ADVERTISEMENT

ಮಳೆಹಾನಿ: ` 10 ಕೋಟಿ ಅನುದಾನಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:38 IST
Last Updated 16 ಸೆಪ್ಟೆಂಬರ್ 2013, 8:38 IST

ಹಿರಿಯೂರು: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಮಳೆಯಿಂದ ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿ ಒಟ್ಟಾರೆ ` 4.38 ಕೋಟಿ ನಷ್ಟವಾಗಿದ್ದು, ಒಟ್ಟಾರೆ ಪರಿಹಾರ ಕಾರ್ಯಗಳಿಗೆ ` 10 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಹಿರಿಯೂರಿನಲ್ಲಿ ಭಾನುವಾರ ಮಳೆ ಹಾನಿ ಪ್ರದೇಶಗಳ ಪರಿಶೀಲನೆಗೆ ಆಗಮಿಸಿದ್ದ ಅವರು ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರೆದಿದ್ದ ಲಕ್ಷ್ಮಮ್ಮ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಮಳೆಯಿಂದಾಗಿ 9 ಕೆರೆಗಳು, 41 ರಸೆ್ತಗಳು, 26 ಸಂಪರ್ಕ ಚರಂಡಿಗಳು, 4 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ಮನೆ, ರಸೆ್ತ, ಬೆಳೆಗಳಿಗೆ ಹಾನಿಯಾಗಿದ್ದು ನಗರದ 6 ಬಡಾವಣೆಗಳಲ್ಲಿ  ಜನಜೀವನ ಅಸ್ತವ್ಯಸ್ತವಾಗಿದೆ. ಮೂರು ಕಡೆ ಗಂಜಿ ಕೇಂದ್ರ ಆರಂಭಿಸಿದ್ದು, ಮೂರು ದಿನಗಳಿಂದ 1,200 ಸಂತ್ರಸ್ತರಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ.

ಖಾಲಿ ಇದ್ದ ಜಾಗದಲ್ಲಿ ಬಡವರು ನೆಲೆ ಕಂಡುಕೊಂಡಿರುವ ಕಾರಣ ಇಂತಹ ಅವಘಡಗಳು ಸಂಭವಿಸುತ್ತಿವೆ. ಆಶ್ರಯ ಕಾಲೋನಿ ಹಾಗೂ ವಿನಾಯಕ ಚಿತ್ರಮಂದಿರದ ಪಕ್ಕದ ನಿವಾಸಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಒಟ್ಟಾರೆ ` 10 ಕೋಟಿ ಅನುದಾನ ವನ್ನು ಸರ್ಕಾರದಿಂದ ಕೇಳಿದ್ದು, ಶೀಘ್ರವೇ ಪರಿಹಾರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ಎಲ್ಲ ನೆರವು ನೀಡಲಾಗುವುದು. ಮಳೆಯಿಂದ ಪಡಿತರ ಹಾಳಾಗಿರುವ ಕಾರಣ ಮತ್ತೆ ` 1ಗೆ ಕೆಜಿ ದರದ ಅಕ್ಕಿಯನ್ನು ವಿತರಿಸಲಾಗುವುದು. ವಾಣಿ ವಿಲಾಸ ನಾಲೆಯ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಂಜನೇಯ ತಿಳಿಸಿದರು.

ಶಾಸಕ ಡಿ.ಸುಧಾಕರ್‌, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ ನಾರಾಯಣ ಸ್ವಾಮಿ,  ಎಸ್‌ಪಿ ಡಾ.ರವಿಕುಮಾರ್, ತಿಪ್ಪೇಸ್ವಾಮಿ, ಶ್ರೀಕಂಠಮೂರ್ತಿ, ಮಲ್ಲಿಕಾರ್ಜುನ, ಜಯಣ್ಣ, ಎಂ.ಎ.ಸೇತೂರಾಂ, ಜಿ.ಎಸ್‌.ಮಂಜುನಾಥ್, ಕರಿಯಮ್ಮ, ದ್ಯಾಮಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.