ADVERTISEMENT

ರಾಗಿ, ನವಣೆ ಬೆಳೆಗಳಿಗೆ ಕೀಟ ಬಾಧೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 6:38 IST
Last Updated 2 ಅಕ್ಟೋಬರ್ 2017, 6:38 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಹಳ್ಳಿಯೊಂದರಲ್ಲಿ ತೆನೆ ಬಿಡುವ ಹಂತಕ್ಕೆ ಬಂದಿರುವ ರಾಗಿ ಬೆಳೆಗೆ ಹಸಿರು ಕಾಂಡ ಕೊರಕ ಹುಳುವಿನ ಬಾಧೆ ತಗುಲಿರುವುದು.
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಹಳ್ಳಿಯೊಂದರಲ್ಲಿ ತೆನೆ ಬಿಡುವ ಹಂತಕ್ಕೆ ಬಂದಿರುವ ರಾಗಿ ಬೆಳೆಗೆ ಹಸಿರು ಕಾಂಡ ಕೊರಕ ಹುಳುವಿನ ಬಾಧೆ ತಗುಲಿರುವುದು.   

ಹಿರಿಯೂರು: ತಾಲ್ಲೂಕಿನ ಧರ್ಮಪುರ, ಜವನಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ಅನೇಕ ಗ್ರಾಮಗಳಲ್ಲಿ ಬಿತ್ತನೆ ಮಾಡಿರುವ ರಾಗಿ, ನವಣೆ ಬೆಳೆಗಳಿಗೆ ಸೈನಿಕ ಹುಳು, ಹಸಿರು ಕಾಂಡ ಕೊರಕ ಮತ್ತು ಕೊಂಡ್ಲಿ ಹುಳುವಿನ ಬಾಧೆ ಕಂಡುಬಂದಿದ್ದು, ರೈತರು ತಕ್ಷಣ ಹತೋಟಿ ಕ್ರಮಕ್ಕೆ ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಅಸ್ಲಾಂ ಸೂಚಿಸಿದ್ದಾರೆ.

ಸೈನಿಕ ಹುಳುಗಳು ಹಗಲು ಹೊತ್ತಿನಲ್ಲಿ ಸುಳಿಯಲ್ಲಿ ಅಥವಾ ಗಿಡದ ಬುಡದಲ್ಲಿ ಅಡಗಿಕೊಂಡು, ರಾತ್ರಿ ವೇಳೆ ಎಲೆಗಳನ್ನು ತೀವ್ರ ಗತಿಯಲ್ಲಿ ತಿಂದು ಹಾನಿ ಮಾಡುತ್ತವೆ. ಇವುಗಳ ಸಂಖ್ಯೆ ಹೆಚ್ಚಾದಂತೆ ಹಾನಿಯ ಪ್ರಮಾಣವೂ ಹೆಚ್ಚುತ್ತದೆ.

ಎಲೆಯ ಮಧ್ಯದ ನರವೊಂದನ್ನು ಬಿಟ್ಟು ಉಳಿದೆಲ್ಲಾ ಭಾಗವನ್ನು ಅವು ತಿಂದು ಹಾಕುತ್ತವೆ. ಸೈನಿಕ ಹುಳುವಿನ ಹತೋಟಿಗಾಗಿ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಕ್ಲೋರೋಫೈರಿಫಾಸ್ 20 ಅಥವಾ ಕ್ಸೀನಾಲ್ ಫಾಸ್ 25 ಇಸಿ ಬೆರೆಸಿ ಸಿಂಪಡಿಸಬೇಕು.

ADVERTISEMENT

ಮರಿ ಹುಳುಗಳು ಮೊದಲನೇ ಅಥವಾ ಎರಡನೇ ಹಂತದಲ್ಲಿರುವಾಗ ಸಿಂಪರಣಾ ಕ್ರಮ ಅನುಸರಿಸಿದರೆ ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು. ಆದ್ದರಿಂದ ರೈತ ಭಾಂದವರು ಹೊಲದಲ್ಲಿ ಹುಳುಗಳ ಹಾವಳಿಯನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಮರಿ ಹುಳುಗಳು ಗಾತ್ರದಲ್ಲಿ ದಪ್ಪವಾದಾಗ ಕೀಟನಾಶಕಗಳಿಂದ ಹತೋಟಿ ಅಸಾಧ್ಯ ಎನಿಸಿದಲ್ಲಿ, ವಿಷ ಪಾಷಾಣಾ ಬಳಕೆಯಿಂದ ಕೀಟಗಳನ್ನು ಹತೋಟಿಯಾಗಿ ನಿಯಂತ್ರಿಸಬಹುದು. 10 ಕೆಜಿ ಅಕ್ಕಿತೌಡು, 1ಕೆಜಿ ಬೆಲ್ಲ ಹಾಗೂ ಸ್ವಲ್ಪ ನೀರು ಬೆರೆಸಿ ಒಂದು ದಿನ ನೆನೆಸಬೇಕು.

ಮಾರನೇ ದಿನ ಮೋನೋಕ್ರೋಟೋಫಾಸ್ 30 ಎಸ್.ಎಲ್ ಕೀಟನಾಶಕವನ್ನು 150 ಮಿ.ಲೀ. ಮಿಶ್ರಣ ಮಾಡಿ ಸಂಜೆಯ ವೇಳೆ ಹೊಲದಲ್ಲಿ ಸಾಲಿನಲ್ಲಿ ಚೆಲ್ಲಬೇಕು. ಆಗ ಹುಳುಗಳು ಆಕರ್ಷಣೆಗೊಂಡು ಪಾಷಾಣ ತಿಂದು ಸಾಯುತ್ತವೆ. ಕೀಟನಾಶಕ ಬೆರೆಸುವಾಗ ಮತ್ತು ಹೊಲದಲ್ಲಿ ಎರಚುವಾಗ ಕೈಗೆ ಪ್ಲಾಸ್ಟಿಕ್ ಚೀಲ ಹಾಕಿಕೊಳ್ಳಬೇಕು ಮತ್ತು ವಿಷ ಪಾಷಾಣವನ್ನು ಹೊಲದಲ್ಲಿ ಎರಚಿದಾಗ ಜಾನುವಾರುಗಳು ಮೇವು ತಿನ್ನದಂತೆ ನೋಡಿಕೊಳ್ಳಬೇಕು ಎಂದು ಅಸ್ಲಂ ಸಲಹೆ ನೀಡಿದ್ದಾರೆ.

ಹೊಲದ ಸುತ್ತಲೂ ಬದು ತೆಗೆದು ಪೆನ್ವಲರೇಟ್ 0.4 ಡಸ್ಟ್ ಅಥವಾ ಮ್ಯಾಲಾಥಿಯಾನ್ 5 % ಡಸ್ಟ್ ಹಾಕಿ ಕೀಟಗಳು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹೋಗುವುದನ್ನು ತಪ್ಪಿಸಬಹುದು. ಕೀಟನಾಶಕಗಳು ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಸಾರ್ವತ್ರಿಕ ರಜಾ ದಿನಗಳಲ್ಲು ಕೀಟ ನಾಶಕ ಮಾರಾಟ ಇದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.