ADVERTISEMENT

ಶ್ರೀರಾಮುಲು ಗೆದ್ದಲ್ಲಿ ಪ್ರಕೃತಿ ಲೂಟಿ ‌: ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2018, 9:35 IST
Last Updated 6 ಮೇ 2018, 9:35 IST

ಮೊಳಕಾಲ್ಮುರು: ‘ಮೊಳಕಾಲ್ಮುರಿನಿಂದ ಸ್ಪರ್ಧೆ ಮಾಡಿರುವ ಸಂಸದ ಬಿ. ಶ್ರೀರಾಮುಲುಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು. ನೀಡಿದಲ್ಲಿ ಜಿಲ್ಲೆಯ ಪ್ರಕೃತಿ ಸಂಪತ್ತನ್ನು ಲೂಟಿ ಮಾಡುವುದು ಖಚಿತ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌ ಆರೋಪಿಸಿದರು.

ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿ ಹಾಗೂ ನಾಗಸಮುದ್ರ ಜಿಲ್ಲಾಪಂಚಾಯ್ತಿ ವ್ಯಾಪ್ತಿ ಗ್ರಾಮಗಳಲ್ಲಿ ಶುಕ್ರವಾರ ಹಾಗೂ ಶನಿವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

‘ಬಳ್ಳಾರಿ ಜಿಲ್ಲೆಯಲ್ಲಿನ ಗಣಿ ಸಂಪತ್ತು ಲೂಟಿ ಮಾಡಿರುವ ಜನಾರ್ದನ ರೆಡ್ಡಿ ಈಗ ಇಲ್ಲಿ ಚುನಾವಣೆ ಉಸ್ತುವಾರಿ ಹೊತ್ತಿದ್ದಾರೆ. ಶ್ರೀರಾಮುಲುನ್ನು ಗೆಲ್ಲಿಸುವ ತಂತ್ರ ಮಾಡುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದಲ್ಲಿ ಹಣಬಲ, ಧನಬಲ ಅಂಶಗಳು ಸೃಷ್ಟಿಯಾಗಿವೆ. ಧನಬಲಕ್ಕೆ ಜನರು ಅವಕಾಶ ನೀಡದೇ ಸರಳ ಯುವಕ ಯೋಗೇಶ್‌ಬಾಬು ಗೆಲುವಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಅಭ್ಯರ್ಥಿ ಡಾ. ಬಿ. ಯೋಗೇಶ್‌ಬಾಬು ಮಾತನಾಡಿ, ‘ಅನ್ನಭಾಗ್ಯ ಯೋಜನೆ ಜಾರಿ ಮೂಲಕ ಹಳ್ಳಿಗಳಲ್ಲಿ ಗುಳೆ ತಪ್ಪಿಸಿದ ಕೀರ್ತಿ ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲಿದೆ. ಈ ಬಾರಿ ಕಾಂಗ್ರೆಸ್‌ ಮತ್ತೆ ಗೆಲ್ಲಿಸುವ ಮೂಲಕ ಈ ಯೋಜನೆ ಮುಂದುವರಿಸಲು ಅವಕಾಶ ನೀಡಬೇಕು. ಬೇರೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯೋಜನೆ ಮುಂದುವರಿಯುವ ಸಾಧ್ಯತೆ ಕ್ಷೀಣ’ ಎಂದರು.

‘ಮೊಳಕಾಲ್ಮುರು ತಾಲ್ಲೂಕಿನಲ್ಲಿ ಜಿಗನಿಹಳ್ಳ ಹಾದು ಹೋಗಿದ್ದು, ಹಲವು ಮರಳು ಮಾಫಿಯಾ ಮುಖಂಡರು ಮರಳು ಲೂಟಿ ಮಾಡಲು ಕಾತರರಾಗಿದ್ದಾರೆ. ಜನರು ಇದಕ್ಕೆ ಅವಕಾಶ ನೀಡಬಾರದು’ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಬಾಲರಾಜ್‌, ಮುಖಂಡರಾದ ಟಿ. ಚಂದ್ರಣ್ಣ, ಮಹದೇವಪುರ ತಿಪ್ಪೇಸ್ವಾಮಿ, ಮೀನಕರೆ ಶಿವಣ್ಣ, ಟಿ. ತಿಮ್ಮಪ್ಪ, ಓಬಳೇಶ್‌, ನಾಗೇಶ್‌ ರೆಡ್ಡಿ, ಎಂ.ಡಿ. ಮಂಜುನಾಥ್, ಆರ್‌.ಎಂ. ಅಶೋಕ್‌, ಎಸ್‌.ಕೆ. ಗುರುಲಿಂಗಪ್ಪ, ಪಟೇಲ್‌ ಪಾಪನಾಯಕ, ಪ್ರಹ್ಲಾದ್‌ರೆಡ್ಡಿ, ಕುಮಾರಗೌಡ, ದಡಗೂರು ಮಂಜುನಾಥ್‌, ಮೊಗಲಹಳ್ಳಿ ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.