ADVERTISEMENT

ರ‍್ಯಾಂಕ್‌ ಬಂದಿದ್ದೀನಿ, ಯಾಕೆ ನನ್ನ ಹೆಸರು ಹಾಕ್ಸಿಲ್ಲ...!

ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಟ ದತ್ತಣ್ಣ ಬಿಚ್ಚಿಟ್ಟ ನೆನಪುಗಳು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 9:20 IST
Last Updated 29 ಮಾರ್ಚ್ 2018, 9:20 IST

ಚಿತ್ರದುರ್ಗ: ‘1959ರಲ್ಲಿ ನಾನು ಇದೇ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಓದಿದ್ದೆ. ಆಗ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಬಂದಿದ್ದೆ. ಕಾಲೇಜಿನ ಬೋರ್ಡ್‌ ನಲ್ಲಿ ನನ್ನ ಹೆಸರೇ ಹಾಕ್ಸಿಲ್ಲ. ಎಲ್ಲ ಯೂನಿರ್ವಸಿಟಿ ವಿದ್ಯಾರ್ಥಿಗಳ ಹೆಸರು ಹಾಕಿಸಿದ್ದೀರಿ...’

ಸರ್ಕಾರಿ ವಿಜ್ಞಾನ ಕಾಲೇಜಿನ ಅಂಗಳದಲ್ಲಿ ಪಾಚಿ ಹಸಿರು ಬಣ್ಣದ ಜುಬ್ಬ ತೊಟ್ಟ, ಬಿಳಿ ಕೂದಲಿನ ವ್ಯಕ್ತಿಯೊಬ್ಬರು ಕಾಲೇಜಿನ ಅಧ್ಯಾಪಕ ವೃಂದವನ್ನು ಹೀಗೆ ಪ್ರಶ್ನಿಸಿದಾಗ, ಅವರೆಲ್ಲರಿಗೂ ಅಚ್ಚರಿಯೋ ಅಚ್ಚರಿ. ಏನು ಉತ್ತರ ಹೇಳಬೇಕೆಂದು ಗೊತ್ತಾಗಲಿಲ್ಲ. ಒಂದು ಕ್ಷಣ ಮೌನವಹಿಸಿ, ನಂತರ ನಗುಮೊಗದಿಂದ, ‘ಸರ್, 2004ರಿಂದ ಈ ಕಾಲೇಜಿನಿಂದ ಪಿಯುಸಿ ಬೇರ್ಪಟ್ಟಿತು. ಹಾಗಾಗಿ, ಪದವಿ ತರಗತಿಗಳಲ್ಲಿ ರ‍್ಯಾಂಕ್‌ ಬಂದವರ ಹೆಸರು ಹಾಕಿದ್ದೇವೆ. ಮುಂದೆ ನಿಮ್ಮ ಹೆಸರು ಖಂಡಿತಾ ಹಾಕಿಸೋಣ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಅರ್ಧ ಶತಮಾನದ ಹಿಂದೆ ನಡೆದಿರುವ ಈ ಘಟನೆ ಕುರಿತು ಕಾಲೇಜು ಅಧ್ಯಾಪಕರನ್ನು ಪ್ರಶ್ನಿಸಿದವರು ಕೋಟೆನಾಡಿನ ಹೆಮ್ಮೆಯ ಪುತ್ರ,  ಚಿತ್ರನಟ ಎಚ್. ಜಿ.ದತ್ತಾತ್ರೇಯ ಅಲಿಯಾಸ್ ಕನ್ನಡ ನಾಡಿನ ಪ್ರೀತಿಯ ‘ದತ್ತಣ್ಣ’ !

ADVERTISEMENT

ಚಿತ್ರದುರ್ಗದ ದತ್ತಣ್ಣ ಜನಿಸಿದ್ದು 1942ರಲ್ಲಿ. ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಪಿಯುಸಿವರೆಗೆ ದುರ್ಗದ ಸರ್ಕಾರಿ ಶಾಲಾ, ಕಾಲೇಜುಗಳಲ್ಲೇ ಮುಗಿಸಿದ್ದಾರೆ. ಬಾಲಕರ ಸರ್ಕಾರಿ ಪ್ರೌಢಶಾಲೆ (ಈಗ ಜೂನಿಯರ್ ಕಾಲೇಜು)ಯಲ್ಲಿ 10ನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದು, ಮೆರಿಟ್ ಸ್ಕಾಲರ್ಶಿಪ್ ಪಡೆದಿದ್ದರು. ಕನ್ನಡ ಮೀಡಿಯಂ ನಲ್ಲಿ ಹೈಸ್ಕೂಲು ಓದಿ, ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು(ಸರ್ಕಾರಿ ವಿಜ್ಞಾನ ಕಾಲೇಜು), ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್‌ ಪಡೆದಿದ್ದರು ದತ್ತಣ್ಣ. ಇದೇ ಕಾರಣಕ್ಕಾಗಿಯೇ ದತ್ತಣ್ಣ, ಸರ್ಕಾರಿ ವಿಜ್ಞಾನ ಕಾಲೇಜಿನ ಅಧ್ಯಾಪಕರನ್ನು ‘ರ‍್ಯಾಂಕ್‌ ಬಂದ ನನ್ನ ಹೆಸರೇಕೆ ಹಾಕಿಲ್ಲ’ ಎಂದು ಪ್ರಶ್ನಿಸಿದ್ದರು.

ಅಂದ ಹಾಗೆ, ದತ್ತಣ್ಣ ಸಾಕ್ಷ್ಯಚಿತ್ರ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಅಧ್ಯಯನಕ್ಕಾಗಿ ಒಂದು ವಾರದಿಂದ ಚಿತ್ರದುರ್ಗದಲ್ಲಿ ಬೀಡುಬಿಟ್ಟಿದ್ದಾರೆ. ಈ ಸಮಯದಲ್ಲಿ ತಾವು ಕಲಿತ ಶಾಲೆ, ಕಾಲೇಜು, ಓಡಾಡಿದ ಸ್ಥಳಲ್ಲಿ ಅಡ್ಡಾಡುತ್ತಾ, ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ಬಾಲ್ಯದ ಗೆಳೆಯರನ್ನು ಕಂಡು ಮಾತನಾಡಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಬುಧವಾರ ತಾವು ಓದಿದ್ದ ಸರ್ಕಾರಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದ್ದರು.

ಬೆಳಿಗ್ಗೆ 9.45ರ ಸುಮಾರಿಗೆ ದತ್ತಣ್ಣ ಸರ್ಕಾರಿ ವಿಜ್ಞಾನ ಕಾಲೇಜನ್ನು ಪ್ರವೇಶಿಸಿದಂತೆ, ಅಧ್ಯಾಪಕರು ಸಂಭ್ರಮದಿಂದ ಅವರನ್ನು ಸ್ವಾಗತಿಸಿದರು. ನಂತರ ಅವರು ಶಾಲೆಯ ಆವರಣದಲ್ಲಿ ಸುತ್ತಾಡುತ್ತಾ, ಪಿಯುಸಿ ಕಲಿಕೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮಗೆ ಪಾಠ ಮಾಡಿದ ಅಧ್ಯಾಪಕರನ್ನು ದತ್ತಣ್ಣ ನೆನಪಿಸಿಕೊಂಡರು.

ನಟ ದತ್ತಣ್ಣ ತಮ್ಮ ಕಾಲೇಜಿನ ವಿದ್ಯಾರ್ಥಿ ಎಂಬುದು ಅಧ್ಯಾಪಕರಿಗೆ ಎಲ್ಲಿಲ್ಲದ ಸಂಭ್ರಮ. ಆ ಸಂತಸದೊಂದಿಗೆ ಅಧ್ಯಾಪಕರು ಒಬ್ಬೊಬ್ಬರೇ ಪ್ರತ್ಯೇಕವಾಗಿ ’ಸೆಲ್ಫಿ’ ತೆಗೆಸಿಕೊಳ್ಳಲು ಅಪೇಕ್ಷಿಸಿದರು. ಈ ಸಂಭ್ರಮವನ್ನು ಕಂಡ ದತ್ತಣ್ಣ, ‘ಒಬ್ಬೊಬ್ಬರೇಕೆ. ಎಲ್ಲರೂ ಬನ್ನಿ, ಒಟ್ಟಿಗೆ ನಿಂತು ಚಿತ್ರ ತೆಗೆಸಿಕೊಳ್ಳೋಣ’ ಎಂದು ಕರೆದರು. ಕಾಲೇಜಿನ ಎದುರಿಗಿದ್ದ ಕೊಳದ ಎದುರು ಅಧ್ಯಾಪಕರ ಜತೆ ನಿಂತು ದತ್ತಣ್ಣ ಫೋಟೊ ತೆಗೆಸಿಕೊಂಡರು.

ಪ್ರಾಚಾರ್ಯರಾದ ಟಿ.ವಿ.ಸಣ್ಣಮ್ಮ, ಐಕ್ಯೂಎಸಿ ಸಂಚಾಲಕ ಕೆ.ಕೆ.ಕಾಮಾನಿ, ಎನ್. ಎಚ್. ಹನುಮಂತರಾಯ, ಉಮಾ, ಜೋಶಿ, ಸಿಬ್ಬಂದಿಯಾದ ರಂಗನಾಥ, ಪರಮೇಶ್, ತಿಪ್ಪೇಸ್ವಾಮಿ, ನರಸಿಂಹಣ್ಣ ಈ ಸಂದರ್ಭದಲ್ಲಿ ದತ್ತಣ್ಣ ಅವರೊಂದಿಗೆ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.