ಚಿತ್ರದುರ್ಗ: ಜಿಲ್ಲೆಯಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ರೂ 10 ಕೋಟಿ ಅನುದಾನ ನೀಡುವುದಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ಮಣಿವಣ್ಣನ್ ಪ್ರಕಟಿಸಿದರು.ಶುಕ್ರವಾರ ನಗರದ ಕ್ರೀಡಾ ಸಭಾಂಗಣದಲ್ಲಿ ನಡೆದ ಜಿಲ್ಲಾ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಅಕ್ರಮ-ಸಕ್ರಮ ಯೋಜನೆ ಅಡಿ ನೋಂದಾಯಿಸಲಾದ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಾಮಗ್ರಿ, ವಿದ್ಯುತ್ ಪರಿವರ್ತಕ ಖರೀದಿಗೆ ಈ ಹಣ ನೀಡಲಾಗುವುದು. ಚಿತ್ರದುರ್ಗ ಜಿಲ್ಲೆಗೆ ರೂ10 ಕೋಟಿ ಹಾಗೂ ದಾವಣಗೆರೆ ಜಿಲ್ಲೆಗೆ ರೂ 5 ಕೋಟಿ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ 41 ಸಾವಿರ ರೈತರ ಪಂಪ್‌ಸೆಟ್‌ಗಳಿಗೆ ಕಂಬ, ವೈರ್, ವಿದ್ಯುತ್ ಪರಿವರ್ತಕ ಅಳವಡಿಸಲು ರೂ250 ಕೋಟಿ ಬೇಕಾಗುತ್ತದೆ. ಕಳೆದ ವರ್ಷ 80 ಕೋಟಿ ನೀಡಲಾಗಿತ್ತು. ಇದರಲ್ಲೂ ಶೇ. 50ರಷ್ಟು ಮಾತ್ರ ಕೆಲಸವಾಗಿದೆ. 15 ಸಾವಿರ ಪಂಪ್‌ಸೆಟ್‌ಗಳಿಗೆ ಸಂಪರ್ಕ ನೀಡಲು ರೂ 90 ಕೋಟಿ ಬೇಕಾಗುತ್ತದೆ. ಬೆಸ್ಕಾಂ ವಾರ್ಷಿಕ ವರಮಾನ ರೂ9 ಸಾವಿರ ಕೋಟಿ. ಆದ್ದರಿಂದ, ಸದ್ಯದ ಹಣಕಾಸಿನ ಪರಿಸ್ಥಿತಿಯಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗೆ ಒಟ್ಟು ರೂ15 ಕೋಟಿ ನೀಡುತ್ತೇನೆ ಎಂದು ತಿಳಿಸಿದರು.
ಜೂನ್ 30ರ ಒಳಗೆ ಚಿತ್ರದುರ್ಗ ಜಿಲ್ಲೆಗೆ ಹೆಚ್ಚುವರಿಯಾಗಿ 400 ವಿದ್ಯುತ್ ಪರಿವರ್ತಕಗಳನ್ನು ಪೂರೈಸಲಾಗುವುದು. ಹಿರಿಯೂರು ಮತ್ತು ಚಿತ್ರದುರ್ಗ ವಿಭಾಗಕ್ಕೆ ತಲಾ 200 ವಿದ್ಯುತ್ ಪರಿವರ್ತಕಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ವಿದ್ಯುತ್ ಪರಿವರ್ತಕಗಳನ್ನು ಯಾವ ಸ್ಥಿತಿಯಲ್ಲಿ ಬದಲಾಯಿಸಲಾಗುವುದು ಎನ್ನುವ ಬಗ್ಗೆ ಸಾರ್ವಜನಿಕರಿಗೆ, ರೈತರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.ಲೈನ್‌ಮನ್‌ಗಳ ಸಮಸ್ಯೆಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿ ಗಂಗಾಧರಸ್ವಾಮಿ, ಈಗಾಗಲೇ ಒಟ್ಟು 2 ಸಾವಿರ ಲೈನ್‌ಮನ್‌ಗಳ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗಿದೆ. ಹೈಕೋರ್ಟ್ ನಲ್ಲಿ ಪ್ರಕರಣವಿದ್ದ ಕಾರಣ ನೇಮಕಾತಿ ವಿಳಂಬವಾಯಿತು. ಇನ್ನೂ ಒಂದೂವರೆ ತಿಂಗಳಲ್ಲಿ 580 ಲೈನ್‌ಮನ್‌ಗಳನ್ನು ಬೆಸ್ಕಾಂಗೆ ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಹಲವು ವರ್ಷಗಳು ಕಳೆದರೂ ವೈರ್ ಮತ್ತು ಕಂಬ ಇಲ್ಲ ಎಂದು ಜೆ.ಎನ್. ಕೋಟೆಯ ಸಿದ್ಧಪ್ಪ ದೂರಿದರು.ಈ ಸಮಸ್ಯೆಗೆ ಪ್ರತಿಕ್ರಿಯಿಸಿದ ಅಧೀಕ್ಷಕ ಎಂಜಿನಿಯರ್ ಎಸ್. ಕೋಟೆಪ್ಪ, ಗಂಗಾ ಕಲ್ಯಾಣ ಯೋಜನೆಗೆ ಮೀಸಲಾಗಿದ್ದ ವಿದ್ಯುತ್ ಸಾಮಗ್ರಿಗಳನ್ನು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ ನೀಡಲಾಗಿದೆ. ಈಗಾಗಲೇ ಹೊಸದಾಗಿ ಸಾಮಗ್ರಿಗಳ ಖರೀದಿಗೆ ಟೆಂಡರ್ ಕರೆಯಾಗಲಿದೆ. ಜೂನ್ 30ರ ಒಳಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾಗಬಹುದು. ಅದು ಸಾಧ್ಯವಾಗದಿದ್ದರೆ ಮೊಬೈಲ್: 96633 69333 ಸಂಪರ್ಕಿಸಬಹುದು ಎಂದು ಮಣ್ಣಿವಣ್ಣನ್ ಅವರು ತಿಳಿಸಿದರು.ಬೆಸ್ಕಾಂ ಅಧಿಕಾರಿಗಳಾದ ಕೆ.ಟಿ. ಮಹಾಂತಪ್ಪ, ರವಿ, ಮುಖ್ಯ ಎಂಜಿನಿಯರ್ ನಂಜಯ್ಯ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.