ADVERTISEMENT

ಮೊಳಕಾಲ್ಮುರು: ರೈಲು ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 6:15 IST
Last Updated 22 ಫೆಬ್ರುವರಿ 2011, 6:15 IST

ಮೊಳಕಾಲ್ಮುರು: ಅಲ್ಪದರಲ್ಲಿ ಅದೃಷ್ಟವಶಾತ್ ಸಂಭವನೀಯ ರೈಲ್ವೆ ದುರಂತವೊಂದು ತಪ್ಪಿದ ಘಟನೆ ತಾಲ್ಲೂಕಿನ ನೇತ್ರನಹಳ್ಳಿ ಬಳಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಘಟನೆ ವಿವರ: ತಾಲ್ಲೂಕಿನ ಬಿ.ಜಿ.ಕೆರೆ ಮತ್ತು ಮೊಳಕಾಲ್ಮುರು ಮಧ್ಯದಲ್ಲಿನ ನೇತ್ರನಹಳ್ಳಿ ಬಳಿಯ ಸೇತುವೆಯೊಂದರ ದುರಸ್ತಿ ಕಾರ್ಯ ಭಾನುವಾರ ಬೆಳಿಗ್ಗೆ ಕೈಗೆತ್ತಿಕೊಳ್ಳಲಾಗಿದ್ದು, ಸಂಜೆ 6 ಒಳಗಾಗಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕಿತ್ತು. ಆದರೆ, ಯಾವುದೇ ಮಾಹಿತಿ ನೀಡದೇ ರಾತ್ರಿ 10 ಗಂಟೆಯಾದರೂ ದುರಸ್ತಿ ಕಾರ್ಯ ಮುಂದುವರಿಸಿದ ಹಿನ್ನೆಲೆಯಲ್ಲಿ ರೈಲುಗಳ ಸಂಚಾರಕ್ಕೆ ಧಕ್ಕೆಯಾಗಿ ಬಿ.ಜಿ.ಕೆರೆಯಲ್ಲಿ ನಿಲುಗಡೆ ಮಾಡಲಾಯಿತು. ಹೊಸಪೇಟೆಯಿಂದ ಬಂದ ಬೆಂಗಳೂರು ಪ್ಯಾಸೆಂಜರ್ ರೈಲನ್ನು ರಾಯದುರ್ಗದಲ್ಲಿ ನಿಲ್ಲಿಸಿಕೊಳ್ಳಲಾಗಿತ್ತು. ಪರಿಣಾಮ ಎರಡೂ ನಿಲ್ದಾಣ ಸೇರಿ ಒಂದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೀಡಾದರು ಎಂದು ತಿಳಿದುಬಂದಿದೆ.

ರಾತ್ರಿ 11.30 ಸುಮಾರಿಗೆ ದುರಸ್ತಿ ಕಾರ್ಯ ಪೂರ್ಣವಾಗಿದೆ ಎಂದು ಮಾಹಿತಿ ಬಂದ ಕಾರಣ ಬಿ.ಜಿ.ಕೆರೆಯಲ್ಲಿ ನಿಲ್ಲಿಸಿಕೊಳ್ಳಲಾಗಿದ್ದ ಪ್ಯಾಸೆಂಜರ್ ರೈಲನ್ನು ಸಂಚಾರಕ್ಕೆ ಬಿಡಲಾಯಿತು. ರೈಲು ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದ ಸೇತುವೆ ಬಳಿಗೆ ಬಂದ ಕ್ಷಣವೇ ಸೇತುವೆ ಇಕ್ಕೆಲೆಗಳಲ್ಲಿ ಏಕಾ-ಏಕಿ ಮಣ್ಣು ಕುಸಿತವಾಗಲು ಆರಂಭವಾದುದನ್ನು ಕಂಡು ರೈಲು ನಿಲ್ಲಿಸಲಾಯಿತು ಎನ್ನಲಾಗಿದೆ. ಇದೇ ವೇಳೆ ರಾಯದುರ್ಗದಲ್ಲಿ ನಿಲ್ಲಿಸಲಾಗಿದ್ದ ಬೆಂಗಳೂರು ಪ್ಯಾಸೆಂಜರ್ ರೈಲು ಸಹ ಮೊಳಕಾಲ್ಮುರು ನಿಲ್ದಾಣಕ್ಕೆ ಆಗಮಿಸಿತು.

ರೈಲಿನಲ್ಲಿದ್ದ ಐದು ನೂರಕ್ಕೂ ಹೆಚ್ಚು ಪ್ರಯಾಣಿಕರು ತಮ್ಮನ್ನು ಬೇರೆ ವ್ಯವಸ್ಥೆ ಮಾಡಿ ಊರುಗಳಿಗೆ ಕಳಿಸಿಕೊಡಬೇಕು ಎಂದು ಪಟ್ಟುಹಿಡಿದರೆ, ಇತ್ತ ಮೊಳಕಾಲ್ಮುರು ನಿಲ್ದಾಣದಲ್ಲಿ ಬಂದು ನಿಂತಿದ್ದ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಸಹ ಅನ್ಯವ್ಯವಸ್ಥೆ ಮಾಡುವಂತೆ ಗಲಾಟೆ ಆರಂಭಿಸಿದನ್ನು ಕಂಡು ರೈಲ್ವೆ ಸಿಬ್ಬಂದಿ ಅಲ್ಲಿಂದ ಕಾಲ್ತಿತ್ತರು ಎಂದು ಹಾಜರಿದ್ದ ಪೊಲೀಸ್ ಸಿಬ್ಬಂದಿ ಹೇಳಿದರು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸ್ಥಳೀಯ ಪೊಲೀಸ್ ವೃತ್ತ ನಿರೀಕ್ಷಕ ಎಸ್. ನಾಗರಾಜ್, ಪಿಎಸ್‌ಐ ಕೊಟ್ರೇಶ್ ತಮ್ಮ ಇಲಾಖೆ ಹಾಗೂ ರೈಲ್ವೆ ಸ್ಟೇಷನ್ ಮಾಸ್ಟರ್ ಜತೆಗೂಡಿ ಹಣದ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ಪ್ರಯಾಣದರ ಹಿಂದಕ್ಕೆ ನೀಡುವ ಜತೆಗೆ ಅವರು ತೆರಳಲು ಬೆಳಗಿನ ಜಾವ 4 ಸುಮಾರಿಗೆ ಒಟ್ಟು ಎಂಟು ಬಸ್ಸುಗಳ ವ್ಯವಸ್ಥೆ ಮಾಡಿದರು.ನಂತರ ರೈಲು ವಾಪಾಸ್ ಹೋಗಿ ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿತು ಎಂದು ಸ್ಟೇಷನ್ ಮಾಸ್ಟರ್ ಪ್ರತಾಪ್ ಹೇಳಿದರು.
ಸೋಮವಾರ ಸಂಜೆಯಿಂದ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಯಥಾ ಪ್ರಕಾರ ಸಂಚರಿಸಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.