ADVERTISEMENT

ವೇದಾವತಿ ನದಿ ನೀರಿನಮಟ್ಟ ಇಳಿಮುಖ

ಬರದ ಭೀತಿಯಲ್ಲಿ ಜನತೆ; ಕುಡಿಯುವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 10:15 IST
Last Updated 4 ಜನವರಿ 2014, 10:15 IST

ಹೊಸದುರ್ಗ: ತಾಲ್ಲೂಕಿನ ಕೆಲ್ಲೋಡಿನ ವೇದಾವತಿ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿ ರುವುದರಿಂದ ಬೇಸಿಗೆ
ಸಮೀಪಿಸುತ್ತಿರುವಾಗಲೇ ಜನತೆಗೆ ಕುಡಿಯುವ ನೀರಿನ ಭೀತಿ ಎದುರಾಗಿದೆ.

ಪಟ್ಟಣದ ನಾಗರಿಕರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಿಸಲಾಗಿದೆ. ತರೀಕೆರೆ, ಕಡೂರು ತಾಲ್ಲೂಕಿನ ಅನೇಕ ಕಡೆಗಳಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಇಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ನೀರನ್ನು ಪೈಪ್‌ಲೈನ್‌ ಮುಖಾಂತರ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಲಾಗುತ್ತದೆ.

ಈ ಬಾರಿಯು ಹಿಂಗಾರು ಹಂಗಾಮಿನ ಯಾವೊಂದು ಮಳೆಯೂ ಸಮೃದ್ಧವಾಗಿ ಬಾರದ ಕಾರಣದಿಂದ, ಬ್ಯಾರೇಜ್‌ನಲ್ಲಿ ನೀರು ಕಡಿಮೆ ಸಂಗ್ರವಾಗಿದೆ. ಅಷ್ಟೇ ಅಲ್ಲದೆ ವೇದಾವತಿ ನದಿ ಪಾತ್ರದಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಿ ಅಹೋರಾತ್ರಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ಜನ–ಜಾನುವಾರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗುತ್ತದೆ.

ಪರಿಸ್ಥಿತಿ ಹೀಗಿದ್ದರೂ ಸಹ ಪಟ್ಟಣದ ಕೆಲವು ಬಡಾವಣೆಗಳಿಗೆ ನೀರು ಪೂರೈಸುವ ನೀರಗಂಟಿಗಳು ನಿಯಮಾನುಸಾರ ನೀರು ಪೂರೈಕೆ ಮಾಡದೇ, ಅಹೋರಾತ್ರಿ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ರಾತ್ರಿ ಸಮಯದಲ್ಲಿ ಮಲಗಿರುವ ಜನರು ನೀರನ್ನು ಹಿಡಿದುಕೊಳ್ಳದ ಕಾರಣದಿಂದ, ಹೆಚ್ಚಿನ ನೀರು ಪೋಲಾಗುತ್ತಿದೆ. ಹಾಗೆಯೇ ನದಿ ಪಾತ್ರದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸ ಬೇಕಿದೆ.

ಇದರ ಜತೆಗೆ ಕೆಲ್ಲೋಡು ನದಿ ಬಳಿ ಬಟ್ಟೆ ಹಾಗೂ ಜಾನುವಾರುಗಳನ್ನು ಶುಚಿಗೊಳಿಸುವ ಗ್ರಾಮಸ್ಥರಿಂದ ಮಲಿನ ನೀರು ನದಿ ನೀರಿಗೆ ಸೇರ್ಪಡೆ ಯಾಗುತ್ತಿದೆ. ಇದರಿಂದ ನೀರಿನಲ್ಲಿ ಕಲುಷಿತ ಅಂಶವೂ ಸೇರ್ಪಡೆಯಾಗ ಬಹುದು. ಹಾಗಾಗಿ, ಬಟ್ಟೆ ಹಾಗೂ ಜಾನುವಾರುಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಕಡಿವಾಣ ಹಾಕಲು, ನದಿ ಪಾತ್ರದ ಸ್ಥಳದಲ್ಲಿ ಬೇಲಿ ನಿರ್ಮಾಣ ಮಾಡಬೇಕಿದೆ.

ಹೊದ ವರ್ಷದ ಬೇಸಿಗೆಯಲ್ಲಿ ಉದ್ಭವಾಗಿದ್ದ ಕುಡಿಯುವ ನೀರಿನ ಸಮಸ್ಯೆಯಿಂದ ಪಟ್ಟಣದ ಕೆಲವು ಬಡಾವಣೆಗಳ ನಿವಾಸಿಗಳು ತತ್ತರ ಗೊಂಡಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಾರಿ ಇಂತಹ ಸಮಸ್ಯೆ ಮರುಕಳಿಸದಂತೆ
ನೋಡಿ ಕೊಳ್ಳಲು ಈಗಿನಿಂದಲೇ ಕಾಳಜಿ ವಹಿಸಿ, ಜನರ ಹಿತಕಾಪಾಡಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.