ಚಿತ್ರದುರ್ಗ: ‘ಅಪನಂಬಿಕೆ ಅಪಾ ಯಕಾರಿ. ಅದು ವಿಶ್ವಾಸಘಾತುಕ ಕಾರ್ಯಕ್ಕೆ ಪ್ರೇರೇಪಿಸುತ್ತದೆ. ಜೀವನದಲ್ಲಿ ಅಪನಂಬಿಕೆ ಸುಳಿಯದಂತೆ ನೋಡಿ ಕೊಳ್ಳಬೇಕು’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.
ಮುರುಘಾಮಠದಲ್ಲಿ ಶುಕ್ರವಾರ ಬಸವ ಕೇಂದ್ರ ಶ್ರೀಮುರುಘಾ ಮಠ ಮತ್ತು ಚಿತ್ರದುರ್ಗದ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ನಡೆದ ತಿಂಗಳ ಸಾಮೂಹಿಕ ವಿವಾಹ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮೂಢನಂಬಿಕೆಯೂ ಅಪನಂಬಿಕೆ ಯಂತೆ ಅಪಾಯಕಾರಿ. ನಾಗರ ಪಂಚಮಿ ಯಂದು ಜನರು ಹುತ್ತಕ್ಕೆ ಹಾಲು ಎರೆ ಯುತ್ತಾರೆ. ಹಾಲು ಹಾವಿನ ಆಹಾರವಲ್ಲ. ಹಾವಿನ ಆಹಾರ ಏನಿದ್ದರೂ ಇಲಿ, ಹೆಗ್ಗಣ, ಕಪ್ಪೆ ಮತ್ತಿತರ ಪ್ರಾಣಿಗಳು. ಹಾಲನ್ನು ಮಕ್ಕಳು ಕುಡಿಯುತ್ತಾರೆ. ಹಾಗಾಗಿ ಹಸಿದ ಮಕ್ಕಳಿಗೆ ಹಾಲನ್ನು ಕೊಡಿ’ ಎಂದು ಮನವಿ ಮಾಡಿದರು.
‘ಮೂಢನಂಬಿಕೆ ಅನೇಕರ ಬದುಕನ್ನು ಕಿತ್ತುಕೊಂಡಿದೆ. ದುಡಿಯುತ್ತಿದ್ದವರನ್ನು ದಾರಿ ತಪ್ಪಿಸಿದೆ. ಮೊದಲು ಮೂಢನಂಬಿಕೆ ಬಿಡಿ. ಗುರು ಹಿರಿಯರ ಮಾತುಗಳನ್ನು ಆಲಿಸಿ, ದುಡಿಮೆಯನ್ನು ನಂಬಿ ಬದುಕಬೇಕು’ ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುಪ್ಪೂರು ಗದ್ದಿಗೆ ಸಂಸ್ಥಾನಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಚಿತ್ರದುರ್ಗ ಮುರುಘಾ ಮಠ ಎಂದರೆ ಅದೊಂದು ಸಾಂಸ್ಕೃತಿಕ ಕೇಂದ್ರ. ನಂಬಿಕೆ ಬಹಳ ಮುಖ್ಯ. ಆದರೆ ಮೂಢನಂಬಿಕೆ ಬೇಡ. ಈ ವಿಚಾರವಾಗಿ ಮುರುಘಾಮಠ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿದೆ’ ಎಂದರು.
‘ಬಸವಣ್ಣನವರ ವಿಚಾರ ಧಾರೆಗಳನ್ನು ಗ್ರಾಮದಿಂದ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಶ್ರೀಮಠದಲ್ಲಿ ಬಸವಾದಿ ಶರಣರ ತತ್ವ ಚಿಂತನೆಗಳ ಪ್ರಕಾರ ವಿವಾಹ ಮಹೋತ್ಸವ ನಡೆಯುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
‘ಮುರುಘಾ ಮಠ ನಡೆಸುವ ವಿವಾಹ ಕಾರ್ಯಗಳಲ್ಲಿ ಯಾವುದೇ ಜಾತಿ, ಮತ, ಪಂಥ ಭೇದ ಇರುವುದಿಲ್ಲ. ವಿವಾಹ ಎಂದರೆ ಹೆಣ್ಣು-ಗಂಡು ಸೇರುವ ಒಂದು ಸೇತುವೆ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸಾಗಬೇಕು’ ಎಂದು ಸಲಹೆ ನೀಡಿದರು.
‘26 ವರ್ಷಗಳಿಂದ ಮಠವು ನಿರಂತರವಾಗಿ ಪ್ರತಿ ತಿಂಗಳು 5ರಂದು ವಿವಾಹ ಮಹೋತ್ಸವ ಹಮ್ಮಿಕೊಳ್ಳುತ್ತಿ ರುವುದು ಇತಿಹಾಸವೇ ಸರಿ’ ಎಂದರು.
ಇದೇ ಸಂದರ್ಭದಲ್ಲಿ 21 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವೇದಿಕೆಯಲ್ಲಿ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಕಾರ್ಯಕ್ರಮ ದಾಸೋಹಿಗಳಾದ ಬಿಸ್ಲೇರಿ ಗಂಗಣ್ಣ, ವೇದಮೂರ್ತಿ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎನ್.ತಿಪ್ಪಣ್ಣ, ಎ.ಜೆ. ಪರಮಶಿವಯ್ಯ, ಪ್ರೊ. ಸಿ.ವಿ. ಸಾಲಿಮಠ ಇದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ವಚನ ಕಮ್ಮಟ ನಿರ್ದೇಶಕ ಪ್ರೊ. ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪ್ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.
*
ಮೂಢನಂಬಿಕೆ ಅನೇಕರ ಬದುಕನ್ನು ಕಿತ್ತುಕೊಂಡಿದೆ. ದುಡಿಯುತ್ತಿದ್ದವರನ್ನು ದಾರಿ ತಪ್ಪಿಸಿದೆ. ಮೊದಲು ಮೂಢನಂಬಿಕೆ ಬಿಡಿ
-ಶಿವಮೂರ್ತಿ ಮುರುಘಾ ಶರಣರು,
ಮರುಘಾ ಮಠ, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.