ADVERTISEMENT

ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:45 IST
Last Updated 23 ಸೆಪ್ಟೆಂಬರ್ 2011, 6:45 IST

ಭರಮಸಾಗರ: ಇಲ್ಲಿನ ಬಿಳಿಚೋಡು ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸರಿಯಾಗಿ ಸರ್ವೇ ಕಾರ್ಯ ನಡೆಸದೆ ತಾರತಮ್ಯವೆಸಗುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ರಸ್ತೆ ವಿಸ್ತರಣೆ ಕಾಮಗಾರಿಗೆ ಅಡ್ಡಿಪಡಿಸಿದ ಘಟನೆ ಗುರುವಾರ ನಡೆಯಿತು.

ಹಿಂದೆ ಸರ್ವೇ ಮಾಡಿದ್ದ ವೇಳೆ ಗುರುತು ಮಾಡಿದ್ದ ಸ್ಥಳಕ್ಕೆ ಬದಲಾಗಿ ಈಗ ಹೆಚ್ಚಿನ ಸ್ಥಳ ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದರು. ಗುರುವಾರ ರಸ್ತೆಯ ಎರಡೂ ಬದಿ ಚರಂಡಿಯವರೆಗೆ ವಿಸ್ತರಣೆ ಕಾರ್ಯ ಆರಂಭಿಸಲಾಯಿತು.
 
ಈ ಸಂದರ್ಭದಲ್ಲಿ ಚರಂಡಿ ಮೇಲೆ ಕಟ್ಟಿಕೊಂಡಿದ್ದ ಅನೇಕ ಮನೆಗಳ, ಅಂಗಡಿಗಳ ಸ್ವಲ್ಪ ಭಾಗ ತೆರವುಗೊಳಿಸುವುದು ಅನಿವಾರ್ಯವಾಯಿತು.

ಬಿಳಿಚೋಡು ವೃತ್ತದ ಬಳಿ ಜೆಸಿಬಿ ಯಂತ್ರಗಳ ಮುಖಾಂತರ ಒತ್ತುವರಿ ಜಾಗ ತೆರವುಗೊಳಿಸುವಾಗ ರಸ್ತೆ ಒಂದು ಬದಿ ಮಾತ್ರ ಚರಂಡಿ ಮೇಲೆ ಕಟ್ಟಿಕೊಂಡ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಇನ್ನೊಂದು ಬದಿ ಹಾಗೇ ಬಿಡುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ಆಕ್ರೋಶಗೊಂಡ ವರ್ತಕರು, ಸಾರ್ವಜನಿಕರು ತಕರಾರು ತೆಗೆದು ಅಡ್ಡಿಪಡಿಸಿದ ಕಾರಣ ಕೆಲಕಾಲ ಕಾಮಗಾರಿ ಸ್ಥಗಿತಗೊಂಡಿತು.

ಈ ವೇಳೆ ಇಲಾಖೆ ಅಧಿಕಾರಿಗಳು, ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಅಂತಿಮವಾಗಿ ಇಲಾಖೆ ಎಂಜಿನಿಯರ್ ತಿರ್ಮಾನವೇ ಅಂತಿಮ. ಕಾಮಗಾರಿಗೆ ಅಡ್ಡಿಪಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಂತರ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಅಳತೆ ಕಾರ್ಯ ನಡೆಸಿ ರಸ್ತೆ ಇನ್ನೊಂದು ಬದಿಯ ಚರಂಡಿ ಬಳಿಯ ಒತ್ತುವರಿ ಜಾಗ ತೆರವುಗೊಳಿಸುವುದಾಗಿ ತಿಳಿಸಿದ ನಂತರ ಕಾಮಗಾರಿ ನಡೆಯಲು ಅನುವು ಮಾಡಿಕೊಡಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.