ADVERTISEMENT

ಮಳೆಯ ಅವಾಂತರ: ಅಪಾರ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 9:07 IST
Last Updated 18 ಸೆಪ್ಟೆಂಬರ್ 2013, 9:07 IST

ಚಿಕ್ಕಜಾಜೂರು:  ಬಿ.ದುರ್ಗ ಹೋಬಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಅಲ್ಲದೆ, ಜನರು ಮನೆಗಳನ್ನು ಕಳೆದು ಕೊಳ್ಳುವಂತಾಗಿದೆ.

ಕಳೆದ ಬುಧವಾರ ರಾತ್ರಿ ಸುರಿದ ಬಾರಿ ಮಳೆಗೆ ಸಮೀಪದ ಅಂದನೂರು ಗ್ರಾಮದ  ಮಂಜಪ್ಪ ಹಾಗೂ ಬೀರೇಶ್‌ ಎಂಬುವರ ಮನೆಗಳು ಬಿದ್ದು ಹೋಗಿದೆ. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಅಪಾರ ಬೆಳೆ ಹಾನಿ: ಕಳೆದ ಬುಧವಾರ ರಾತ್ರಿ ಸುರಿದ ಬಾರಿ ಮಳೆಗೆ ಕಾಗಳಗೆರೆ ಹಾಗೂ ಮುತ್ತುಗದೂರು ಕೆರೆಗಳಿಂದ ರಭಸವಾಗಿ ಹರಿದು ಬಂದ ನೀರು ಅಂದನೂರು ಗೊಲ್ಲರಹಟ್ಟಿಯ ಬಳಿಯಲ್ಲಿ ಹರಿಯುವ ಶ್ಯಾಘಲೆ ಹಳ್ಳ ತುಂಬಿ ಹರಿದ ಪರಿಣಾಮ  ರಾಮಚಂದ್ರಪ್ಪ ಅವರ ಜಮೀನಿನಲ್ಲಿನ ಫಸಲಿಗೆ ಬಂದಿದ್ದ ಸುಮಾರು

650 ಬಾಳೆ ಗಿಡಗಳು ನೆಕ್ಕುರುಳಿವೆ. ಜತೆಗೆ 500 ಅಡಿಕೆ ಗಿಡಗಳು ಉರುಳಿ ಬಿದ್ದಿವೆ. ಇಡೀ ಜಮೀನಿನಲ್ಲಿ ನೀರು ಹರಿದ ಪರಿಣಾಮ ಹತ್ತಿ ಗಿಡಗಳು ಸಂಪೂರ್ಣವಾಗಿ ನೆಲಕ್ಕೆ ಬಿದ್ದು ಹಾಳಾಗಿದೆ. ಅಲ್ಲದೆ, ಕೊಳವೆ ಬಾವಿಗೆ ಜೋಡಿಸಿದ್ದ ಸ್ಟಾರ್ಟ್ ಬೋರ್ಡ್‌ ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ರಾಮಚಂದ್ರಪ್ಪ ಅಳಲನ್ನು ತೋಡಿಕೊಂಡರು.

ಗ್ರಾಮದ ತಿಮ್ಮೇಶ್‌ ಎಂಬುವರು ಜಮೀನಿನಲ್ಲಿ ಬೆಳೆಯಾಗಿದ್ದ 500 ಪಪ್ಪಾಯಿ ಸಸಿಗಳು ಮಳೆಗೆ ನಾಶವಾಗಿವೆ.
ಇದೇ ಗ್ರಾಮದ ಜಯ್ಯಪ್ಪ ಎಂಬುವರ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಗ್ರಾಮಸ್ಥರ ಆಕ್ರೋಶ: ‘ಮಳೆಯಿಂದ ಆದ ಅನಾಹುತಗಳ ಬಗ್ಗೆ ಕಳೆದ ಗುರುವಾರ ಕಂದಾಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ, ಇದುವರೆಗೂ ಯಾವ ಅಧಿಕಾರಿಗಳು ನಮ್ಮ ಜಮೀನುಗಳ ಕಡೆ ಮುಖ ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಂಡು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.