ADVERTISEMENT

ಶಕ್ತಿದೇವತೆಗಳ ಸಂಗಮ; ಬೃಹತ್‌ ಶೋಭಾಯಾತ್ರೆ

ಚಿತ್ರದುರ್ಗದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2014, 11:08 IST
Last Updated 10 ಫೆಬ್ರುವರಿ 2014, 11:08 IST
ಚಿತ್ರದುರ್ಗದಲ್ಲಿ ಭಾನುವಾರ ಶಕ್ತಿ ದೇವತೆಗಳ ಸಂಗಮದ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿರುವ ನಗರ ಹಾಗೂ ಗ್ರಾಮದೇವತೆಗಳ ದೃಶ್ಯ.
ಚಿತ್ರದುರ್ಗದಲ್ಲಿ ಭಾನುವಾರ ಶಕ್ತಿ ದೇವತೆಗಳ ಸಂಗಮದ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿರುವ ನಗರ ಹಾಗೂ ಗ್ರಾಮದೇವತೆಗಳ ದೃಶ್ಯ.   

ಚಿತ್ರದುರ್ಗ: ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯ ಸುತ್ತಮುತ್ತ ಗ್ರಾಮಗಳ ಸುಮಾರು 58 ಶಕ್ತಿ ದೇವತೆಗಳನ್ನು ಒಂದೆಡೆ ಸೇರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಬೃಹತ್‌ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಬೆಂಗಳೂರಿನ ನಗರದೇವತೆ ಅಣ್ಣಮ್ಮ ಭಾಗವಹಿಸಿದ್ದು ವಿಶೇಷ. ನಗರದೇವತೆ ಬರಗೇರಮ್ಮ, ಗ್ರಾಮ ದೇವತೆಗಳಾದ ಚೋಳುಗುಡ್ಡದ ಮಾರಮ್ಮ, ಗೌರಸಂದ್ರ ಮಾರಮ್ಮ, ದರ್ಜಿ ಕಾಲೊನಿ ದುರ್ಗಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ಹಿರೇಗುಂಟನೂರಿನ ದುರ್ಗಾಂಬಿಕಾ, ತೊಡರನಾಳಿನ ಕರಿಯಮ್ಮ, ಸಿಂಗಾಪುರ ಮತ್ತು ಗೊಡಬನಾಳ್‌  ಕೊಲ್ಲಾಪುರದಮ್ಮ, ತಮಟಕಲ್ಲಿನ ಗುಡಸಲಮ್ಮ, ತೊಂಡೆ ಕೆಂಚಮ್ಮ, ಮಾರಿಕಾಂಬಾ, ದುರ್ಗಮ್ಮ, ಓಬವ್ವ ದೇವಿ, ಕರಿಯಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ, ದುರ್ಗಾ ಪರಮೇಶ್ವರಿ, ಅನಂತಪುರದ ಪೆದ್ದಮ್ಮ, ಕೊಲ್ಲಾಪುರದ ಮಹಾಲಕ್ಷ್ಮಿ ಸೇರಿದಂತೆ ವಿವಿಧ ಗ್ರಾಮಗಳಿಂದ ಮಾರಮ್ಮ ದೇವತೆಗಳು ಪಾಲ್ಗೊಂಡಿದ್ದವು.

ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಸ್ಥಾನದಿಂದ ಪ್ರಾರಂಭವಾದ ಶೋಭಾಯಾತ್ರೆ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ಸರ್ಕಲ್, ಬಿಡಿ ರಸ್ತೆ, ಎಸ್‌ಬಿಎಂ ವೃತ್ತ, ಪ್ರವಾಸಿ ಮಂದಿರ, ಮದಕರಿನಾಯಕ ವೃತ್ತದ ಮಾರ್ಗವಾಗಿ ಸಂಚರಿಸಿ ದುರ್ಗಾ ಹೋಮ ನಡೆಯುವ ಸ್ಥಳವಾದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ತಲುಪಿತು.

ನೂರಾರು ಮಹಿಳೆಯರು ಕುಂಭ ಹೊತ್ತು ಶೋಭಾಯಾತ್ರೆಯಲ್ಲಿ ಸಾಗಿದರು. ಡೊಳ್ಳು ಕುಣಿತ, ನಂದಿ ಕೋಲು, ಮರಗಾಲು ಕುಣಿತ, ಬೊಂಬೆ ಕುಣಿತ, ಉರುಮೆ, ತಮೆಟೆ ವಾದ್ಯ, ಕಹಳೆ, ಕರಡಿ ಚಮ್ಮಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಮಾನಂಗಿ ಗ್ರಾಮದಿಂದ ಸುಮಾರು 20 ಮಂದಿ ಪೋತರಾಜರು ಭಾಗವಹಿಸಿ ಮೈಮೇಲೆ ಚಡಿ ಏಟು ಬಾರಿಸಿಕೊಳ್ಳುವ ಮೂಲಕ ಆಕರ್ಷಿಸಿದರು.

ಎಲ್ಲ ಶಕ್ತಿದೇವತೆಗಳನ್ನು ವಿವಿಧ ಹೂವುಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ದಾರಿಯುದ್ದಕ್ಕೂ ಒಂದರ ಹಿಂದೆ ಮತ್ತೊಂದರಂತೆ ಸಾಗುತ್ತಿದ್ದ ದೇವತೆಗಳ ಮುಂಭಾಗದಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು. ಅಲ್ಲದೆ, ಉದೋ ಉದೋ ಎನ್ನುವ ಜಯಕಾರದೊಂದಿಗೆ ಸಾಗಿದರು.

ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಂ. ವೀರಣ್ಣ, ಸಂಚಾಲಕ ಕೆ.ಎಸ್. ನವೀನ್, ಕಾರ್ಯದರ್ಶಿ ಸುರೇಶ್‌ರಾಜ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದೇಶ್‌ಯಾದವ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.