ADVERTISEMENT

ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಮೊಳಕಾಲ್ಮುರು: ಉದ್ಯೋಗ ಖಾತ್ರಿ ಯೋಜನೆ ಜಾಗೃತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 8:07 IST
Last Updated 13 ಡಿಸೆಂಬರ್ 2013, 8:07 IST

ಮೊಳಕಾಲ್ಮುರು: ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಾಲ್ಲೂಕು ಪಂಚಾಯ್ತಿ ಇಒ ರುದ್ರಮುನಿಯಪ್ಪ ಸೂಚಿಸಿದರು.

ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಗುರುವಾರ ಉದ್ಯೋಗಖಾತ್ರಿ ಯೋಜನೆಯ ಕಾಯಕಬಂಧು, ಪಿಡಿಒ ಹಾಗೂ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನೂತನವಾಗಿ ಖಾತ್ರಿ ಯೋಜನೆ ಯಲ್ಲಿ ಕಾಯಕಬಂಧು ಹುದ್ದೆ ಸೃಷ್ಟಿ ಮಾಡಲಾಗಿದೆ. 20–25 ಮಂದಿ ಕಾರ್ಮಿಕರ ಗುಂಪು ರಚಿಸಿಕೊಂಡು ಗ್ರಾಮಪಂಚಾಯ್ತಿ ಅನುಮತಿ ಪಡೆದು ಕಾಮಗಾರಿ ಮಾಡಬೇಕು. ಕಾಯಕಬಂಧು ವ್ಯಕ್ತಿಗೆ ಪ್ರತಿ ಕಾರ್ಮಿಕರಿಗೆ ₨ 3ರಂತೆ ನೀಡಲಾಗುವುದು. ಒಂದು ರೀತಿ ಮೇಸ್ತ್ರಿ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ನೂತನವಾಗಿ ಯೋಜನೆಯಲ್ಲಿ ನಮ್ಮಹೊಲ ನಮ್ಮರಸ್ತೆ, ವೈಯಕ್ತಿಕ ಶೌಚಾಲಯ ನಿರ್ಮಾಣ, ಆಟದ ಮೈದಾನ, ಅರಣ್ಯೀಕರಣ, ಕುಡಿಯುವ ನೀರಿನ ತೊಟ್ಟಿ, ಜಾನುವಾರು ಸಾಕಣೆ ಸ್ಥಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ.

ಗ್ರಾಮ ಸಭೆಗಳ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅನುಕೂಲ ಕಲ್ಪಿಸಬೇಕು. ಬರ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜನರು ಗುಳೆ ಹೋಗದಂತೆ ತಡೆದು ಖಾತ್ರಿ ಯೋಜನೆಯಲ್ಲಿ ಉದ್ಯೋಗ ನೀಡಬೇಕು ಎಂದು ಹೇಳಿದರು.

ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಈವರೆಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ₨ 10 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿತ್ತು, ಇದನ್ನು ನೂತನವಾಗಿ ₨ 15 ಸಾವಿರಕ್ಕೆ ಏರಿಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿ  ಕ್ರಮ ಕೈಗೊಳ್ಳಬೇಕು.

ಯೋಜನೆ ಬಗ್ಗೆ ಕರಪತ್ರ, ಆಟೊ ಪ್ರಚಾರ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು. ತಪ್ಪಿದಲ್ಲಿ ಪಿಡಿಒಗಳನ್ನು ಹೊಣೆಯಾಗಿಸಲಾಗುವುದು ಎಂದು ಇಒ ಹೇಳಿದರು. ಸಹಾಯಕ ಲೆಕ್ಕಾಧಿಕಾರಿ ಪಾಲಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.