ADVERTISEMENT

ವಿಧಾನಸಭಾ ಚುನಾವಣೆ: ಜಿಲ್ಲೆಯಾದ್ಯಂತ ಶೇ 76ರಷ್ಟು ಮತದಾನ

ಉತ್ಸಾಹ ತೋರಿದ ನವ ಮತದಾರರು, ಹಿರಿಯ ನಾಗರಿಕರು

​ಪ್ರಜಾವಾಣಿ ವಾರ್ತೆ
Published 13 ಮೇ 2018, 11:52 IST
Last Updated 13 ಮೇ 2018, 11:52 IST
ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ಶಾಲೆಯಲ್ಲಿ ಶನಿವಾರ ಮತದಾನಕ್ಕೆ ಸರತಿಯಲ್ಲಿ ನಿಂತ ಮಹಿಳೆಯರು
ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ಶಾಲೆಯಲ್ಲಿ ಶನಿವಾರ ಮತದಾನಕ್ಕೆ ಸರತಿಯಲ್ಲಿ ನಿಂತ ಮಹಿಳೆಯರು   

ಚಿತ್ರದುರ್ಗ: ಜಿಲ್ಲೆಯಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ 76ರಷ್ಟು ಮತದಾನವಾಗಿದ್ದು, ಕೆಲವೆಡೆ ಇವಿಎಂ ಯಂತ್ರದ ಸಮಸ್ಯೆ ಹೊರತುಪಡಿಸಿ, ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿತು.

ಹೊಸದುರ್ಗದಲ್ಲಿ ಶೇ 81ರಷ್ಟು ದಾಖಲೆಯ ಮತದಾನವಾಗಿದೆ. ಉಳಿದಂತೆ ಮೊಳಕಾಲ್ಮುರು ಶೇ 77, ಚಳ್ಳಕೆರೆ ಶೇ 73, ಚಿತ್ರದುರ್ಗ ಶೇ 71, ಹಿರಿಯೂರು ಶೇ 75, ಹೊಳಲ್ಕೆರೆ ಶೇ 80ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ನಗರದ ಬಹುತೇಕ ಬೂತ್ ಗಳಲ್ಲಿ ಹಿರಿಯನಾಗರಿಕರು, ಮಹಿಳೆಯರು ಮತದಾನ ಮಾಡಲು ಉತ್ಸಾಹ ತೋರಿದರು. ನಗರದ ಹಳೇಮಾಧ್ಯಮಿಕ ಶಾಲಾ ಆವರಣದಲ್ಲಿರುವ ಬೂತ್ ನಲ್ಲಿ ಧರ್ಮಶಾಲಾ ರಸ್ತೆ, ಚಿಕ್ಕಪೇಟೆ ಸೇರಿದಂತೆ ವಿವಿಧ ಕಡೆಗಳಿಂದ ಹಿರಿಯ ನಾಗರಿಕು, ಅಂಗವಿಕಲರು, ಮಹಿಳೆಯರು ಉತ್ಸಾಹದಿಂದ ಮತದಾನಕ್ಕೆ ಮುಂದಾದರು.

ADVERTISEMENT

ಜೆಸಿಆರ್ ಬಡಾವಣೆಯಲ್ಲಿರುವ ಪಿಂಕ್ ಮತಗಟ್ಟೆಯಲ್ಲಿ ಬೆಳಿಗ್ಗೆ 7.20ಕ್ಕೆ ಮಹಿಳೆಯರು ಮತಗಟ್ಟೆ ಎದುರು ಸೆಲ್ಫಿ ತೆಗೆದುಕೊಂಡು, ಮತದಾನಕ್ಕೆ ಮುಂದಾದರು. ಪಿಂಕ್ ಬಣ್ಣದ ಬಲೂನು, ಬಟ್ಟೆಗಳಿಂದ ಅಲಂಕೃತ ಬೂತ್ ಎದುರು ನಿಂತು ಸೆಲ್ಫಿ ತೆಗೆದುಕೊಂಡರು.

ಹಳೇ ಮಾಧ್ಯಮಿಕ ಶಾಲೆ ಆವರಣದಲ್ಲಿ 7.25 ರ ಸುಮಾರಿಗೆ ಚಿಕ್ಕಪೇಟೆಯ 82 ವರ್ಷದ ಖುರೇಶಿ ತಮ್ಮ ಮಗಳ ಸಹಾಯದಿಂದ ಮತ್ತು ತ್ಯಾಗರಾಜ ಬೀದಿಯ 62 ವರ್ಷದ ಕೆ.ವೆಂಕಟೇಶ್  ಮಗನ ಸಹಾಯದಿಂದ ಮತಚಲಾವಣೆ ಮಾಡಿದರು. ಧರ್ಮಶಾಲಾ ರಸ್ತೆಯ 66 ವರ್ಷಗಳ ಲಕ್ಷ್ಮಿನಾರಾಯಣ ಜೋಯಿಸ್, ಪತ್ನಿ ಪ್ರಭಾವತಿ, ಮೊಮ್ಮಗ ಸುಮನ್ ಜತೆ ಮತ ಚಲಾವಣೆಗೆ ಬಂದಿದ್ದರು.

ಕಾಮನಬಾವಿ ಬಡಾವಣೆಯ ಕಿಂಟೊ ಶಾಲೆಯಲ್ಲಿ 8 ಗಂಟೆ ಹೊತ್ತಿಗೆ ಮತದಾನಕ್ಕಾಗಿ ಉದ್ದನೆ ಸರತಿ ಸಾಲಿತ್ತು. ಬಿಸಿಲು ಏರುವುದರೊಳಗೆ ಮತ ಹಾಕಬೇಕೆಂದು ಬೇಗನೇ ಮತಗಟ್ಟೆಗೆ ಬಂದಿದ್ದರು. ಹಿರಿಯ ನಾಗರಿಕರಿಗೆ ಗಾಲಿ ಕುರ್ಚಿ ವ್ಯವಸ್ಥೆ ಮಾಡಿದ್ದರಿಂದ,   ಸರದಿ ಬರುವವರೆಗೂ ಹಿರಿಯ ನಾಗರಿಕರು ಮತಗಟ್ಟೆ ಎದುರು ಇರುವ ಖುರ್ಚಿಯಲ್ಲಿ ಕಾದರು.

ಮೊದಲಬಾರಿಗೆ ಮತದಾನ ಮಾಡುವ ಯುವ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಹಲವರಿಗೆ ಮತಯಂತ್ರ ಹೊಸದು, ಮತ್ತೆ ಕೆಲವರಿಗೆ ವಿ.ವಿ. ಪ್ಯಾಟ್ ಬಗ್ಗೆ ಕುತೂಹಲ ಇದ್ದಿದ್ದು ಕಂಡುಬಂತು.

ಸಂಜೆ 6ರ ವೇಳೆಗೆ ಇನ್ನೂ ಅನೇಕ ಮತಗಟ್ಟೆಗಳಲ್ಲಿ ಮತದಾನ ಮುಕ್ತಾಯ ಹಂತದಲ್ಲಿದ್ದು, ಅಂತಿಮ ವಿವರ ರಾತ್ರಿ ವೇಳೆಗೆ ಲಭ್ಯವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿರುಸಿನಿಂದ ಆರಂಭ:
ಜಿಲ್ಲೆಯಾದ್ಯಂತ ಬಿರುಸಿನಿಂದ ಮತದಾನ ಆರಂಭವಾಯಿತು. ಚಿತ್ರದುರ್ಗ ನಗರ ಹೊರತುಪಡಿಸಿ, ಉಳಿದ ಎಲ್ಲ ಭಾಗದಲ್ಲೂ ಮತದಾನ ಪ್ರಕ್ರಿಯೆ ವೇಗವಾಗಿತ್ತು. ಬೆಳಿಗ್ಗೆ 9 ಗಂಟೆ ವೇಳೆಗೆ ಶೇ 8ರಷ್ಟು ಮತದಾನವಾಗಿತ್ತು. ಬಿಸಿಲು ಏರಿದಂತೆ ಮತದಾನ ಪ್ರಮಾಣವೂ ಹೆಚ್ಚಾಗುತ್ತಾ ಸಾಗಿತು.

ಹೈವೋಲ್ಟೇಜ್ ಕ್ಷೇತ್ರವೆಂದೇ ಗುರುತಿಸಲಾಗಿದ್ದ ಮೊಳಕಾಲ್ಮುರು ಕ್ಷೇತ್ರ ಮತದಾನದ ವೇಗದಲ್ಲಿ ಆರಂಭದಿಂದಲೂ ಮುಂದಿತ್ತು. 9 ಗಂಟೆ ಹೊತ್ತಿಗೆ ಶೇ 10 ಇದ್ದ ಮತದಾನ 5 ಗಂಟೆಗೆ ಶೇ 69ರಷ್ಟು ಮತದಾನವಾಗಿತ್ತು. ನಂತರದಲ್ಲ ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಕ್ಷೇತ್ರಗಳಲ್ಲಿ 5 ಗಂಟೆಗೆ ವೇಳೆಗೆ ಶೇ 70 ರಿಂದ ಶೇ 74ರಷ್ಟು ಮತದಾನವಾಗಿತ್ತು.

ಚಿತ್ರದುರ್ಗ ನಗರದಲ್ಲಿ ಮಧ್ಯಾಹ್ನ 3 ಗಂಟೆವರೆಗೂ ಶೇ 34 ರಷ್ಟು ಮತದಾನವಾಗಿತ್ತು. 5 ಗಂಟೆ ವೇಳೆಗೆ ಶೇ 64ರಷ್ಟು ಮತದಾನವಾಯಿತು. ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿ, ನಾಯಕನ ಹಟ್ಟಿ, ನೇರಲಗುಂಟೆ, ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮುರು ಕ್ಷೇತ್ರದ ಬೂತ್‌ ಗಳಲ್ಲೂ ಬಿಸಿಲನ್ನೂ ಲೆಕ್ಕಿಸಿದೇ ಮತದಾರರು ಸರದಿಯಲ್ಲಿ ನಿಂತು ಮತಯಾಚಿಸಿದರು. ಚಿತ್ರದುರ್ಗ ತಾಲ್ಲೂಕು ಜಾಲಿಕಟ್ಟೆಯಲ್ಲಿ ಸಂಜೆ 4 ಗಂಟೆ ಸುಮಾರಿಗೆ, ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಬಂದಿದ್ದರಿಂತ, ಕೆಲಕಾಲ ಮತಗಟ್ಟೆ ಬಳಿ ನೂಕುನುಗ್ಗಲು ಉಂಟಾಯಿತು.

ಮತ ಚಲಾಯಿಸಿದ ಗಣ್ಯರು

ಮುರುಘಾಮಠದ ಶಿವಮೂರ್ತಿ ಶರಣರು ಬೆಳಿಗ್ಗೆ 8 ಗಂಟೆಗೆ ಮಠದ ಕುರುಬರಹಟ್ಟಿಯ ಬೂತ್‍ನಲ್ಲಿ ಮತ ಚಲಾಯಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಎಪಿಎಂಸಿ ಕಚೇರಿಯಲ್ಲಿರುವ ಬೂತ್‍ನಲ್ಲಿ 10 ಗಂಟೆ ಸುಮಾರಿಗೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಪತ್ನಿ, ಮಗ, ಸೊಸೆಯೊಂದಿಗೆ ಮತ ಚಲಾಯಿಸಿದರು.

ಸಂಸದ ಬಿ.ಎನ್.ಚಂದ್ರಪ್ಪ, ಪತ್ನಿ ಡಾ.ಕಾವ್ಯಾ, ಪುತ್ರಿ ಡಾ.ಬಿ.ಸಿ.ದೃಷ್ಟಿ ಅವರೊಂದಿಗೆ ನಗರದ ಧವಳಗಿರಿ ಬಡಾವಣೆಯ ಬರಗೇರಮ್ಮ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಬೆಳಿಗ್ಗೆ 10.30ಗೆ ಮತ ಚಲಾಯಿಸಿದರು. ನಗರಸಭೆ ಅಧ್ಯಕ್ಷ ಎಚ್.ಎನ್.ಮಂಜುನಾಥ ಗೊಪ್ಪೆ, ಪತ್ನಿಯೊಂದಿಗೆ ಇದೇ ಮತಗಟ್ಟೆಯಲ್ಲೇ ಮತ ಚಲಾಯಿಸಿದರು.

**
66 ವರ್ಷ ನನಗೆ. ಇಲ್ಲಿವರೆಗೂ ಮತದಾನ ತಪ್ಪಿಸಿಕೊಂಡಿಲ್ಲ. ನನ್ನ ಮಕ್ಕಳು, ಮೊಮ್ಮಕ್ಕಳಿಗೂ ಮತಚಲಾವಣೆ ಬಗ್ಗೆ ಹೇಳಿದ್ದೇನೆ. ಮೊಮ್ಮಗನಿಗೂ ತಿಳಿಸಲು ಕರೆದುಕೊಂಡು ಬಂದಿದ್ದೇನೆ. ಎಲ್ಲರೂ ಮತದಾನ ಮಾಡಬೇಕು
– ಲಕ್ಷ್ಮಿನಾರಾಯಣ ಜೋಯಿಸ್, ಧರ್ಮಶಾಲಾ ರಸ್ತೆ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.