ADVERTISEMENT

ಮುರಿದು ಬಿದ್ದ ಬಾಳೆ, ಹಾಸಿಗೆಯಂತಾದ ಮೆಕ್ಕೆಜೋಳ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 6:15 IST
Last Updated 18 ಅಕ್ಟೋಬರ್ 2011, 6:15 IST
ಮುರಿದು ಬಿದ್ದ ಬಾಳೆ, ಹಾಸಿಗೆಯಂತಾದ ಮೆಕ್ಕೆಜೋಳ
ಮುರಿದು ಬಿದ್ದ ಬಾಳೆ, ಹಾಸಿಗೆಯಂತಾದ ಮೆಕ್ಕೆಜೋಳ   

ಹೊಳಲ್ಕೆರೆ: ತಾಲ್ಲೂಕಿನ ಗೌಡಿಹಳ್ಳಿ ಸಮೀಪದ ಗೊಲ್ಲರಹಳ್ಳಿ ಮತ್ತು ಗೊಲ್ಲರಹಳ್ಳಿ ಕ್ಯಾಂಪ್ ಗ್ರಾಮಗಳ ಸುತ್ತಮುತ್ತ ಭಾನುವಾರ ರಾತ್ರಿ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ಬಾಳೆ, ಅಡಿಕೆ, ತೆಂಗು ಮತ್ತು ಮೆಕ್ಕೆಜೋಳದ ಬೆಳೆಗಳು ನೆಲಸಮವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮಳೆ ಗಾಳಿಯಿಂದ ಸುಮಾರು 20 ತೆಂಗಿನ ಮರಗಳು, 200 ಅಡಿಕೆ ಮರಗಳು, 25 ಎಕರೆ ಬಾಳೆ, 25 ಎಕರೆ ಮೆಕ್ಕೆಜೋಳ ನೆಲಕ್ಕೆ ನೆಲಕಚ್ಚಿದೆ. ಬಿರುಗಾಳಿಯ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಲೈನ್ ಸಮೇತ ಧರೆಗೆ ಉರುಳಿದ್ದು, ರಾತ್ರಿ ವೇಳೆಯಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೊಲ್ಲರಹಳ್ಳಿ ಕ್ಯಾಂಪ್‌ನಲ್ಲಿ ಐದಾರು ಮನೆಗಳ ಹೆಂಚುಗಳು ಹಾರಿಹೋಗಿವೆ.

ಗೊಲ್ಲರಹಳ್ಳಿ ಕ್ಯಾಂಪ್‌ನ ಈಶ್ವರಪ್ಪ, ಚನ್ನಬಸಪ್ಪ, ಪರಮೇಶ್ವರಪ್ಪ, ರುದ್ರಮ್ಮ, ಶಂಕರಪ್ಪ, ರುದ್ರಪ್ಪ, ಸಿದ್ದಪ್ಪ, ಕಟ್ಟೆ ತಿಮ್ಮಪ್ಪ, ವಿಶ್ವನಾಥಪ್ಪ ಎಂಬುವರ ತೆಂಗು, ಅಡಿಕೆ, ಬಾಳೆ ತೋಟಗಳಿಗೆ ಭಾರೀ ಹಾನಿ ಸಂಭವಿಸಿದೆ. ಎಂ.ಕೆ. ಸಿದ್ದಪ್ಪ, ರಂಗಪ್ಪ, ರಾಮಚಂದ್ರಪ್ಪ, ಚಿಕ್ಕನಾಗಪ್ಪ, ವೀರನಾಗಪ್ಪ ಎಂಬ ರೈತರ ಮೆಕ್ಕೆಜೋಳ ನೆಲಸಮವಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

`ಗೊನೆ ಬಿಚ್ಚಿ ನಿಂತಿದ್ದ ನಾಲ್ಕು ಎಕರೆ ಬಾಳೆ ಸಂಪೂರ್ಣ ಮುರಿದುಬಿದ್ದಿದೆ. ಬಾಳೆ ಬೆಳೆಯಲು ಸಾಲ ಮಾಡಿ ಸುಮಾರು ರೂ.3 ಲಕ್ಷ ಖರ್ಚುಮಾಡಿದ್ದೆ. ಇನ್ನು ಒಂದು ತಿಂಗಳು ಕಳೆದಿದ್ದರೆ, ಗೊನೆ ಕಟಾವಿಗೆ ಬರುತ್ತಿತ್ತು. ಎಕರೆಗೆ ರೂ.3 ಲಕ್ಷದಂತೆ ರೂ.12 ಲಕ್ಷ ಆದಾಯ ಬರುತ್ತಿತ್ತು. ಅದೇನು ಕೇಡಿಗೋ ಏನೋ ಪುಟ್ಟ ಬಾಳೆ ಭಾರೀ ಗೊನೆ ಬಿಟ್ಟಿತ್ತು. ಆದರೆ ಈಗ ಇಡೀ ತೋಟ ನೆಲಸಮವಾಗಿದೆ. ಎಳೆಗೊನೆಗಳು ಮುರಿದು ಬಿದ್ದಿರುವುದನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ. ಮುಂದೆ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ~ ಎಂದು ರೈತ ಚನ್ನಬಸಪ್ಪ ಅಳಲು ತೋಡಿಕೊಂಡರು.

`ಸಂಜೆಯಿಂದ ಆರಂಭವಾದ ಬಿರುಗಾಳಿ ನಿಲ್ಲಲೇ ಇಲ್ಲ. ಈ ಪ್ರದೇಶದಲ್ಲಿ ಬಿಟ್ಟರೆ ಬೇರೆ ಕಡೆ ಇಷ್ಟು ಗಾಳಿ ಬೀಸಿಲ್ಲ. ಮಳೆಗಿಂತ ಗಾಳಿಯೇ ಹೆಚ್ಚಾಗಿತ್ತು. ಇಷ್ಟು ದಿನ ಮಳೆ ಇಲ್ಲದೆ ನಷ್ಟ ಅನುಭವಿದ್ದೆವು. ಈಗ ಮಳೆ,ಗಾಳಿಗೆ ಬೆಳೆ ಕಳೆದುಕೊಂಡಿದ್ದೇವೆ~ ಎಂದು ಮೂರು ಎಕರೆ ಬಾಳೆ ಕಳೆದುಕೊಂಡ ಎಂ. ಈಶ್ವರಪ್ಪ ಎಂಬ ರೈತ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.