ADVERTISEMENT

ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ಘಟಕ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 6:15 IST
Last Updated 28 ಅಕ್ಟೋಬರ್ 2017, 6:15 IST

ಹಿರಿಯೂರು: ತಾಲ್ಲೂಕಿನ ಹುಚ್ಚವ್ವನಹಳ್ಳಿ ಸಮೀಪ ಇರುವ ಅಕ್ಷಯ ಫುಡ್ ಪಾರ್ಕ್‌ನಲ್ಲಿ ಶೀಘ್ರ ಅರ್ಧ ಎಕರೆ ಭೂಮಿ ಖರೀದಿಸಿ ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ಘಟಕ ಆರಂಭಿಸಲಾಗುವುದು ಎಂದು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಶ್ರೀಕೃಪ ಹೇಳಿದರು.

‌ತಾಲ್ಲೂಕಿನ ಮ್ಯಾದನಹೊಳೆ ಗ್ರಾಮದಲ್ಲಿ ಗುರುವಾರ ಕೃಷಿ ಇಲಾಖೆ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಮತ್ತು ವೀರಭದ್ರಸ್ವಾಮಿ ಸಾವಯವ ಕೃಷಿಕರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾವಯವ ಪದ್ದತಿಯಲ್ಲಿ ಬೆಳೆದ ಸಿರಿಧಾನ್ಯ ಬೆಳೆಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಪರಿಶ್ರಮ ಹಾಗು ಎರಡೂ ಜಿಲ್ಲೆಗಳ ೩೪ ಸಾವಯವ ಕೃಷಿಕರ ಸಂಘಗಳ ಸಹಕಾರದಿಂದ 14 ಒಕ್ಕೂಟಗಳಲ್ಲಿ ನಮ್ಮ ಒಕ್ಕೂಟ ಪ್ರಥಮ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಕ್ಷಯ ಫುಡ್ ಪಾರ್ಕ್ ನಲ್ಲಿ ಆರಂಭಿಸುವ ಘಟಕದ ಪ್ರಯೋಜನವನ್ನು ಸಾವಯವ ಕೃಷಿಕರು ಪಡೆದುಕೊಳ್ಳಬೇಕು. ನಮ್ಮ ಒಕ್ಕೂಟದಿಂದ ಬೇಕರಿ ಪದಾರ್ಥಗಳನ್ನು ತಯಾರಿಸುತ್ತಿದ್ದು, ತುಂಬಾ ಬೇಡಿಕೆ ಇದೆ ಎಂದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರುದ್ರೇಗೌಡ ಮಾತನಾಡಿ, ಸಾವಯವ ಕೃಷಿಕರು ಬಿತ್ತನೆ ಮಾಡುವ ಮೊದಲು ಟ್ರೈಕೋಡರ್ಮಾ ಹಾಗೂ ರೈಝೋಬಿಯಂನಂತಹ ಜೈವಿಕ ಗೊಬ್ಬರ ಬಳಸಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. 100 ಕೆ.ಜಿ ಎರೆಗೊಬ್ಬರ ಹಾಗೂ ಕಾಂಪೋಸ್ಟ್ ಗೊಬ್ಬರಕ್ಕೆ 1 ಕೆ.ಜಿ ಯಂತೆ ಜೈವಿಕ ಗೊಬ್ಬರ ಬೆರೆಸಿ 25 ರಿಂದ 30 ದಿನ ಕತ್ತಲೆ ಕೋಣೆಯಲ್ಲಿ ತಂಪು ಮಾಡಿ ನಂತರ ಭೂಮಿಗೆ ಸೇರಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.

ಹಿರಿಯ ಸಾವಯವ ಕೃಷಿಕ ಎಂ.ಆರ್.ಪುಟ್ಟಸ್ವಾಮಿ, ‘ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳಿಗೆ ತುಂಬಾ ಬೇಡಿಕೆ ಇದ್ದು, ರೈತರು ಮಾರುಕಟ್ಟೆ ಅಧ್ಯಯನ ಮಾಡಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆದರೆ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು’ ಎಂದರು.

ಒಕ್ಕೂಟದ ಅಧಿಕಾರಿ ಡಿ.ಲೋಕೇಶ್ ಮಾತನಾಡಿ ಸಿರಿಧಾನ್ಯಗಳಾದ ರಾಗಿ,ನವಣೆ,ಕೊರಲೆ, ಆರ್ಕಾ, ಬರಗು, ಊದಲು, ಸಾಮೆ ಮತ್ತು ಸಜ್ಜೆ ಬೆಳೆಗಳನ್ನು ಕಡಿಮೆ ನೀರು ಹಾಗೂ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು ಎಂದರು.

ಕೃಷಿ ಅಧಿಕಾರಿ ಡಾ.ಎಂ.ಮಹಮದ್ ಮುಸ್ತಾಕ್ ಅಹಮದ್ ಮಾತನಾಡಿದರು. ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಪರಮೇಶ್, ಎಂ.ಎಚ್.ಷಣ್ಮುಖಪ್ಪ, ರಾಘವೇಂದ್ರ, ಎಂ.ಎಚ್.ಚಂದ್ರಣ್ಣ, ಎಂ.ಕೆ.ಹನುಮಂತಪ್ಪ, ಎಂ.ಎಂ.ಸುದರ್ಶನ್, ಎನ್.ವಿರೂಪಾಕ್ಷಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.