ADVERTISEMENT

ಮಾಂಸದ ಅಡುಗೆ ತಯಾರಿಸಿ ಪ್ರತಿಭಟನೆ

ಹಿರಿಯೂರಿನಲ್ಲಿ ತೀವ್ರಗೊಂಡ ದಲಿತ ಸಂಘರ್ಷ ಸಮಿತಿ ಧರಣಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:54 IST
Last Updated 15 ಡಿಸೆಂಬರ್ 2012, 6:54 IST
ಹಿರಿಯೂರಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶಿವನಗರ ದಲಿತರ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ನ. 15ರಿಂದ ಧರಣಿ ನಡೆಸುತ್ತಿದ್ದರೂ ಸ್ಪಂದಿಸಿಲ್ಲ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಶುಕ್ರವಾರ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು.
ಹಿರಿಯೂರಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಶಿವನಗರ ದಲಿತರ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ನ. 15ರಿಂದ ಧರಣಿ ನಡೆಸುತ್ತಿದ್ದರೂ ಸ್ಪಂದಿಸಿಲ್ಲ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಶುಕ್ರವಾರ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು.   

ಹಿರಿಯೂರು: ತಾಲ್ಲೂಕಿನ ಶಿವನಗರ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ, ಅಸ್ಪೃಷ್ಯತೆ ಆಚರಣೆ, ದೌರ್ಜನ್ಯ, ಜಾತಿ ನಿಂದನೆ ಮಾಡಲಾಗಿದ್ದು, ದಲಿತರಿಗೆ ಹೊಸ ಬದುಕು ಕಟ್ಟಿಕೊಡಬೇಕು ಎಂದು ಒತ್ತಾಯಿಸಿ ನ. 15ರಿಂದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸುತ್ತಿದ್ದರೂಪ್ರಯೋಜನವಾಗದ ಕಾರಣ ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಮಾಂಸದ ಅಡುಗೆ ಬೇಯಿಸುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಮುಖಂಡರು ಹೇಳಿದರು.

ಶಿವನಗರ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗೆ ದಲಿತ ಮಹಿಳೆ ಅರ್ಜಿ ಹಾಕಿದ್ದೇ ಗ್ರಾಮದಲ್ಲಿನ ಸವರ್ಣೀಯರ ಕಣ್ಣು ಕೆಂಪಗಾಗಿಸಲು ಕಾರಣ. ತಾನು ಪಡೆದಿರುವ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ತರಲಾಯಿತು. ಪೊಲೀಸರು ಗ್ರಾಮದ ದಲಿತರು ಮತ್ತು ಸವರ್ಣೀಯರನ್ನು ಕರೆಸಿ ಸಂಧಾನ ನಡೆಸಿ, ಸರ್ಕಾರದ ಆದೇಶವನ್ನು ಪಾಲಿಸುವಂತೆ ಎರಡೂ ಕಡೆಯವರಿಂದ ಬರೆಸಿಕೊಂಡಿದ್ದಾರೆ. ಇದಾದ ನಂತರ ಸವರ್ಣೀಯರಲ್ಲಿನ ಕೆಲವು ಪುಢಾರಿಗಳು ಸಾಮಾಜಿಕ ಬಹಿಷ್ಕಾರದಂತಹ ನಿರ್ಣಯ ಕೈಗೊಂಡಿದ್ದಾರೆ. ಜಮೀನಿನ ಕೆಲಸಕ್ಕೆ ದಲಿತರನ್ನು ಕರೆಯುತ್ತಿಲ್ಲ. ಅಂಗಡಿಗಳಲ್ಲಿ ಸಾಮಾನು ಕೊಡುತ್ತಿಲ್ಲ. ದಲಿತರ ಬದುಕು ಬೀದಿಗೆ ಬಿದ್ದಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ದಲಿತರಿಗೆ ಸಮಗ್ರ ಪರಿಹಾರ ಮತ್ತು ಮೂಲಸೌಲಭ್ಯ ಒದಗಿಸಿಕೊಡಬೇಕು. ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ನಡೆಸಲು ನೆರವಾಗಬೇಕು. ದಲಿತರ ಬದುಕನ್ನು ಬೀದಿಗೆ ಬರುವಂತೆ ಮಾಡಿರುವವರಿಗೆ ಕಾನೂನು ರೀತಿಯಕ್ರಮ ಜರುಗಿಸಬೇಕು. ಗಡೀಪಾರು ಮಾಡಬೇಕು.

ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.ಟಿ.ಡಿ. ರಾಜಗಿರಿ, ಗುರುಶ್ಯಾಮಯ್ಯ, ಎಸ್. ರಂಗಸ್ವಾಮಿ, ಘಾಟ್‌ರವಿ, ಓಬಳೇಶ್, ಗಣೇಶ್‌ಕುಮಾರ್, ಡಿ. ಬಸವರಾಜ್, ಶಿವಮೂರ್ತಿ, ಕೆ. ನಾಗರಾಜ್ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.