ADVERTISEMENT

ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 6:50 IST
Last Updated 15 ಅಕ್ಟೋಬರ್ 2017, 6:50 IST
ಚಿತ್ರದುರ್ಗದ ಜ್ಞಾನವಿಕಾಸ ಶಾಲಾ ಮುಂಭಾಗದಲ್ಲಿ ಒತ್ತುವರಿ ಮಾಡಿಕೊಂಡ ರಾಜಕಾಲುವೆ ಮಾರ್ಗವನ್ನು ಶನಿವಾರ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುತ್ತಿರುವುದು.
ಚಿತ್ರದುರ್ಗದ ಜ್ಞಾನವಿಕಾಸ ಶಾಲಾ ಮುಂಭಾಗದಲ್ಲಿ ಒತ್ತುವರಿ ಮಾಡಿಕೊಂಡ ರಾಜಕಾಲುವೆ ಮಾರ್ಗವನ್ನು ಶನಿವಾರ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುತ್ತಿರುವುದು.   

ಚಿತ್ರದುರ್ಗ: ‘ಸ್ವಾಮಿ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಅಬ್ಬರದ ಮಳೆಯಿಂದಾಗಿ ಮೂವರು ರಾಜಕಾಲುವೆಗಳಲ್ಲಿ ಕೊಚ್ಚಿ ಹೋಗಿದ್ದಾರಂತೆ. ಮುಂದೊಂದು ದಿನ ಇಲ್ಲಿಯೂ ಕೂಡ ಆ ರೀತಿ ಆಗಬಹುದು. ಆದ್ದರಿಂದ ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆ ತೆರವುಗೊಳಿಸಿ, ಜನರ ಜೀವ ಉಳಿಸಿ’

ಇಲ್ಲಿನ ಜ್ಞಾನವಿಕಾಸ ಶಾಲೆ ಮುಂಭಾಗದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆಯನ್ನು ಶನಿವಾರ ತಹಶೀಲ್ದಾರ್ ಮಲ್ಲಿಕಾರ್ಜುನ್, ಪೌರಾಯುಕ್ತ ಚಂದ್ರಪ್ಪ ನೇತೃತ್ವದಲ್ಲಿ ತೆರವುಗೊಳಿಸುತ್ತಿದ್ದ ವೇಳೆ ನಾಗರಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದು ಹೀಗೆ.

ನಗರದಲ್ಲಿ ಶುಕ್ರವಾರ ಸಂಜೆ 7ಕ್ಕೆ ಪ್ರಾರಂಭವಾಗಿ ರಾತ್ರಿ 8.30ರವರೆಗೂ ಸುರಿದ ಭಾರಿ ಮಳೆಯಿಂದಾಗಿ ಚಂದ್ರವಳ್ಳಿ ಕೆರೆ ಪ್ರಥಮ ಬಾರಿ ಕೋಡಿ ಬಿದ್ದಿದೆ. ಈ ಹಿಂದೆಯೇ ಕೋಡಿ ಬಿದ್ದಿದ್ದ ಸಿಹಿನೀರು ಹೊಂಡದಿಂದ ಮತ್ತೊಮ್ಮೆ ಜಲಧಾರೆ ಹುಕ್ಕಿ ಹರಿದು, ತಗ್ಗು ಪ್ರದೇಶದ ಬಡಾವಣೆಗಳತ್ತ ಸಾಗಿ ಹರಿದು ಬಂದಿದೆ.

ADVERTISEMENT

ಇದರಿಂದಾಗಿ ರಾಜಕಾಲುವೆಗಳ ಮೂಲಕ ಕೆರೆಗಳಿಗೆ ಹೋಗಬೇಕಿದ್ದ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಒತ್ತುವರಿಯೇ ಇದಕ್ಕೆ ಬಹುಮುಖ್ಯ ಕಾರಣ ಎಂಬುದು ನೆಹರೂ ನಗರ, ಚೇಳುಗುಡ್ಡದ ಸುತ್ತಮುತ್ತಲಿನ ಕೆಲ ನಾಗರಿಕರ ಆರೋಪ.

ಜಗ್ಗದ ತಹಶೀಲ್ದಾರ್: ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಜ್ಞಾನವಿಕಾಸ ಶಾಲೆ ಸಂಸ್ಥಾಪಕ ಡಿ.ಮಲ್ಲಿಕಾರ್ಜುನ್ ತೆರವುಗೊಳಿಸದಂತೆ ಮನವಿ ಮಾಡಿಕೊಂಡರು. ಕಾಂಗ್ರೆಸ್ ಮುಖಂಡ ಬಿ.ಟಿ.ಜಗದೀಶ್ ಮಧ್ಯೆ ಪ್ರವೇಶಿಸಿ, ನಗರ ವ್ಯಾಪ್ತಿಯಲ್ಲಿ ಮೊದಲು ಕೆಲ ಖಾಸಗಿ ಬಾರ್‌ಗಳು, ಹೋಟೆಲ್‌ಗಳು, ಖಾಸಗಿ ಆಸ್ಪತ್ರೆಗಳು ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆ ತೆರವುಗೊಳಿಸಿ.

ಅದನ್ನು ಬಿಟ್ಟು, ಇಲ್ಲಿ ತೆರವು ಮಾಡುತ್ತಿರುವುದು ಸರಿಯಲ್ಲ. ಇದು ಜ್ಞಾನ ದೇಗುಲ, ನೂರಾರು ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ’ ಎಂದು ಮನವಿ ಮಾಡಿದರು. ಆದರೆ, ಒತ್ತಡಕ್ಕೆ ಮಣಿಯದ ತಹಶೀಲ್ದಾರ್ ತೆರವು ಕಾರ್ಯ ಮುಂದುವರಿಸಿದರು.

ಪ್ರತಿಭಟನೆ, ಆಕ್ರೋಶ: ಜ್ಞಾನ ವಿಕಾಸ ಶಾಲೆಯ ಮುಂಭಾಗದ 100ಕ್ಕೂ ಅಧಿಕ ಮನೆಗಳಿಗೆ ಚರಂಡಿ ನೀರು ನುಗ್ಗಿತು. ಶುಕ್ರವಾರ ರಾತ್ರಿ ಸ್ಥಳ ಪರಿಶೀಲಿಸಲು ಪೌರಾಯುಕ್ತ ಚಂದ್ರಪ್ಪ ಬಂದಾಗ ನಾಗರಿಕರು ಅವರೊಂದಿಗೆ ವಾಗ್ವಾದ ನಡೆಸಿದರು. ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ ಮುತ್ತಿಗೆ ಹಾಕಿದರು. ಪ್ರತಿಭಟನೆಯನ್ನೂ ನಡೆಸಿದರು.

‘ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಾಗ 10, 11 ಮತ್ತು 12ನೇ ವಾರ್ಡ್‌ನಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅನಾಹುತ ಸಂಬವಿಸಿದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬರುತ್ತಾರೆ. ಪ್ರಾಣಾಪಾಯ ಆದರೆ, ಪರಿಹಾರ ನೀಡಬಹುದು.

ಮರಳಿ ಪ್ರಾಣ ತಂದು ಕೊಡಲು ಸಾಧ್ಯವೇ’ ಎಂದು ಜೈ ಹಿಂದ್ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ವಕ್ ಅಹಮದ್ ತಹಶೀಲ್ದಾರ್ ಮತ್ತು ಪೌರಾಯುಕ್ತರನ್ನು ಪ್ರಶ್ನಿಸಿದರು. ರಾಜಕಾಲುವೆ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಡಳಿತದ ಕಚೇರಿ ಮುಂಭಾಗದಲ್ಲಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಕೊಚ್ಚಿ ಹೋಗಬೇಕಿತ್ತು: ‘ರಾತ್ರಿ ಮನೆಗಳಿಗೆ ನುಗ್ಗಿದ ನೀರಿನ ಪ್ರಮಾಣ ನೋಡಿದರೆ, ನಮಗೆಲ್ಲ ಭಯದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಅಲುಗಾಡಿದ್ದು, ಕುಸಿಯಬೇಕಿತ್ತು. ಮನೆಯಿಂದ ಹೊರಬಂದು, ಒಂದು ವೇಳೆ ಕೊಚ್ಚಿ ಹೋಗಿ ದೊಡ್ಡ ಅನಾಹುತ ಸಂಭವಿಸಿದ್ದರೆ, ಯಾರು ಹೊಣೆ? ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಟ್ಟು, ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಗಳನ್ನು ಎಷ್ಟೇ ಪ್ರಭಾವಶಾಲಿ ವ್ಯಕ್ತಿಗಳು ಆಗಿದ್ದರೂ ಮೊದಲು ತೆರವುಗೊಳಿಸಲು ಮುಂದಾಗಬೇಕು’ ಎಂದು ಸ್ಥಳೀಯರಾದ ರವಿ, ಮಂಜು ಆಗ್ರಹಿಸಿದರು.

ನಿರ್ದಾಕ್ಷಿಣ್ಯವಾಗಿ ತೆರವು: ‘ರಾಜಕಾಲುವೆ ಒತ್ತುವರಿಯಿಂದಾಗಿ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರು ಮನವಿ ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಯಾವ ಒತ್ತಡಗಳಿಗೂ ಒಳಗಾಗದೇ ತೆರವು ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.