ADVERTISEMENT

ಮರಳು ಗಣಿಗಾರಿಕೆ ತಡೆಗೆ ಕಡಿವಾಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 6:35 IST
Last Updated 1 ಅಕ್ಟೋಬರ್ 2017, 6:35 IST

ಹೊಸದುರ್ಗ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು. ತಾಲ್ಲೂಕಿನ ಕೊರಟಿಕೆರೆ ಬಳಿ ಭರ್ತಿಯಾಗಿದ್ದ ಬ್ರಿಡ್ಜ್‌ ಕಂ ಬ್ಯಾರೇಜ್‌ಗೆ ಶುಕ್ರವಾರ ಬಾಗಿನ ಅರ್ಪಿಸಿದ ಬಳಿಕ ನಡೆದ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿಗೆ ಕಳೆದೆರಡು ವರ್ಷದಿಂದ ಸಮರ್ಪಕವಾಗಿ ಮಳೆ ಬಂದಿಲ್ಲ. ಈ ಬಾರಿ ಮುಂಗಾರು ಕೈಕೊಟ್ಟಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದರ್ಭದಲ್ಲಿ ಪುಬ್ಬೆ, ಉತ್ತರೆ ಹಾಗೂ ಹಸ್ತೆ ಮಳೆ ಬಂದಿರುವುದರಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿರಬಹುದು. ಆದರೆ ಈ ಬಾರಿ ಮುಂಗಾರು ಮಳೆ ಬಂದಿದ್ದರೆ ಸಾವಿರಾರು ಹೆಕ್ಟೇರ್‌ ಪ್ರದೇಶದ ಅಡಿಕೆ, ತೆಂಗು ಮರಗಳು ಒಣಗುತ್ತಿರಲಿಲ್ಲ ಎಂದು ತಿಳಿಸಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, "ಕಳೆದ ಇಪ್ಪತ್ತು ದಿನಗಳಿಂದ ತಾಲ್ಲೂಕಿನೆಲ್ಲೆಡೆ ಹದವಾಗಿ ಬಂದಿದೆ. ಇದರಿಂದ ಹಲವೆಡೆ ಕಟ್ಟಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಭರ್ತಿಯಾಗಿವೆ. ಬೆಳೆಗಳಿಗೆ ಜೀವಕಳೆ ಬಂದಿದ್ದು ರೈತರು ಸಂತಸಗೊಂಡಿದ್ದಾರೆ. ಸಂಗ್ರಹವಾಗಿರುವ ನೀರನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಆ ಮೂಲಕ ಅಂತರ್ಜಲ ಹೆಚ್ಚಿಸಬೇಕು' ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, "ತಾಲ್ಲೂಕಿನಲ್ಲೆಡೆ ಅಂತರ್ಜಲ ಮಟ್ಟ ಹೆಚ್ಚಿಸಲು ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಬಲ್ಲಾಳಸಮುದ್ರ, ಕೊರಟೆಗೆರೆ, ಕೆಲ್ಲೋಡು ಬಳಿ ಬ್ಯಾರೇಜ್ ಭರ್ತಿಯಾಗಿವೆ. ಕಾರೇಹಳ್ಳಿ ಬಳಿ ಬ್ಯಾರೇಜ್ ಕಾಮಗಾರಿ ಪ್ರಗತಿ ಹಂತದಲ್ಲಿದೆ. ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ನೀರು ಹರಿಸುವ ಮೂಲಕ ಶಾಶ್ವತ ನೀರಾವರಿಗೆ ಆದ್ಯತೆ ನೀಡಲಾಗುವುದು' ಎಂದು ತಿಳಿಸಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, "ಶಾಸಕ ಬಿ.ಜಿ.ಗೊವಿಂದಪ್ಪನಿಗೆ ಸಚಿವ ಸ್ಥಾನ ಒಲಿದು ಬಂದಿದ್ದರೂ ಅಲಂಕರಿಸಲಿಲ್ಲ. ಬದಲಾಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೆಚ್ಚು ಒಲುವು ತೋರಿಸಿದರು. ಅವರು ಸರ್ಕಾರದ ಯೋಜನೆ ಹಾಗೂ ಸವಲತ್ತುಗಳನ್ನು ಕ್ಷೇತ್ರದ ಜನತೆಗೆ ತಲುಪಿಸುವ ಮೂಲಕ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ನಂ.1 ಶಾಸಕ ಎಂದು ವಿಧಾನಸೌಧದಲ್ಲಿ ಕರೆಯುತ್ತಿರುವುದು ಶ್ಲಾಘನೀಯ' ಎಂದರು.

ಸಮಾರಂಭದಲ್ಲಿ ವಿಶ್ವೇಶ್ವರಯ್ಯ ಜಲನಿಗಮದ ಎಂಜಿನಿಯರ್ ಚಲುವರಾಜು, ರಾಜ್ಯ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಪುಲ್ಲ, ಕಾಂಗ್ರೆಸ್‌ ಮುಖಂಡರಾದ ರಾಜಣ್ಣ, ಬಾಬುರೆಡ್ಡಿ, ರಂಗರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.