ADVERTISEMENT

ವೈಭವದ ಕುಕ್ವಾಡೇಶ್ವರಿ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 11:10 IST
Last Updated 19 ಜನವರಿ 2011, 11:10 IST

ಹೊಳಲ್ಕೆರೆ: ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ನಗರ ದೇವತೆ ಕುಕ್ವಾಡೇಶ್ವರೀದೇವಿ ಜಾತ್ರೆ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವವಾಗಿ ನಡೆಯಿತು.ಬೆಳಿಗ್ಗೆ ದೇವಾಲಯದ ಆವರಣದಲ್ಲಿ ಬೀರಲಿಂಗೇಶ್ವರ ಸ್ವಾಮಿಯ ಪ್ರತಿಷ್ಠಾಪನೆಯೊಂದಿಗೆ ಆರಂಭವಾದ ಜಾತ್ರಾ ಕಾರ್ಯಕ್ರಮಗಳು ತಡರಾತ್ರಿಯವರೆಗೂ ನಡೆದವು.
ಪಟ್ಟಣದ ಭಕ್ತರು ಅಲಂಕೃತ ಎತ್ತಿನ ಗಾಡಿಗಳ ಮೂಲಕ ದೇವಾಲಯಕ್ಕೆ ತೆರಳಿ, ಪೂಜಾ ಕಾರ್ಯಗಳಲ್ಲಿ ತೊಡಗಿದರು.

ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ದೇವಾಲಯದತ್ತ ಬಂದ ಭಕ್ತರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಸಂಜೆಯಾಗುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗಿ, ದರ್ಶನಕ್ಕಾಗಿ ಸುಮಾರು ಅರ್ಧ ಕಿ.ಮೀ.ವರೆಗೆ ಸರದಿ ಸಾಲಿನಲ್ಲಿ ನಿಂತಿದ್ದರು.ದೇವಿಗೆ ಮಹಾಮಂಗಳಾರತಿ, ವಿಶೇಷ ಪೂಜೆಗಳು ನಡೆದವು. ಭಕ್ತರು ದೇವಾಲಯದ ಆವರಣದಲ್ಲಿ ಕರ್ಪೂರ, ಊದುಬತ್ತಿ ಬೆಳಗುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.

ಸೀರೆ-ಕುಪ್ಪಸ ಅರ್ಪಣೆ
ದೇವಾಲಯದ ಪಕ್ಕದಲ್ಲಿ ಅರಳೀಕಟ್ಟೆಯ ಮೇಲಿರುವ ಚೌಡಮ್ಮ ದೇವಿಗೆ ಮಹಿಳೆಯರು ಸೀರೆ, ಕುಪ್ಪಸ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.ಕುಕ್ವಾಡೇಶ್ವರೀ ದೇವಿಗೆ ಪೂಜೆ ಸಲ್ಲಿಸಿದರೆ ಕೆಮ್ಮು, ಸಿಡುಬು, ದಡಾರ(ಅಮ್ಮ)ದ ಗುಳ್ಳೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ಕಾಯಿಲೆ ಬಂದಾಗ ಕೈಮುಗಿದುಕೊಳ್ಳುವ ಭಕ್ತರು, ಮಂಗಳವಾರ, ಶುಕ್ರವಾರ ಮತ್ತು ಜಾತ್ರೆಯ ಸಂದರ್ಭದಲ್ಲಿ ಹರಕೆ ತೀರಿಸುತ್ತಾರೆ.  

ದೇವಾಲಯ ರಾಷ್ಟ್ರೀಯ ಹೆದ್ದಾರಿ-13ರ ಪಕ್ಕದಲ್ಲೇ ಇರುವುದರಿಂದ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿ, ವಾಹನಗಳು ನಿಧಾನವಾಗಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿತ್ತು.ಸಾವಿರಾರು ಭಕ್ತರು ನೆರೆದ ಹಿನ್ನೆಲೆಯಲ್ಲಿ ಸುಗಮವಾಗಿ ದೇವಿಯ ದರ್ಶನ ಪಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.