ADVERTISEMENT

ಸರ್ಕಾರದ ಅನುದಾನ ಸದುಪಯೋಗವಾಗಲಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 9:55 IST
Last Updated 20 ಅಕ್ಟೋಬರ್ 2011, 9:55 IST

ಚಿತ್ರದುರ್ಗ: ಸ್ವಯಂಸೇವಾ ಸಂಸ್ಥೆಗಳು ಕಾಟಾಚಾರಕ್ಕೆ ಸರ್ಕಾರದ ಅನುದಾನ ಬಳಸಿಕೊಳ್ಳದೆ, ಸಮರ್ಪಕವಾಗಿ ಅನುಷ್ಠಾನ ಮಾಡಲು ಉತ್ಸಾಹ ತೋರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಮ್ ಕಿವಿಮಾತು ಹೇಳಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್) ಮತ್ತು ಅಂಜನಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಮಾಜದ ಆಶ್ರಯದಲ್ಲಿ ಸ್ವಸಹಾಯ ಗುಂಪುಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ತಯಾರಿಸಿದ ಗೃಹ ಬಳಕೆಯ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ `ಗ್ರಾಮೀಣ ನಿಧಿ~ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ಸಂಸ್ಥೆಗಳು ಹಣ ಪಡೆಯಲು ಮಾತ್ರ ಉತ್ಸಾಹ ತೋರುತ್ತವೆ.  ಆದರೆ, ಮಹಿಳೆಯರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ರೂಪಿಸುವುದಿಲ್ಲ ಎಂದರು.

ಸ್ವಾವಲಂಬಿ ಬದುಕು ಸಾಗಿಸಲು ಮಹಿಳೆಯರಿಗೆ ವಿಪುಲ ಅವಕಾಶಗಳಿವೆ.ಅಡಿಕೆ ತಟ್ಟೆಯಂತಹ ವಸ್ತುಗಳನ್ನು ಮನೆಯಲ್ಲೇ ತಯಾರಿಸಿ ಹೆಚ್ಚಿನ ಪ್ರಚಾರ ನೀಡಬೇಕು. ಜಿಲ್ಲಾ ಪಂಚಾಯ್ತಿಯಿಂದ ಬೇಕಾಗುವ ಎಲ್ಲ ನೆರವು ನೀಡಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್. ಜಯಸ್ವಾಮಿ ಮಾತನಾಡಿ, ಸ್ತ್ರೀಶಕ್ತಿ ಗುಂಪುಗಳು ಉತ್ಪನ್ನಗಳನ್ನು ಹೊರಗಿನಿಂದ ತಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಲಾಭವಿಲ್ಲ. ನೀವೇ ತಯಾರಿಸಿ ಮಾರಾಟ ಮಾಡಬೇಕು. ಗುಣಮಟ್ಟ ಮತ್ತು ಪ್ಯಾಕೇಜಿಂಗ್‌ಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದರು.

ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಉದ್ಯೋಗದಲ್ಲಿರುವುದರಿಂದ ತಯಾರಿಸಿದ ಆಹಾರ ಉತ್ಪನ್ನಗಳಿಗೆ ಬೇಡಿಕೆ ಇದೆ. ಆದ್ದರಿಂದ ಸ್ತ್ರೀಶಕ್ತಿ ಸಂಘಗಳು ಆಹಾರ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಬೇಕು ಎಂದರು.

ರುಡ್‌ಸೆಟ್ ನಿರ್ದೇಶಕ ಅರವಿಂದ ಮುತಗಿ, ನಬಾರ್ಡ್ ವ್ಯವಸ್ಥಾಪಕ ಪ್ರಕಾಶ್ ಭಂಡಾರಿ, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಅಂಜನಾದೇವಿ ಮಹಿಳಾ ಗ್ರಾಮೀಣಾಭಿವೃದ್ಧಿ ಸಮಾಜದ ಕಾರ್ಯದರ್ಶಿ ಶಶಿರೇಖಾ ರವಿಶಂಕರ್, ಟಿ.ಸಿ. ಗಂಗಾಧರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.