ADVERTISEMENT

ಸರ್‌ಎಂವಿ ಕನಸು ನನಸು ಮಾಡಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 5:56 IST
Last Updated 25 ಸೆಪ್ಟೆಂಬರ್ 2013, 5:56 IST

ಚಿತ್ರದುರ್ಗ: ಸರ್‌.ಎಂ.ವಿಶ್ವೇಶ್ವರಯ್ಯ ಅವರು ಕಂಡಂತಹ ಸ್ವಾವಲಂಬನೆ ಸಮೃದ್ಧ ಕರ್ನಾಟಕದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮಹಿಮ ಪಟೇಲ್ ಸಲಹೆ ನೀಡಿದರು. 

ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಸ್ಟೆಪ್ ಸಭಾಂಗಣದಲ್ಲಿ ಮಂಗಳವಾರ ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಎಂಜಿನೀಯರ್‌್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಿಂತನೆಗಳೇ ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಣಕ್ಕೆ ರಹದಾರಿಯಾಗಿದ್ದು, ನಾವು ಕಂಡ ಕನಸು ನನಸು ಮಾಡುವ ನಿಟ್ಟಿನಲ್ಲಿ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ.ಎಸ್.ಬಿ. ಶಿವಕುಮಾರ್ ಮಾತನಾಡಿ, ವಿಶ್ವೇಶ್ವರಯ್ಯ ಅವರು ಒಬ್ಬ ಪ್ರತಿಭಾವಂತ ದಕ್ಷ ಆಡಳಿತಗಾರ, ಕರ್ಮಯೋಗಿ ಹಾಗೂ ನೂರೆಂಟು ಯೋಜನೆಗಳ ಹರಿಕಾರರಾಗಿದ್ದಾರೆ. ಅವರ ದೂರದರ್ಶಿತ್ವದ ಫಲವಾಗಿ ಕನ್ನಂಬಾಡಿ ಕಟ್ಟೆ, ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿ ಉಕ್ಕು ಮತ್ತು ಕಾಗದ ಕಾರ್ಖಾನೆ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನ ಗೊಳಿಸಿದರು ಎಂದರು.

ಅವರಲ್ಲಿದ್ದ ಸತತ ಪರಿಶ್ರಮ ಶಿಸ್ತುಬದ್ದ ಪ್ರಾಮಾಣಿಕ ನಡವಳಿಕೆ ಇಂದಿನ ಕಿರಿಯ ಎಂಜಿನಿಯರ್‌ಗಳಿಗೆ ಮಾದರಿಯಾಗಬೇಕು. ಬದುಕಿರು ವಾಗಲೇ ದಂತಕತೆಯಾದ ವ್ಯಕ್ತಿ ವಿಶ್ವೇಶ್ವರಯ್ಯ ಎಂದುಬಣ್ಣಿಸಿದರು.

ಎಸ್‌ಜೆಎಂ ವಿದ್ಯಾಪೀಠದ ಉಪಾಧ್ಯಕ್ಷ ಪ್ರೊ.ಎಸ್.ಎಚ್.ಪಟೇಲ್‌ ಮಾತನಾಡಿ, ನಮ್ಮ ಬದುಕನ್ನು ನಾವೇ ಸ್ವಇಚ್ಛೆಯಿಂದ ರೂಪಿಸಿಕೊಳ್ಳಬೇಕು. ಪರಿವರ್ತನೆ ಜಗದ ನಿಯಮ,  ಸಮಾಜ ಕಾಲಕ್ಕೆ ತಕ್ಕಂತೆ ಪರಿವರ್ತನೆಗೊಂಡಿರುತ್ತದೆ,  ನಾವು ಒಳ್ಳೆಯ ವಿಚಾರ ಮತ್ತು ಚಿಂತನೆಗಳಿಗೆ ಒತ್ತು ನೀಡಿ ಸಮಾಜಮುಖಿಯಾಗಬೇಕು ಎಂದರು.
ಅನುಷಾ ಪ್ರಾರ್ಥಿಸಿದರು. ಶೀತಲ್ ಸ್ವಾಗತಿಸಿದರು. ಹರ್ಷಿತ ಮತ್ತು ಪವನ್  ನಿರೂಪಿಸಿದರು. ರಂಜಿತಾ ವಂದಿಸಿದರು.  

ವಿಭಾಗಮಟ್ಟಕ್ಕೆ ಆಯ್ಕೆ
ನಗರದ ಓನಕೆ ಓಬವ್ವ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹಿರಿಯೂರು ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಎಂ.ಡಿ. ಕೋಟೆಯ ವಿದ್ಯಾರ್ಥಿಗಳು ಥ್ರೋಬಾಲ್‌ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT