪ್ಪಿರುವ ಬಗ್ಗೆ ಪ್ರಶ್ನಿಸಲು ಸೋಮವಾರ ಬೆಂಗಳೂರಿನಲ್ಲಿ ತಿಪ್ಪೇಸ್ವಾಮಿ ಬೆಂಬಲಿಗರ ಜತೆ ಹೋಗಿದ್ದಾಗ ಯಡಿಯೂರಪ್ಪ, ‘ಈ ವಿಷಯವನ್ನು ರಾಮುಲು ಮತ್ತು ನೀವು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ರಾಮುಲು ಒಪ್ಪಿದರೆ ಟಿಕೆಟ್‌ ನೀಡುವ ಬಗ್ಗೆ ಪರಿಶೀಲಿಸೋಣ. ಉಳಿದಿದ್ದು ನಮ್ಮ ಕೈಯಲ್ಲಿಲ್ಲ ಎಂದು ಹೇಳಿದರು’ ಎನ್ನಲಾಗಿದೆ.

ADVERTISEMENT

ಈ ಬಗ್ಗೆ ಮಂಗಳವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ,‘ಯಡಿಯೂರಪ್ಪ ರಾಮುಲು ಜತೆ ಚರ್ಚಿಸುವಂತೆ ಹೇಳಿದ್ದಾರೆ. ಆಗಿನಿಂದಲೂ ಸಂಪರ್ಕಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಅವರು ಕರೆ ಸ್ವೀಕರಿಸುತ್ತಿಲ್ಲ. ಗುರುವಾರ ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ವಿಜಯೋತ್ಸವ: ಶ್ರೀರಾಮುಲುಗೆ ಟಿಕೆಟ್‌ ನೀಡಿರುವುದನ್ನು ಸ್ವಾಗತಿಸಿ ಕ್ಷೇತ್ರಬಿಜೆಪಿಯ ಒಂದು ಬಣದ ಕಾರ್ಯಕರ್ತರು ಮಂಗಳವಾರ ರಾಂಪುರ, ಮೊಳಕಾಲ್ಮುರು, ಕೋನಸಾಗರ, ನಾಗಸಮುದ್ರ, ಕೊಂಡ್ಲಹಳ್ಳಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ಶ್ರೀರಾಮುಲು ಸ್ಪರ್ಧೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇಲ್ಲಿ ಪಕ್ಷ ಗೆಲ್ಲುವುದು ಶತಸಿದ್ದ, ಬಿಜೆಪಿ ಸರ್ಕಾರ ಬಂದರೆ ರಾಮುಲು ಮಂತ್ರಿ ಆಗಲಿದ್ದಾರೆ. ಸ್ಪರ್ಧೆ
ಕಾರ್ಯಕರ್ತರಲ್ಲಿ ಚೈತನ್ಯ ಮೂಡಿಸಿದೆ ಎಂದು ಮುಖಂಡ ಎಚ್.ಟಿ. ನಾಗೀರೆಡ್ಡಿ ಹೇಳಿದರು.

ಮಂಡಲ ಅಧ್ಯಕ್ಷ ಟಿ. ರೇವಣ್ಣ, ಮುಖಂಡರಾದ ರಾಮಕೃಷ್ಣ, ಮಹೇಶ್‌, ನಾಗರಾಜ್‌, ಶ್ರೀರಾಮರೆಡ್ಡಿ, ತಿಪ್ಪೇಸ್ವಾಮಿ, ವಸಂತಕುಮಾರ್‌, ಜಿಂಕಲು ಬಸವರಾಜ್‌, ಶಾಂತಾರಾಂ ಬಸಾಪತಿ, ಚನ್ನಬಸಪ್ಪ, ಪರಮೇಶ್ವರಪ್ಪ ಇದ್ದರು.

ಸಭೆ ನಂತರ ತೀರ್ಮಾನ

ತಾಲ್ಲೂಕು ಯಾದವ ಸಮಾಜದಿಂದ ಈ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬ ಬಗ್ಗೆ ತೀರ್ಮಾನ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು. ಪಟ್ಟಣದ ಯಾದವ ವಿದ್ಯಾರ್ಥಿ ನಿಲಯ ಆವರಣದಲ್ಲಿ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಮಾಜದ ತಾಲ್ಲೂಕು ಅಧ್ಯಕ್ಷ ಗುಂಡ್ಲೂರು ಕರಿಯಣ್ಣ, ಕಾರ್ಯದರ್ಶಿ ವೆಂಕಟೇಶ್‌ ತಿಳಿಸಿದ್ದಾರೆ.

ಇಂದು ಪ್ರತಿಭಟನೆ

ತಿಪ್ಪೇಸ್ವಾಮಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಬೆಂಬಲಿಗರು ಬುಧವಾರವೂ ಪ್ರತಿಭಟನೆ ನಡೆಸಲಿದ್ದಾರೆ.ಮೊದಲಿಗೆ ಮೊಳಕಾಲ್ಮುರು, ನಾಯಕನಹಟ್ಟಿ, ರಾಂಪುರದಲ್ಲಿ ಪ್ರತಿಭಟನೆ ನಡೆಸಿ, ನಂತರ ಬಳ್ಳಾರಿಯಲ್ಲಿ ಶ್ರೀರಾಮುಲು ಮನೆ ಎದುರು ಧರಣಿ ನಡೆಸಲಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮರಿಪಾಲಯ್ಯ ತಿಳಿಸಿದ್ದಾರೆ.

– ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.