ADVERTISEMENT

‘ಸಂಭಾಷಣೆ ಜತೆಗೆ ಸಂಸ್ಕೃತಿ ಬೆಳೆಸುವ ತಾಳಮದ್ದಲೆ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 9:16 IST
Last Updated 27 ಡಿಸೆಂಬರ್ 2017, 9:16 IST

ಚಿತ್ರದುರ್ಗ: ಪುರಾಣ ಕಥೆಗಳನ್ನು ವೇಷಧಾರಿಗಳಾಗಿ ಪರಿಚಯಿಸುವ ಕಲೆ ಯಕ್ಷಗಾನವಾದರೆ, ವ್ಯಾಖ್ಯಾನ, ಸಂಭಾಷಣೆ ಮೂಲಕ ವೀಕ್ಷಕರನ್ನು ತಲುಪಿಸುವ ಕಲೆ ತಾಳೆಮದ್ದಲೆ ಎಂದು ದಕ್ಷಿಣ ಕನ್ನಡ ವಿಟ್ಲದ ಯಕ್ಷಗಾನ ಕಲಾವಿದ ಹರೀಶ್‌ ಬಳಂತಿ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರ ದಲ್ಲಿ ಸಂಸ್ಕಾರ ಭಾರತಿ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‌ವೀಲ್ ಕ್ಲಬ್ ಫೋರ್ಟ್, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ಸ್ನೇಹ ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಕಾಸರಗೋಡಿನ ಯಕ್ಷಕೂಟ ಮಹಿಳಾ ವೇದಿಕೆ ಮಂಗಲಪಾಡಿಯ ‘ಶ್ರೀರಾಮದರ್ಶನ’ ತಾಳಮದ್ದಲೆ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹಾಭಾರತ, ರಾಮಾಯಣ, ಭಾಗವತದಂತಹ ಪುರಾಣ ಕಥೆಗಳನ್ನು ಸರಳವಾಗಿ ಹಾಗೂ ನಾಟಕದ ಶೈಲಿಯಲ್ಲಿ ಜನರಿಗೆ ತಲುಪಿಸುವುದು, ಸಮಾಜಕ್ಕೆ ಉತ್ತಮ ಸಂಸ್ಕಾರ ಕೊಡುವುದು ತಾಳೆಮದ್ದಲೆಯ ಉದ್ದೇಶ. ಯಕ್ಷಗಾನದಲ್ಲಿ ರಾಮ, ಕೃಷ್ಣ, ದುರ್ಯೋಧನ ಇತ್ಯಾದಿ ಪಾತ್ರಗಳನ್ನು ವೇಷದ ಮೂಲಕ ತೋರಿಸುತ್ತಾರೆ. ಆದರೆ, ಈ ತಾಳೆಮದ್ದಲೆಯಲ್ಲಿ ಗಮಕ ವ್ಯಾಖ್ಯಾನ ಬಳಸಿಕೊಂಡು ಸಂಭಾಷಣೆ ಮೂಲಕ ಪ್ರೇಕ್ಷಕರನ್ನು ತಲುಪುತ್ತೇವೆ’ ಎಂದರು.

ADVERTISEMENT

‘ಎತ್ತಣ ಮಾಮರ–ಎತ್ತಣ ಕೋಗಿಲೆ ಎನ್ನುವಂತೆ ಎತ್ತಣ ಕಾಸರಗೋಡು–ಮಂಗಲಪಾಡಿ ತಾಳಮದ್ದಲೆ, ಎತ್ತಣ ಕೋಟೆನಾಡು. ಆದರೆ, ತಾಳಮದ್ದಲೆ ಮೂಲಕ ಆ ಸಂಬಂಧ ಬೆಸೆದುಕೊಂಡಿದೆ’ ಎಂದು ಹೇಳಿದರು.

ರೋಟರಿ ಕ್ಲಬ್‍ ಚಿತ್ರದುರ್ಗ ಪೋರ್ಟ್ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ‘ಯಕ್ಷಗಾನ ಕರಾವಳಿ ಕಲೆ. ಸಂಸ್ಕೃತಿ ಮತ್ತು ಅಭಿರುಚಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ತಾಳಮದ್ದಲೆ ಬಯಲು ಸೀಮೆಗೆ ಹೊಸದು. ಕರಾವಳಿಯ ಜನರಿಗೆ ಚಿರಪರಿಚಿತ. ಅಂಥ ಕಲೆಯನ್ನು ಕೋಟೆನಾಡಿನ ಮಹಿಳೆಯರು ಪ್ರದರ್ಶಿಸುತ್ತಿರುವುದು ಸಂತಸದ ವಿಷಯ’ ಎಂದರು.

ಕಾರ್ಯಕ್ರಮದ ಸಂಚಾಲಕ ರೊಟೇರಿಯನ್ ಮಾರುತಿ ಮೋಹನ್, ‘ತಾಳಮದ್ದಲೆ ಬಗ್ಗೆ ನಮಗೆಲ್ಲ ತುಂಬಾ ಕುತೂಹಲ. ಈ ನೆಲ ಸಂಸ್ಕೃತಿ ವೈವಿಧ್ಯದ ತವರು. ಯಾವುದೇ ಕಲೆಯಿರಲಿ, ಕಲಾವಿದರಲಿ, ಇಲ್ಲಿಗೆ ಆಹ್ವಾನಿಸಿ, ಪ್ರೋತ್ಸಾಹಿಸುತ್ತೇವೆ. ಇಂಥ ನೆಲದಲ್ಲಿ ತಾಳಮದ್ದಲೆ ಪರಿಚಯವಾಗುತ್ತಿರುವುದು ಸಂತಸದ ವಿಷಯ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರಾವಳಿ ಕೂಟದ ಮುಖ್ಯಸ್ಥ ವೇದವ್ಯಾಸಾಚಾರ್ಯ (ಅಣ್ಣಾದೊರೈ), ಸಂಸ್ಕಾರ ಭಾರತಿ ಅಧ್ಯಕ್ಷ ಟಿ.ಕೆ.ನಾಗರಾಜರಾವ್, ಸಂಸ್ಕಾರ ಭಾರತಿ ವಿಭಾಗೀಯ ಅಧ್ಯಕ್ಷ ರಾಜೀವಲೋಚನ, ರೋಟರಿ ಕ್ಲಬ್‌ನ ಅಧ್ಯಕ್ಷ ಜಿ.ಎ.ವಿಶ್ವನಾಥ್, ಇನ್ನರ್‌ವ್ಹೀಲ್ ಫೋರ್ಟ್‌ನ ಅಧ್ಯಕ್ಷೆ ಪ್ರತಿಭಾ ವಿಶ್ವನಾಥ್, ಜಯ ಪ್ರಾಣೇಶ್ ಅವರೂ ಇದ್ದರು.

ನಂತರ ಕಾಸರಗೋಡಿನ ಕೂಟ ಮಹಾಜಗತ್ತು ಯಕ್ಷಕೂಟ ಮಹಿಳಾ ವೇದಿಕೆ ಮಂಗಲಪಾಡಿಯ ಮಹಿಳಾ ತಂಡ ಕೀರ್ತಿಶೇಷ ಹಲಸನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಶ್ರೀರಾಮ ದರ್ಶನ ಪೌರಾಣಿಕ ಕಥಾನಕದ ತಾಳಮದ್ದಲೆ ಪ್ರಸ್ತುತಪಡಿಸಿತು.

ಹರೀಶ್ ಬಳಂತಿ ಮುಗುರು ನಿರ್ದೇಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಅಜೇರು ಭಾಗವತಿಕೆ ನಡೆಸಿಕೊಟ್ಟರು. ಮದ್ದಲೆ ಸುಬ್ರಹ್ಮಣ್ಯ ಭಟ್ ವೇಲಂತ ಮಜಲು, ಚಂಡೆ ಎಂ.ಎಸ್. ಮಧುಸೂಧನ, ಮುಮ್ಮೇಳದಲ್ಲಿ ಸುಲೋಚನಾ ನಾವಡ, ಜಯಲಕ್ಷ್ಮೀ ಮಯ್ಯ, ಜಯಲಕ್ಷ್ಮೀ ಕಾರಂತ್, ಲತಾ ನಾವಡ, ಸರಸ್ವತಿ ಹೊಳ್ಳ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.