ADVERTISEMENT

ಲೈಂಗಿಕ ಕಿರುಕುಳ: ಕಾಲೇಜು ಸ್ಥಾಪಕನ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:54 IST
Last Updated 21 ಸೆಪ್ಟೆಂಬರ್ 2013, 8:54 IST

ಚಳ್ಳಕೆರೆ: ಪಟ್ಟಣದ ಹರ್ಷಿಣಿ ಸುಧಾಕರ್‌ ಐಟಿಐ ಕಾಲೇಜಿನ ಸ್ಥಾಪಕ ಕಾಲೇಜು ಮತ್ತು ಸಿದ್ಧ ಉಡುಪು ತರಬೇತಿಗೆ ಬರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಶುಕ್ರವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಐಟಿಐ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ವಿವಾಹಿತೆಯೊಬ್ಬರಿಗೆ ಮೊಬೈಲ್‌ ಕರೆ ಮಾಡಿ ತಮ್ಮ ಮನೆಗೆ ಕರೆದಿದ್ದರು ಎನ್ನಲಾಗಿದೆ. ಈ ವಿಚಾರ ಆಕೆಯ ಪತಿ ಹಾಗೂ ಪೋಷಕರಿಗೆ ತಿಳಿಸಿದ್ದು, ಆತನ ವರ್ತನೆ ಖಂಡಿಸಿ ಮಹಿಳೆಯ ಕುಟಂಬದ ಸದಸ್ಯರು ಹಾಗೂ ಹಿತೈಷಿಗಳು ಪ್ರತಿಭಟನೆ ನಡೆಸಿದರು.

ಹಿರಿಯೂರು ಶಾಸಕ ಡಿ.ಸುಧಾಕರ್‌ ಅವರ ಪತ್ನಿ ಹರ್ಷಿಣಿ ಸುಧಾಕರ್‌ ಅವರ ಹೆಸರಿನಲ್ಲಿ ಐಟಿಐ ಕಾಲೇಜು ನಡೆಸುತ್ತಿರುವ ಆ ವ್ಯಕ್ತಿ ಚಳ್ಳಕೆರೆ ಶಾಸಕ ರಘುಮೂರ್ತಿ ಮತ್ತು ಹಿರಿಯೂರು ಶಾಸಕ ಡಿ.ಸುಧಾಕರ್‌ ಮುಂತಾದ ಗಣ್ಯರ ಹೆಸರು ದುರ್ಬಳಕೆ ಮಾಡಿ ಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಲೆಮರೆಸಿಕೊಂಡಿರುವ ಆರೋಪಿ ಯನ್ನು ಕೂಡಲೇ ಬಂಧಿಸಬೇಕು ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ನಂತರ ಕಾಲೇಜಿಗೆ ತೆರಳಿ ಬೀಗ ಹಾಕಿಸಿ, ನಾಮಫಲಕಕ್ಕೆ ಮಸಿ ಬಳಿದರು. ಫಲಕ ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿಗೆ ಭೇಟಿ ನೀಡಿದ ತಹಶೀಲಾ್ದರ್‌ ವಿಜಯರಾಜು, ಪಿಎಸ್‌ಐ ಶ್ರೀನಿವಾಸ್‌ ಕೆಲ ದಾಖಲೆಗಳನ್ನು ಪರಿಶೀಲಿಸಿದರು. ಆರೋಪದ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಟಿ.ವಿಜಯಕುಮಾರ್‌, ಸದಸ್ಯರಾದ ಎಂ.ಶಿವಮೂರ್ತಿ, ಜಿ.ಕೆ.ಪ್ರಮೋದ್‌, ಬಿ.ಟಿ.ರಮೇಶ್‌, ಶ್ರೀನಿವಾಸ್‌, ಕಾವ್ಯಾ ಮಂಜುನಾಥ್‌, ಭೀಮಣ್ಣ, ಪುರಸಭೆ ಸದಸ್ಯ ಟಿ.ಜೆ.ವೆಂಕಟೇಶ್‌, ಕೆ.ಪಿ.ತಾರಕೇಶ್‌, ಕಾಂಗ್ರೆಸ್‌ ಮುಖಂಡರಾದ ಗುಂಡಪ್ಪರ ಶ್ರೀನಿವಾಸ್‌, ಪಿ.ತಿಪ್ಪೇಸ್ವಾಮಿ, ರಂಗವ್ವನಹಳ್ಳಿ ವೆಂಕಟೇಶ್‌, ಶ್ರೀನಿವಾಸ್‌, ನಾಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.