ಚಿತ್ರದುರ್ಗ: ‘ವಿಪತ್ತು ನಿರ್ವಹಣೆಗೆ ಸಂಪನ್ಮೂಲ ಕ್ರೋಡೀಕರಣವಾಗಿದ್ದರೆ, ಪ್ರಕೃತಿ ವಿಕೋಪ ಅಥವಾ ಮಾನವ ನಿರ್ಮಿತ ವಿಕೋಪದಂತಹ ಘಟನೆಗಳು ಸಂಭವಿಸಿದಾಗ, ತಕ್ಷಣವೇ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ’ ಎಂದು ಆಡಳಿತ ತರಬೇತಿ ಸಂಪನ್ಮೂಲ ವ್ಯಕ್ತಿ ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ‘ಜಿಲ್ಲಾ ಸ್ವಯಂಚಾಲಿತ ವಿಕೋಪ ನಿರ್ವಹಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ವಿಶ್ವದ ಶೇ ೫೦ರಷ್ಟು ಭೂ ಪ್ರದೇಶ ಪ್ರಾಕೃತಿಕವಾಗಿ ಭೂಕಂಪ, ಸುನಾಮಿ, ಬಿರುಗಾಳಿ, ಅತಿಯಾದ ಮಳೆಯಿಂದ ವಿಕೋಪಗಳಿಗೆ ತುತ್ತಾಗುತ್ತಿದೆ. ವಿಕೋಪಗಳಿಂದ ಅಪಾರ ಆಸ್ತಿ, ಪ್ರಾಣಹಾನಿ ಸಂಭವಿಸುತ್ತಿದೆ. ಇದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ದೇಶದಲ್ಲಿ ವಿಕೋಪದ ನಂತರ ಪರಿಹಾರ ಕಾರ್ಯಕ್ಕಾಗಿ ಪ್ರತಿ ವರ್ಷ ಸರಾಸರಿ ₨ ೨೫ ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ.
ಇಂಥ ನಷ್ಟ ತಡೆಗಟ್ಟಲು ಸರ್ಕಾರ ೨೦೦೫ ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚಿಸಿದೆ. ಎಲ್ಲಾ ರಾಜ್ಯಗಳಲ್ಲೂ ವಿಪತ್ತು ನಿರ್ವಹಣಾ ಸಮಿತಿಗಳನ್ನು ಆರಂಭಿಸಲಾಗಿದು, ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘ಪ್ರಕೃತಿ ಅಥವಾ ಮಾನವ ನಿರ್ಮಿತ ವಿಕೋಪ ಘಟನೆಗಳನ್ನು ಸಮರ್ಥವಾಗಿ ನಿಭಾಯಿಸು ವುದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸುವ ಕೆಲಸವನ್ನು ಆಡಳಿತ ತರಬೇತಿ ಸಂಸ್ಥೆ ವತಿಯಿಂದ ಕೈಗೊಳ್ಳಲಾಗುತ್ತಿದೆ. ಈಗಾಗಲೇ ೧೫ ಜಿಲ್ಲೆಗಳಲ್ಲಿ ಇಂಥ ಕಾರ್ಯಾಗಾರಗಳನ್ನು ನಡೆಸಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿಯೂ ಕೂಡ ಜಿಲ್ಲಾ ಪ್ರಕೃತಿವಿಕೋಪ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿರುತ್ತದೆ. ಚಿತ್ರದುರ್ಗ
ಜಿಲ್ಲೆಯಲ್ಲಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಯೋಜನೆ ಸಿದ್ದವಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಮಾತನಾಡಿ, ‘ಮುಂಜಾಗ್ರತಾ ಕ್ರಮಗಳಿಂದ ಪ್ರಕೃತಿ ವಿಕೋಪ ಅಥವಾ ಮಾನವ ನಿರ್ಮಿತ ವಿಕೋಪ ಘಟನೆಗಳು ನಿಯಂತ್ರಸಬಹುದು.
ಇಂಥ ಘಟನೆಗಳು ಜರುಗಿದ ಕೂಡಲೇ ಈ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದು ಕಾಲಮಿತಿಯಲ್ಲಿ ಪರಿಹಾರೋಪಾದಿ ಕಾರ್ಯವನ್ನು ಕೈಗೊಳ್ಳಲು ಸನ್ನದ್ಧರಾಗಬೇಕು’ ಎಂದು ಸಲಹೆ ನೀಡಿದರು. ಡೆಂಗೆಯಂತಹ ಮಾರಕ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಿದರೆ ಪ್ರಾಣಹಾನಿ ತಪ್ಪಿಸಬಹುದಾಗಿದೆ. ಈ ಬಗ್ಗೆ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಂಪನ್ಮೂಲ ಕ್ರೋಡೀಕರಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈ.ಎಸ್.ರವಿಕುಮಾರ್ ಮಾತನಾಡಿ, ‘ಪ್ರಕೃತಿ ವಿಕೋಪ ಪರಿಹಾರ ಕೈಗೊಳ್ಳಲು ಕೌಶಲಯುತ ಸಂಪನ್ಮೂಲ ರೂಪಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸಿದ್ಧತೆ ಕೈಗೊಳ್ಳಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ಮಂಜುಶ್ರೀ ಮಾತನಾಡಿ, ‘ಸಣ್ಣ ವಿಕೋಪ ಘಟನೆಗಳು ಇದ್ದರೂ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲಾಮಟ್ಟದಲ್ಲಿ ಪ್ರಕೃತಿ ವಿಕೋಪ ಪರಿಹಾರ ಯೋಜನೆ ಸಿದ್ಧಪಡಿಸಿ ಕೊಳ್ಳಬೇಕು’ ಎಂದರು.
ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲೆ ಎಸ್.ವಿ.ಸವಿತಾ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.