ADVERTISEMENT

ವೀರಯೋಧರ ಸ್ಮರಣೆ ಅಗತ್ಯ: ತರಳಬಾಳು ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 11:20 IST
Last Updated 18 ಡಿಸೆಂಬರ್ 2012, 11:20 IST

ಸಿರಿಗೆರೆ: ದೇಶಕ್ಕಾಗಿ ದೇಹತ್ಯಾಗ ಮಾಡಿ ವೀರ ಮರಣವನ್ನಪ್ಪಿದ ಯೋಧರನ್ನು ಸ್ಮರಿಸಿ ಅವರನ್ನು ಗೌರವಿಸಬೇಕು ಎಂದು ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಭಾನುವಾರ ಸಂಜೆ ರಾಜಭವನ, ದೂರದರ್ಶನ, ಆಕಾಶವಾಣಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಶ್ರಯದಲ್ಲಿ ನಡೆದ `ಸ್ಮರಣಾಂಜಲಿ' ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ದೇವರು `ಸೈನಿಕ' ಎಂಬ ಮತ್ತೊಬ್ಬ ವ್ಯಕ್ತಿಯ ರೂಪದಲ್ಲಿ ಇರುತ್ತಾನೆ ಎಂಬ ನಾಣ್ಣುಡಿಯಂತೆ ಚಳಿ, ಮಳೆ, ಬಿಸಿಲು, ಬಿರುಗಾಳಿಗಳನ್ನೂ ಲೆಕ್ಕಿಸದೇ, ದೇಶ ಮತ್ತು ಪ್ರಜೆಗಳ ರಕ್ಷಣೆಗೆ ತಮ್ಮ ಜೀವವನ್ನೇ ಮುಡುಪಾಗಿಟ್ಟಿರುವ ಅವರುಗಳಿಗೆ ನಾವು ಎಷ್ಟೇ ಕೃತಜ್ಞರಾಗಿದ್ದರೂ ಸಾಲದು. ಇಂತಹ ಒಂದು ಸಂದರ್ಭದಲ್ಲಿ ವಿವಿಧ ಇಲಾಖೆಗಳು ಯೋಧರ ಸ್ಮರಣೆಗಾಗಿ ಹಾಡು, ನೃತ್ಯಗಳ ಮೂಲಕ ದೇಶಾಭಿಮಾನದ ಕಿಚ್ಚನ್ನು ಪ್ರತಿನಿಧಿಸುವ `ಸ್ಮರಣಾಂಜಲಿ' ಕಾರ್ಯಕ್ರಮ ಏರ್ಪಡಿಸಿರುವುದು ಸ್ಮರಣೀಯ ಎಂದರು.
ರಾಜ್ಯಪಾಲ ಹಂಸರಾಜ ಭಾರದ್ವಾಜ್ ಕಾರ್ಯಕ್ರಮ ಉದ್ಘಾಟಿಸಿದರು.

ಕ್ರೈಸ್ತಪಾದ್ರಿ ರೆವೆರೆಂಡ್ ಬೆರ್ನಾಡ್ ಮೊರಾಸ್, ಮಹಾಬೋಧಿ ಸಂಸ್ಥೆಯ ಆನಂದ ಬಂತೇಜಿ, ಸಿಖ್‌ಗುರು ಜಬೀರ್ ಸಿಂಗ್ ದೋಡಿ, ಜೈನಗುರು ಸ್ವಸ್ತಿಶ್ರೀ ದೇವಳಕೀರ್ತಿ ಭಟ್ಟಾರಕ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಅಶೋಕಚಕ್ರ ಪುರಸ್ಕೃತ ವೀರಯೋಧ ಜೋಜಾನ್ ಥಾಮಸ್ ಪತ್ನಿ ಬೀನಾ ಥಾಮಸ್, ಕೆ. ಉನ್ನಿಕೃಷ್ಣನ್ ಪೋಷಕರು ಹಾಗೂ ಭೂ, ವಾಯು, ಜಲಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.