ADVERTISEMENT

ಮುಂಗಾರಿಗೆ ಬಸವ ಬಲು ದುಬಾರಿ... ಚಳ್ಳಕೆರೆ ಎತ್ತಿನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 6:15 IST
Last Updated 8 ಜೂನ್ 2011, 6:15 IST
ಮುಂಗಾರಿಗೆ ಬಸವ ಬಲು ದುಬಾರಿ... ಚಳ್ಳಕೆರೆ ಎತ್ತಿನ ಜಾತ್ರೆ
ಮುಂಗಾರಿಗೆ ಬಸವ ಬಲು ದುಬಾರಿ... ಚಳ್ಳಕೆರೆ ಎತ್ತಿನ ಜಾತ್ರೆ   

ಚಳ್ಳಕೆರೆ: ಪಟ್ಟಣದ ಪ್ರಸಿದ್ಧ ವೀರಭದ್ರಸ್ವಾಮಿ ಜಾತ್ರೆ ಪ್ರಯುಕ್ತ ನಡೆಯುವ ಎತ್ತಿನ ಜಾತ್ರೆಯಲ್ಲಿ ಈ ಬಾರಿ ಬೃಹತ್ ಸಂಖ್ಯೆಯಲ್ಲಿ ಹೆಚ್ಚು ಬೆಲೆ ಬಾಳುವ ಎತ್ತುಗಳು ಎಲ್ಲರ ಗಮನ ಸೆಳೆಯುತ್ತಿವೆ.

ಮುಂಗಾರು ಬಿತ್ತನೆಯ ಆಸುಪಾಸಿನಲ್ಲಿ ಪಟ್ಟಣದ ಬಳ್ಳಾರಿ ರಸ್ತೆಯ ಹೊರವಲಯದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಎತ್ತುಗಳನ್ನು ಕೊಂಡುಕೊಳ್ಳಲು ಸಾವಿರಾರು ರೈತರು ಆಗಮಿಸುವುದುಂಟು.

ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಎತ್ತಿನ ಜಾತ್ರೆ ಮುಗಿದ ನಂತರದಲ್ಲಿ ಪ್ರಾರಂಭವಾಗುವ ಈ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಎತ್ತುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಬರುವುದುಂಟು.

ಆಂಧ್ರದ ಗಡಿಭಾಗಕ್ಕೆ ಹೊಂದಿ ಕೊಂಡಿರುವ ಚಳ್ಳಕೆರೆಯ ಎತ್ತಿನ ಜಾತ್ರೆಗೆ ನೆರೆಯ ಆಂಧ್ರದವರೂ ಬಂದು ಹೋಗುತ್ತಾರೆ. ತಲತಲಾಂತರದಿಂದ ನಡೆಯುತ್ತಾ ಬಂದಿರುವ ಈ ಎತ್ತಿನ ಜಾತ್ರೆಯನ್ನು ಜನಪದರು ಈರಣ್ಣನ ಎತ್ತಿನ ಪರಿಷೆ ಎಂಬುದಾಗಿ ಕರೆಯುವುದು ವಾಡಿಕೆ.

ಈ ಬಾರಿಯ ಜಾತ್ರೆಯಲ್ಲಿ ಎಲ್ಲರ ಗಮನಸೆಳೆದಿರುವ ಚಿತ್ರದುರ್ಗ ತಾಲ್ಲೂಕಿನ ಲಿಂಗಾವರ ಹಟ್ಟಿಯ ಜಗನ್ನಾಥರೆಡ್ಡಿ ಎಂಬುವರ ಎತ್ತುಗಳ ಬೆಲೆ ್ಙ 1.35 ಲಕ್ಷ.

ರೈತರು ಅಕ್ಕರೆಯಿಂದ ಬೆಳೆಸಿದ ತನ್ನ ವ್ಯವಸಾಯದ ಸಂಗಾತಿಗಳನ್ನು ಮಾರಾಟ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. `ಕಳೆದ 6ತಿಂಗಳ ಹಿಂದೆ ತುಮಕೂರಿನ ಮಧುಗಿರಿ ಜಾತ್ರೆಯಲ್ಲಿ ್ಙ 1.25ಲಕ್ಷಕ್ಕೆ ತಂದಿದ್ದೆ.

ಇದೀಗ ್ಙ 10ಸಾವಿರ ಲಾಭಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎನ್ನುತ್ತಾರೆ~ ಜಗನ್ನಾಥರೆಡ್ಡಿ.  
ಪ್ರತಿ ವರ್ಷ ನಡೆಯುವ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಎತ್ತಿನ ಸ್ಪರ್ಧೆಯಲ್ಲಿ ಕಳೆದ 5ವರ್ಷಗಳಿಂದ ಬಹುಮಾನ ಗಳಿಸಿರುವ ಬೋರಪ್ಪನಹಟ್ಟಿ ಗೊಲ್ಲರ ನಾಗಣ್ಣನ ಎತ್ತುಗಳ ಬೆಲೆ ್ಙ 1.25 ಲಕ್ಷ.ಈ ಎರಡೂ ಜತೆ ಎತ್ತುಗಳು ಇಡೀ ಜಾತ್ರೆಯಲ್ಲಿ ಅತೀ ಹೆಚ್ಚು ಬೆಲೆಯ ಎತ್ತುಗಳೆಂದು ಎಲ್ಲರ ಗಮನ ಸೆಳೆಯುತ್ತಿವೆ. ಈ ಎತ್ತುಗಳನ್ನು ಮಾರಾಟ ಮಾಡಿ ಮತ್ತೊಂದು ಜತೆ ಎತ್ತುಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತಿರುವ ಲಿಂಗಾವರ ಹಟ್ಟಿಯ ಜಗನ್ನಾಥ ಮತ್ತು ಬೋರಪ್ಪನಹಟ್ಟಿಯ ನಾಗಣ್ಣ ಈಗಾಗಲೇ ಮುಂಗಾರು ಬಿತ್ತನೆಗೆ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳನ್ನು ಮುಗಿಸಲಾಗಿದೆ ಎನ್ನುತ್ತಾರೆ.

ಮೇ ತಿಂಗಳ ಕೊನೆಯ ವಾರದಿಂದ ಎತ್ತಿನ ಜಾತ್ರೆ ಸೇರುತ್ತಾ ಬಂದಿದ್ದರೂ ಸೋಮವಾರದ ಜಾತ್ರೆಯಲ್ಲಿ ಸಾವಿರಾರು ಎತ್ತುಗಳು ಸೇರಿದ್ದವು. ಮುಂಗಾರು ಮಳೆ ಜೋರಾಗಿ ಸುರಿದ ನಂತರವೇ ಈ ಜಾತ್ರೆಗೆ ತೆರೆಬೀಳಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.