ADVERTISEMENT

ಸಮಾನತೆಯ ಹಕ್ಕನ್ನು ಕಿತ್ತುಕೊಳ್ಳಲು ಹೊರಟ ಕೇಂದ್ರ ಸಚಿವ

ಅನಂತಕುಮಾರ್ ಹೆಗಡೆ ವಿರುದ್ಧ ಹಿರಿಯೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 7:29 IST
Last Updated 28 ಡಿಸೆಂಬರ್ 2017, 7:29 IST

ಹಿರಿಯೂರು: ಸಂವಿಧಾನ ಬದಲಾಯಿಸಲೆಂದೇ ನಾವು ಅಧಿಕಾರ ನಡೆಸುತ್ತಿರುವುದು ಎಂದು ಹೇಳುವ ಮೂಲಕ ದೇಶದ 125 ಕೋಟಿ ಜನರ ಸಮಾನತೆಯ ಹಕ್ಕನ್ನು ಕಿತ್ತುಕೊಳ್ಳಲು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ನಗರದ ನೆಹರು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಸಾಧನಾ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಶಾಂತಿ, ಸಾಮರಸ್ಯ ಕದಡುವ ಕೆಲಸದಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ ತೊಡಗಿದ್ದಾರೆ. ಎಲ್ಲಾ ಧರ್ಮೀಯರು ಒಂದಾಗಿ ಬಾಳುವುದು ಬಿಜೆಪಿಯವರಿಗೆ ಇಷ್ಟವಿಲ್ಲ. ಅವರಿಗೆ ಎರಡು ನಾಲಿಗೆ, ಎರಡು ಮುಖ. ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದು ಅವರು ಜರಿದರು.

ADVERTISEMENT

ಭದ್ರಾ ಮೇಲ್ದಂಡೆ ಯೋಜನೆಯ 7 ಕಿ.ಮೀ. ಸುರಂಗ ಮಾರ್ಗ ನಿರ್ಮಾಣದಲ್ಲಿ ಸಡಿಲ ಮಣ್ಣು ಸಿಕ್ಕಿರುವ ಕಾರಣ ಕಾಮಗಾರಿ ವಿಳಂಬವಾಗಿದೆ. ಇನ್ನು 0.7 ಕಿ.ಮೀ. ಸುರಂಗ ಬಾಕಿ ಇದ್ದು 2018 ಮೇ ತಿಂಗಳ ಒಳಗೆ ನೀರು ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯೋಜನೆಯಿಂದ ಹಿರಿಯೂರು ತಾಲ್ಲೂಕಿನ 1.80 ಲಕ್ಷ ಎಕರೆ ನೀರಾವರಿಗೆ ಒಳಪಡಲಿದೆ. 33 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಹಿಂದಿನ ಸರ್ಕಾರ ಈ ಯೋಜನೆಗೆ ಕೇವಲ ₹ 571 ಕೋಟಿ ಖರ್ಚು ಮಾಡಿತ್ತು. ನಾವು 1500 ಕೋಟಿ ಖರ್ಚು ಮಾಡಿದ್ದೇವೆ. ಪ್ರತಿ ವರ್ಷ ನೀರಾವರಿಗೆ ₹ 10 ಸಾವಿರ ಕೋಟಿ ಖರ್ಚು ಮಾಡುವ ಭರವಸೆ ನೀಡಿದ್ದೆವು. ಈಗಾಗಲೇ 45 ಸಾವಿರ ಕೋಟಿ ಖರ್ಚಾಗಿದೆ. ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ನಮ್ಮದು. ರೈತರ ಸಹಕಾರ ಸಂಘಗಳಲ್ಲಿದ್ದ 10,500 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ₹ 42 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಪ್ರಧಾನಿ ನರೇಂದ್ರ ಮೋದಿ ಒಪ್ಪಲಿಲ್ಲ. ಇಲ್ಲಿನ ಬಿಜೆಪಿ ನಾಯಕರು ಅಲ್ಲಿ ಬಾಯಿ ಬಿಡಲಿಲ್ಲ. ಇದು ರೈತರ ಬಗೆಗಿನ ಕಾಳಜಿ ಎಂದು ಸಿದ್ದರಾಮಯ್ಯ ಟೀಕಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ಸುಧಾಕರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ವಾಣಿ ವಿಲಾಸ ಜಲಾಶಯಕ್ಕೆ ಹರಿಸಬೇಕು. ಧರ್ಮಪುರವನ್ನು ತಾಲ್ಲೂಕು ಕೇಂದ್ರ ಮಾಡಬೇಕು. ಎಲ್ಲ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ನಗರಕ್ಕೆ ಒಳಾಂಗಣ ಕ್ರೀಡಾಂಗಣ ಮಂಜೂರು ಮಾಡಬೇಕು. ತಾಲ್ಲೂಕಿನಲ್ಲಿ 90 ಸಾವಿರ ಅಲೆಮಾರಿಗಳಿದ್ದು, ಕನಿಷ್ಠ 3000 ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ‘ಬರಗಾಲದಲ್ಲಿ ಸ್ವಂತ ಖರ್ಚಿನಲ್ಲಿ ಮೇವು ಬೆಳೆಸಿ ಜಾನುವಾರುಗಳನ್ನು ಉಳಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ಇಡೀ ಜಿಲ್ಲೆಯಲ್ಲಿಯೇ ಹೆಚ್ಚಿನ ಅನುದಾನ ಬಂದಿರುವುದು ಈ ಕ್ಷೇತ್ರಕ್ಕೆ. ಮತ್ತೊಮ್ಮೆ ಅವರನ್ನು ಮತದಾರರು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ 490 ಕೋಟಿ ರೂ, ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿ, 43 ಕೋಟಿ ವೆಚ್ಚದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾಮಗಾರಿ, 36 ಕೋಟಿ ವೆಚ್ಚದ ಲೋಕೋಪಯೋಗಿ ಇಲಾಖೆ ಕಾಮಗಾರಿ, 25.77 ಕೋಟಿ ವೆಚ್ಚದ ಕೊಳಚೆ ನಿರ್ಮೂಲನ ಮಂಡಳಿ ಕಾಮಗಾರಿ, 16 ಕೋಟಿ ರೂ, ವೆಚ್ಚದ ಸಣ್ಣ ನೀರಾವರಿ ಇಲಾಖೆ ಕಾಮಗಾರಿ, 25 ಕೋಟಿ ರೂ, ವೆಚ್ಚದ ನಗರಸಭೆ ಕಾಮಗಾರಿ, 10.42 ಕೋಟಿ ವೆಚ್ಚದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ಸಿದ್ದರಾಮಯ್ಯ ವಿತರಿಸಿದರು.

ವೇದಿಕೆಯಲ್ಲಿ ಸಂಸದ ಬಿ.ಎನ್. ಚಂದ್ರಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯಬಸವರಾಜನ್, ಶಾಸಕ ಬಿ.ಜಿ. ಗೋವಿಂದಪ್ಪ, ಜಯಮ್ಮ ಬಾಲರಾಜು, ಶಶಿಕಲಾ ಸುರೇಶ್ ಬಾಬು, ಗೀತಾ ನಾಗಕುಮಾರ್, ನಾಗೇಂದ್ರನಾಯ್ಕ್, ಪಾಪಣ್ಣ, ಒ. ಶಂಕರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ, ತಹಶೀಲ್ದಾರ್ ವೆಂಕಟೇಶಯ್ಯ, ಜಿ.ಎಸ್. ಮಂಜುನಾಥ್, ಫಾತ್ಯರಾಜನ್, ಖಾದಿ ರಮೇಶ್, ಕಲ್ಲಟ್ಟಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸ್ವಾಗತಿಸಿದರು. ಸಮಾರಂಭ ನಡೆದ ನೆಹರು ಮೈದಾನ ಜನರಿಂದ ಕಿಕ್ಕಿರಿದು ತುಂಬಿತ್ತು.

‘ಮಗುವಿನಂತೆ ಹಠ ಹಿಡಿದು ಕೆಲಸ ಮಾಡಿಸಿಕೊಂಡ ಶಾಸಕ’

ಶಾಸಕ ಡಿ. ಸುಧಾಕರ್ ಅವರು ಅಭಿವೃದ್ಧಿ ವಿಚಾರದಲ್ಲಿ ಮಗುವಿನಂತೆ ಹಠ ಹಿಡಿದು ಕೆಲಸ ಮಾಡಿಸಿಕೊಂಡ ಪರಿಣಾಮ ₹ 672 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.

‘ಧರ್ಮಪುರವನ್ನು ತಾಲ್ಲೂಕು ಕೇಂದ್ರ ಮಾಡಬೇಕು. ಮಹಿಳಾ ಸಂಘಗಳಿಗೆ ಬಡ್ಡಿ ರಹಿತ ಸಾಲದ ಜತೆ ಸಬ್ಸಿಡಿ ನೀಡಬೇಕು. ಅಲೆಮಾರಿ ಜನಾಂಗದವರಿಗೆ ಹಾಗೂ ನಗರ ಪ್ರದೇಶದ ಬಡವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದು, ಸಕಾರಾತ್ಮಕ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಸಿಎಂ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.