ADVERTISEMENT

ರೈತರ ಅಭಿವೃದ್ಧಿಗೆ ಮುಂದಾದ ಕೃಷಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:15 IST
Last Updated 2 ಸೆಪ್ಟೆಂಬರ್ 2013, 5:15 IST

ಹೊಸದುರ್ಗ: ಪಟ್ಟಣದ ಕೃಷಿ ಇಲಾಖೆ ತನ್ನ ಯೋಜನೆ ಹಾಗೂ ರೈತ ಪರ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುತ್ತಿರುವ ದೃಶ್ಯ ತಾಲ್ಲೂಕಿನ ಅನೇಕ ಬಸ್ ತಂಗುದಾಣಗಳಲ್ಲಿ ಕಂಡುಬರುತ್ತಿದೆ.

ಹಿಂದೆ ಕೃಷಿ ಮಾಹಿತಿ ನೀಡಲು ಗ್ರಾಮ ಸೇವಕರು ಹಳ್ಳಿ ಹಳ್ಳಿಗೆ ಹೋಗಿ ಹರಸಾಹಸ ಪಡಬೇಕಿತ್ತು. ಆದರೆ ಈಗ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅಂತರ್‌ಜಾಲದ ಮೂಲಕ ರೈತನ ಅಭಿವೃದ್ಧಿಗೆ ಪೂರಕ ಮಾಹಿತಿ ನೀಡುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ರೈತರಿಗೆ ವೈಜ್ಞಾನಿಕ ಮಾಹಿತಿ ನೀಡಲು ಇಲ್ಲಿನ ಕೃಷಿ ಇಲಾಖೆ ಬಸ್ ತಂಗುದಾಣ ಗಳನ್ನು ಬಳಸಿಕೊಂಡು, ಕೃಷಿ ಅಭಿವೃದ್ಧಿ ಪ್ರಚಾರ ಕಾರ್ಯಕ್ಕೆ ಸರಳ ಮಾರ್ಗೋಪಾಯ ಹುಡುಕಿಕೊಂಡಿದೆ.

ಕೃಷಿ ಇಲಾಖೆ ಯೋಜನೆಯಿಂದ ತಾಲ್ಲೂಕಿನ ಅನೇಕ ಬಸ್ ತಂಗುದಾಣ ಗಳು ಸ್ವಚ್ಛವಾಗಿದ್ದು, ಅನೇಕರನ್ನು ಆಕರ್ಷಿಸುತ್ತಿವೆ. ಬಸ್‌ನಿಲ್ದಾಣಕ್ಕೆ ಬರುವ ರೈತರಿಗೆ, ಕೃಷಿಪರ ಮಾಹಿತಿ ನೀಡುವಲ್ಲಿ ಪಟ್ಟಣದ ಕೃಷಿ ಇಲಾಖೆ ಅನುಸರಿಸುತ್ತಿರುವ ಮಾರ್ಗ ಉತ್ತಮ ವಾಗಿದೆ ಎಂಬ ಮಾತುಗಳು ತಾಲ್ಲೂಕಿನ ರೈತರಿಂದ ಕೇಳಿಬರುತ್ತಿವೆ.

ಗೊಬ್ಬರ ಬಳಕೆ ವಿಧಾನ, ಅನ್ನದಾತ ನೇಗಿಲು ಹಿಡಿದು ಉಳುಮೆ ಮಾಡುತ್ತಿರುವುದು, ಭೂಚೇತನ, ಕೀಟಬಾಧೆ, ಕೃಷಿ ಸಂಸ್ಕರಣಾ ಮಾಹಿತಿ, ಸಾವಯವ ಕೃಷಿ ಸೇರಿದಂತೆ ವ್ಯವಸಾಯಕ್ಕೆ ಸಂಬಂಧಿಸಿದ ಮಾಹಿತಿ, ವೈಜ್ಞಾನಿಕ ಕೃಷಿ ಪದ್ಧತಿಯ ಕುರಿತು ಗೋಡೆ ಬರಹ ಕಂಡುಬರುತ್ತಿದೆ.

ಅಧಿಕಾರಿ ಪ್ರತಿಕ್ರಿಯೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸುಮಾರು 22, ಪಟ್ಟಣದ ಐಬಿ ಹತ್ತಿರದ ಬಸ್ ನಿಲ್ದಾಣ ಹಾಗೂ ಐಬಿ ಮತ್ತು ಕೃಷಿ ಕಚೇರಿ ಮಾರ್ಗದ ಗೋಡೆಗಳ ಮೇಲೆ ಕೃಷಿ ಅಭಿವೃದ್ಧಿಗೆ ಪೂರಕವಾದ ಹಿತಿಯನ್ನು ಬರೆಸಿರುವುದಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಕೃಷಿ ನಿರ್ದೇಶಕಿ ಡಾ.ಎಂ.ಆರ್. ಹಂಸವೇಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.