ADVERTISEMENT

ಮೊಳಕಾಲ್ಮುರು ಕೆರೆಗಳಿಗೆ 1.46 ಟಿಎಂಸಿ ನೀರು

ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 6:16 IST
Last Updated 6 ಜನವರಿ 2014, 6:16 IST

ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರದ 52 ಕೆರೆಗಳನ್ನು ತುಂಬಿಸಲು 1.46 ಟಿಎಂಸಿ ನೀರು ಅಗತ್ಯವಿದ್ದು, ಈ ಕುರಿತ ಪ್ರಸ್ತಾವ ಸರ್ಕಾರದ ಹಂತದಲ್ಲಿ ಮಂಜೂರಾತಿಗೆ ಸಿದ್ಧವಿದೆ ಎಂದು ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಹೇಳಿದರು.

ತಾಲ್ಲೂಕಿನ ಹಾನಗಲ್‌ ಪ್ರವಾಸಿ ಮಂದಿರ ಆವರಣದಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕ್ಷೇತ್ರ ಮಟ್ಟದ ನೀರಾವರಿ ಹೋರಾಟ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನೀರಾವರಿ ಇಲಾಖೆ ಹಿರಿಯ ಎಂಜಿನಿಯರ್‌ಗಳಿಂದ ಸಿದ್ಧಪಡಿಸಿದ್ದ ತಾಂತ್ರಿಕ ವರದಿಯನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಹಯೋಗದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕಾರ್ಯರೂಪಕ್ಕೆ ಬಾರದ ಈ ಯೋಜನೆಗೆ ನಾನು ಜೀವ ತುಂಬುವ ಆಸೆ ಹೊಂದಿದ್ದೆ, ಆದರೆ ಬದಲಾದ ಸನ್ನಿವೇಶದಲ್ಲಿ ಯೋಜನೆಯನ್ನು ಈಗ ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಯೋಜನೆ ಸಾಧಕ–ಬಾಧಕ ಗೊತ್ತಿಲ್ಲದ ರಾಜಕಾರಣಿಗಳು ನೀರಾವರಿ ಹೋರಾಟ ಬಗ್ಗೆ ಹೇಳಿಕೆ ನೀಡುತ್ತಿರುವುದನ್ನು ನೋಡಿಕೊಂಡು ಸಹಿಸಲು ಸಾಧ್ಯವಿಲ್ಲ. ನಾನು ಪ್ರಥಮವಾಗಿ ಈ ಕ್ಷೇತ್ರದ ಪ್ರಜೆ, ನಂತರ ರಾಜಕಾರಣಿ. ನೀರು ತರುವ ಹೋರಾಟದ ಎರಡನೇ ಹಂತಕ್ಕೆ ಕೈ ಹಾಕಿದ್ದೇನೆ. ಯಾರು ಬೇಕಾದರೂ ಭಾಗವಹಿಸಬಹುದು ಎಂದರು.

ಬೆಳಘಟ್ಟ, ದೊಡ್ಡಘಟ್ಟ ಮೂಲಕ ಭದ್ರಾಮೇಲ್ದಂಡೆ ಯೋಜನೆ ಅಥವಾ ಬಳ್ಳಾರಿ ಜಿಲ್ಲೆ ರಾಮಬಸವ ಕಾಲುವೆ ಅಥವಾ ಸಿಂಗಟಾಲೂರು ಏತ ನೀರಾವರಿ ಯೋಜನೆ ಸೇರಿದಂತೆ ಮೂರೂ ವಿಧದಲ್ಲಿ ಕ್ಷೇತ್ರಕ್ಕೆ ನೀರು ಹಾಯಿಸುವ ಬಗ್ಗೆ ಪರಿಶೀಲಿಸಲಾಗಿದೆ. ಈ ಬಗ್ಗೆ ಜ.11ರಂದು ಚಿತ್ರದುರ್ಗಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಯೋಗ ಮನವಿ ಮಾಡಲಿದೆ. ಈ ತಿಂಗಳ ಅಂತ್ಯಕ್ಕೆ ಮೊಳಕಾಲ್ಮುರಿನಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಬಾಲರಾಜ್‌, ಪಿ.ಕೆ.ಕುಮಾರ ಸ್ವಾಮಿ, ಟಿ.ತಿಮ್ಮಪ್ಪ, ವಕೀಲ ಆರ್‌.ಎಂ.ಅಶೋಕ್‌, ಕೋಡಿಹಳ್ಳಿ ಪಾಲಯ್ಯ, ಎಪಿಎಂಸಿ ಓಬಣ್ಣ ಮಾತನಾಡಿದರು.

ಪಕ್ಷದ ಬ್ಲಾಕ್‌ ಅಧ್ಯಕ್ಷ ಪಟೇಲ್‌ ಪಾಪನಾಯಕ, ಟಿ.ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಎನ್‌.ವೈ.ಪಿ.ಸ್ವಾಮಿ, ರಾಮಾಂಜಿನೇಯಪ್ಪ, ಮಹದೇವಪುರ ತಿಪ್ಪೇಸ್ವಾಮಿ, ರವಿಶಂಕರ್‌, ರಶೀದ್, ಅಶ್ವಥ್‌ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.
ಎಸ್‌.ಜಯಣ್ಣ ಸ್ವಾಗತಿಸಿದರು, ಜಿ.ಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರು.

ಸೋಲು ಸ್ವೀಕರಿಸಿದ್ದೇನೆ..
‘ಸತತ 4 ಬಾರಿ ಶಾಸಕನಾಗಿದ್ದ ನಾನು ಈ ಬಾರಿ ಸೋತಿರುವುದನ್ನು ಸ್ವೀಕರಿಸಿದ್ದೇನೆ. ಆದರೆ, ಮತದಾರರಿಗೆ ಅನ್ಯಾಯವಾಗುವ ಚಟುವಟಿಕೆಗಳು ನಡೆದಲ್ಲಿ ಸುಮ್ಮನೆ ಕೂರುವುದಿಲ್ಲ. ನೀರಾವರಿ ಹೋರಾಟದಲ್ಲಿ ಡೋಂಗಿತನ ಹೆಚ್ಚಾಗುತ್ತಿದೆ.

ಎನ್‌.ವೈ.ಗೋಪಾಲಕೃಷ್ಣ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT