ADVERTISEMENT

ವಿತರಣೆಯಾಗದ ಪೈಪ್: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 6:40 IST
Last Updated 10 ಜೂನ್ 2011, 6:40 IST

ಚಳ್ಳಕೆರೆ:  ಪಟ್ಟಣದ ಗ್ರಾಮೀಣ ನೀರು ಸರಬರಾಜು ಉಪ ವಿಭಾಗದ ಕಚೇರಿ ಮುಂಭಾಗದಲ್ಲಿ ಗ್ರಾಮೀಣ ಭಾಗದ ಜನರಿಗೆ ನೀರು ಪೂರೈಕೆ ಮಾಡಲು ವಿತರಿಸಲಾಗುವ ಪೈಪ್‌ಗಳನ್ನು ವರ್ಷಗಳ ಕಾಲ ಬಿಸಿಲಿನಲ್ಲಿ ಹಾಕಿರುವುದನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬೋರಮ್ಮ ಹಾಗೂ ಉಪಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಕೆಲ ಸದಸ್ಯರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಉಪಯೋಗಿಸುವ ಕೈಪಂಪ್ ಕಚೇರಿಯಲ್ಲಿ ತುಕ್ಕು ಹಿಡಿಯುವ ಹಂತಕ್ಕೆ ಬಂದಿರುವುದನ್ನು ನೋಡಿದ ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈ ಹಿಂದೆ ಪಂಚಾಯ್ತ ರಾಜ್ ಎಂಜಿನಿಯರಿಂಗ್ ಉಪ ವಿಭಾಗವಾಗಿದ್ದ ಈ ಕಚೇರಿಯ ಆವರಣದಲ್ಲಿ ಕಳೆದ ವರ್ಷ ಬಿಆರ್‌ಜಿಎಫ್ ಯೋಜನೆ ಅಡಿಯಲ್ಲಿ ಸುಮಾರು ್ಙ 10 ಲಕ್ಷದ ಜೆಸಿಬಿ ಯಂತ್ರವನ್ನು ಇಲಾಖೆಗೆ ನೀಡಿದ್ದರೂ, ಚಾಲಕ ಇಲ್ಲ ಎಂಬ ಕಾರಣಕ್ಕೆ ಉಪಯೋಗಿಸದೇ ನಿರುಪಯುಕ್ತವಾಗಿವೆ.

ಇವತ್ತಿಗೂ ತಾಲ್ಲೂಕಿನ ಅದೆಷ್ಟೋ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೈಪಂಪ್‌ಗಳು ಇಲ್ಲದೇ ಜನತೆ ಪರದಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಕಚೇರಿ ಬಿಟ್ಟು ಕದಲುತ್ತಿಲ್ಲ. ಜನಪ್ರತಿನಿಧಿಗಳು ನಮ್ಮೂರಿಗೆ ಕೈಪಂಪ್ ಅಳವಡಿಸಿ ಎಂದರೂ ಗಮನಹರಿಸುತ್ತಿಲ್ಲ ಎನ್ನುತ್ತಾರೆ ನೇರಲಗುಂಟೆ ತಾಲ್ಲೂಕು ಪಂಚಾಯ್ತಿ ಸದಸ್ಯ ಜೆ. ತಿಪ್ಪೇಶ್‌ಕುಮಾರ್.

ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಅಳವಡಿಸಬೇಕಾದ ಲಕ್ಷಾಂತರ ಬೆಲೆ ಬಾಳುವ ಪೈಪ್‌ಗಳು ಬಿಸಿಲಿಗೆ ಕಾದು ಬೆಂಡಾಗಿರುವುದು, ಕೈಪಂಪ್‌ಗಳನ್ನು ಬಳಸದೇ ಮೂಲೆಯಲ್ಲಿ ಬಿಸಾಕಿರುವುದು ಹಾಗೂ ಲಕ್ಷಗಳ ವೆಚ್ಚದಲ್ಲಿ ತಂದಿರುವ ಜೆಸಿಬಿ ಯಂತ್ರ ಕಾರ್ಯ ನಿರ್ವಹಿಸದೇ ನಿಂತಿರುವುದನ್ನು ನೋಡಿದ ತಾ.ಪಂ. ಅಧ್ಯಕ್ಷ ಬೋರಮ್ಮ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾ.ಪಂ. ಸದಸ್ಯರಾದ ಜಿ.ಟಿ. ತಿಪ್ಪೇಶ್, ಯು. ಮಲ್ಲಿಕಾರ್ಜುನ ಸ್ವಾಮಿ, ಮಂಜುಳಾ ಇನ್ನಿತರರು ಇದ್ದರು.
ಪ್ರತಿಕ್ರಿಯೆ: ಈ ಕುರಿತು ಗ್ರಾಮೀಣ ನೀರು ಸರಬರಾಜು ಉಪ ವಿಭಾಗದ ಸಹಾಯಕ ಎಂಜಿನಿಯರ್ ಕಂಚೀಮಠ್ ಪ್ರತಿಕ್ರಿಯಿಸಿ, ಈ ಪೈಪ್‌ಗಳು ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ಖರೀದಿಸಿದ್ದು, ಕೆಲವನ್ನುಉಪಯೋಗಿಸಿ ಉಳಿದ ಪೈಪ್‌ಗಳನ್ನು ದಾಸ್ತಾನು ಮಾಡಲಾಗಿದೆ. ಅವಶ್ಯ ಇರುವ ಗ್ರಾಮ ಪಂಚಾಯ್ತಿಗಳ ಕೋರಿಕೆ ಮೇರೆಗೆ ವಿತರಿಸಲಾಗುತ್ತಿದೆ.

ಜೆಸಿಬಿ ಯಂತ್ರ ಕಾರ್ಯ ನಿರ್ವಹಿಸಲು ಚಾಲಕರು ಮುಂದೆ ಬರುತ್ತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.