ADVERTISEMENT

ಮೂಲಸೌಕರ್ಯ ಒದಗಿಸಲು ಆದ್ಯತೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 6:45 IST
Last Updated 20 ಜನವರಿ 2011, 6:45 IST

ಹೊಳಲ್ಕೆರೆ: ತಾಲ್ಲೂಕಿನ ತಾಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿರುವ ಪಿ.ಆರ್. ಶಿವಕುಮಾರ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ನಿಮ್ಮ ವೈಯಕ್ತಿಕ ಹಾಗೂ ರಾಜಕೀಯ ಹಿನ್ನೆಲೆಯೇನು?
ನಾನು ಹುಟ್ಟಿದ್ದು ಶಿವಪುರ ಗ್ರಾಮದಲ್ಲಿ. ತಾತ ಮಹೇಶ್ವರಯ್ಯ ದೊಡ್ಡ ಜಮೀನ್ದಾರರು. ತಾಲ್ಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಅಡಿಕೆ ಬೆಳೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಆಗಿನ ಕಾಲದಲ್ಲಿ ಸುತ್ತಲಿನ ರೈತರಿಗೆ ಅಡಿಕೆ ಬೆಳೆಯಲು ಅವರೇ ಪ್ರೋತ್ಸಾಹ ನೀಡಿದರು. ತಂದೆ ಪಿ. ರಮೇಶ್ ಬಿಜೆಪಿ ತಾಲ್ಲೂಕು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದರು. 1994ರಲ್ಲಿ ಶಾಸಕರಾಗಿ ಆಯ್ಕೆಯಾದರು. ಮತ್ತೊಮ್ಮೆ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡರು.

 * ರಾಜಕೀಯದಲ್ಲಿ ಆಸಕ್ತಿ ಬೆಳೆದದ್ದು ಹೇಗೆ?

ತಂದೆಯ ರಾಜಕೀಯ ಹಿನ್ನೆಲೆ ತಂತಾನೇ ನನಗೂ ಅದರಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿತು. ಕಾಲೇಜು ಹಂತದಲ್ಲೇ ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡಿದ್ದರಿಂದ ರಾಜಕೀಯ ಆಕರ್ಷಿಸಿತು.

* ಬೇರೆ ಕ್ಷೇತ್ರಕ್ಕೆ ವಲಸೆ ಬಂದು ಜಯ ಗಳಿಸಿದ್ದು ಹೇಗೆ?
ಪಕ್ಷದ ತಾಲ್ಲೂಕು ಅಧ್ಯಕ್ಷನಾಗಿ ಕೆಲಸ ಮಾಡಿದ ನನಗೆ ತಾಳ್ಯ ಕ್ಷೇತ್ರ ಬೇರೆ ಎನಿಸಲಿಲ್ಲ. ತಂದೆಯ ಅಭಿವೃದ್ಧಿ ಕಾರ್ಯಗಳು, ಸನ್ನಡತೆಗಳನ್ನು ಜನ ಗುರುತಿಸಿದ್ದರು. ಜನರಿಗೆ ನನ್ನ ಬಗ್ಗೆ ಅಭಿಮಾನ, ಪ್ರೀತಿ ಇತ್ತು. ಆದ್ದರಿಂದ ಜಯ ಸುಲಭವಾಯಿತು. ಗೆಲುವಿಗೆ ಕಾರಣರಾದ ಮತದಾರರು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ.

* ಕ್ಷೇತ್ರದಲ್ಲಿ ಗುರುತಿಸಿರುವ ಸಮಸ್ಯೆಗಳಾವವು?
ಕ್ಷೇತ್ರದಲ್ಲಿ ಒಟ್ಟು 42 ಹಳ್ಳಿಗಳಿವೆ. ಸ್ವಾತಂತ್ರ್ಯ ಬಂದು 64 ವರ್ಷಗಳಾದರೂ ಹಳ್ಳಿಗಳ ಅಭಿವೃದ್ದಿ ಆಗಿಲ್ಲ. ರಸ್ತೆ, ಕುಡಿಯುವ ನೀರು, ಚರಂಡಿ ಮತ್ತಿತರ ಮೂಲ ಸೌಕರ್ಯಗಳೇ ಇನ್ನೂ ಜನರಿಗೆ ಮರೀಚಿಕೆಯಾಗಿವೆ. ಪ್ರಚಾರದ ಸಂದರ್ಭದಲ್ಲಿ ಸಮಸ್ಯೆಗಳನ್ನು ಗರುತಿಸಿದ್ದು, ನನ್ನ ಅಧಿಕಾರದ ಅವಧಿಯಲ್ಲಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ.

* ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಹೇಗೆ ತರುವಿರಿ?
ಮಾಮೂಲಿಯಾಗಿ ಸದಸ್ಯರ ಅನುದಾನ ಬರುತ್ತದೆ. ಇದಲ್ಲದೆ ನಮ್ಮ ಶಾಸಕ ಎಂ. ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ಅನುದಾನಕ್ಕೆ ಅಡ್ಡಿಯಾಗದು ಎಂಬ ವಿಶ್ವಾಸ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.