ADVERTISEMENT

ವಾಗ್ದೇವಿ ಶಾಲೆಯ ಮೋನಿಷಾಗೆ ರಾಜ್ಯಕ್ಕೆ 3ನೇ ಸ್ಥಾನ

ಸತತ ಪರಿಶ್ರಮಕ್ಕೆ ದಕ್ಕಿದ ಪ್ರತಿಫಲ, ವೈದ್ಯೆಯಾಗುವ ಇಂಗಿತ

​ಪ್ರಜಾವಾಣಿ ವಾರ್ತೆ
Published 8 ಮೇ 2018, 10:38 IST
Last Updated 8 ಮೇ 2018, 10:38 IST

ಹೊಳಲ್ಕೆರೆ: ಪಟ್ಟಣದ ವಾಗ್ದೇವಿ ಇಂಟರ್ ನ್ಯಾಷನಲ್ ಶಾಲೆಯ ಎಂ.ಮೋನಿಷಾ ಎಸ್‌ಎಸ್‌ಎಲ್‌ಸಿಯಲ್ಲಿ 623 (ಶೇ 99.68) ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ .

ಕನ್ನಡ-125, ಇಂಗ್ಲಿಷ್-99, ಹಿಂದಿ-100, ಗಣಿತ-100, ವಿಜ್ಞಾನ-99, ಸಮಾಜ ವಿಜ್ಞಾನ-100 ಅಂಕಗಳನ್ನು ಪಡೆದಿದ್ದಾಳೆ.

ಮೋನಿಷಾ ಹೊಸದುರ್ಗ ತಾಲ್ಲೂಕಿನ ಅರಳಿಹಳ್ಳಿಯ ಮಧುಸೂದನ್ -ಸವಿತಾ ದಂಪತಿಯ ಪುತ್ರಿ. ಮಧುಸೂದನ್ ಮಾರ್ಚ್-2018ರವರೆಗೆ ಹೊಳಲ್ಕೆರೆಯಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದು, ಈಗ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಸಿಪಿಐ ಆಗಿದ್ದಾರೆ.

ADVERTISEMENT

‘ಮೋನಿಷಾ ಓದಿನಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಳು. ಪರೀಕ್ಷೆಗೂ ಮೊದಲು ಒಂದು ತಿಂಗಳು ಶಾಲೆಯ ಹಾಸ್ಟೆಲ್‌ನಲ್ಲಿಯೇ ಇದ್ದು, ಅಧ್ಯಯನ ಮಾಡಿದ್ದಳು. ಶಿಕ್ಷಕರೊಂದಿಗೆ ಚರ್ಚಿಸಿ ಗೊಂದಲಗಳನ್ನು ಪರಿಹರಿಸಿ ಕೊಳ್ಳುತ್ತಿದ್ದಳು. ತಾಲ್ಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ‘ಮೋನಿಷಾ ನಮ್ಮ ಶಾಲೆಯ ಹೆಮ್ಮೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಹಾಗೂ ಆಡಳಿತಾಧಿಕಾರಿ ಸುದರ್ಶನ ತಾಯಿಮನೆ ತಿಳಿಸಿದ್ದಾರೆ.

ಬಿಇಒ ಅಭಿನಂದನೆ: ವಾಗ್ದೇವಿ ಶಾಲೆಯಲ್ಲಿ ಅಧ್ಯ ಯನ ಮಾಡಿ ರುವ ಎಂ. ಮೋನಿಷಾ ರಾಜ್ಯಕ್ಕೆ ಮೂರನೇ ಸ್ಥಾನ ಪಡೆಯುವ ಮೂಲಕ ನಮ್ಮ ತಾಲ್ಲೂಕಿಗೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿನಿ, ಶಿಕ್ಷಕರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯನ್ನು ಅಭಿನಂದಿಸುತ್ತೇನೆ. ನಮ್ಮ ತಾಲ್ಲೂಕಿಗೆ ರಾಜ್ಯದಲ್ಲಿ 64ನೇ ಸ್ಥಾನ ಲಭಿಸಿದೆ ಎಂದು ಬಿಇಒ ಜಗದೀಶ್
ತಿಳಿಸಿದ್ದಾರೆ.

ಶೇ 100 ಫಲಿತಾಂಶ: ವಾಗ್ದೇವಿ ಶಾಲೆಗೆ ಶೇ 100 ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಹಾಜರಾಗಿದ್ದ 59 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲೆಯ ಎಲ್.ಎನ್.ಕಾವ್ಯಾ (ಶೇ 94.88), ಆರ್.ಪೂಜಾ (ಶೇ 94.40), ಎಂ.ಯು.ನಿಖಿತಾ (ಶೇ 94.24), ಬಿ.ಪ್ರಿಯಾಂಕ (ಶೇ 93.44), ಎನ್.ಆರ್.ಕಾರ್ತಿಕ್ (ಶೇ 93.28) ಜಿ.ಟಿ.ಐಶ್ವರ್ಯಾ (ಶೇ 91.04), ಟಿ.ಪಿ.ವಿದ್ಯಾಶ್ರೀ (ಶೇ 91.04), ಕೀರ್ತನಾ ಕುಂಬಾರ್ (ಶೇ 90.08) ಉತ್ತಮ ಸಾಧನೆ ಮಾಡಿದ್ದಾರೆ.

ವೈದ್ಯೆ ಆಗುವ ಆಸೆ ಇದೆ: ಮೋನಿಷಾ

‘ರಾಜ್ಯಕ್ಕೆ 3ನೇ ಸ್ಥಾನ ಪಡೆದಿರುವುದು ನನಗೆ ಹೆಚ್ಚು ಖುಷಿ ತಂದಿದೆ. ಮುಂದೆ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಎಂ.ಬಿ.ಬಿ.ಎಸ್ ಮಾಡುವ ಆಸೆ ಇದೆ’ ಎಂದು ವಿದ್ಯಾರ್ಥಿನಿ ಎಂ.ಮೋನಿಷಾ ತಿಳಿಸಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡ ಮೋನಿಷಾ, ‘ನಾನು ಪರೀಕ್ಷೆಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಗೈಡ್, ಅಧ್ಯಯನ ಸಾಮಗ್ರಿಗಳಿಗಿಂತ ಪಠ್ಯಪುಸ್ತಕಗಳನ್ನು ಹೆಚ್ಚು ಓದುತ್ತಿದ್ದೆ. ಪ್ರತಿ ವಿಷಯದ ಪಠ್ಯಪುಸ್ತಕಗಳನ್ನು ಐದು ಬಾರಿ ಓದಿ ಮುಗಿಸಿದ್ದೆ. ಓದುವಾಗ ಎದುರಾಗುವ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದೆ. ಶಿಕ್ಷಕರ ಪ್ರೋತ್ಸಾಹ, ತಂದೆ, ತಾಯಿಯ ಪ್ರೇರಣೆಯಿಂದ ಈ ಸಾಧನೆ ಮಾಡಿದ್ದೇನೆ’ ಎಂದರು.

‘ಮಗಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ. ಅವರ ಅಮ್ಮ ಸವಿತಾ ಮಗಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು. ಎಲ್ಲಾ ವಿಷಯಗಳಿಂದ 5 ಅಂಕಗಳು ಕಡಿಮೆ ಆಗಬಹುದು ಎಂದು ಹೇಳುತ್ತಿದ್ದಳು. ಆದರೆ ಅವಳ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ. ವಾಗ್ದೇವಿ ಶಾಲೆಯ ಶಿಕ್ಷಕರ ಸಲಹೆ ಪಡೆದು, ಮಗಳು ಆಸಕ್ತಿ ತೋರುವ ಕಾಲೇಜಿಗೆ ಪ್ರವೇಶ ಮಾಡಿಸುತ್ತೇನೆ’ ಎಂದು ಮೋನಿಷಾ ತಂದೆ ಮಧುಸೂಧನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.