ADVERTISEMENT

ಸುಳ್ಳಿನ ಸೌಧ ನಿರ್ಮಿಸಿದ ಸಿ.ಎಂ. ಸಿದ್ದರಾಮಯ್ಯ

‘ಸುಳ್ಳಿನ ಸರ್ದಾರ ಸಿದ್ದು ಸರ್ಕಾರ’ ವರದಿ ಪ್ರದರ್ಶಿಸಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 9:35 IST
Last Updated 28 ಏಪ್ರಿಲ್ 2018, 9:35 IST

ಚಿತ್ರದುರ್ಗ: ‘ಶುಕ್ರವಾರ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಗಳಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್ ಟೀಕಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಹೊಸ ಭರವಸೆಗಳೂ ಇಲ್ಲ. ಸರ್ಕಾರ ಹಳೆಯ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಜರಿದರು.

‘ಕಳೆದ ಬಾರಿ 250ಕ್ಕೂ ಹೆಚ್ಚು ಅಂಶಗಳುಳ್ಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಪ್ರಣಾಳಿಕೆಯ ಅಂಶ ಮತ್ತು ಅನುಷ್ಠಾನಗೊಂಡಿರುವ ಯೋಜನೆಗಳನ್ನು ಕುರಿತು ಬಿಜೆಪಿ ಪರಿಶೀಲಿಸಿದಾಗ, ಸುಮಾರು 200 ಯೋಜನೆಗಳಿಗೆ ಚಾಲನೆ ನೀಡಿಲ್ಲ. ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಿಲ್ಲ ಎಂಬುದು ಗೊತ್ತಾಯಿತು. ಇಂಥ ಸುಳ್ಳಿನ ಅಂಶಗಳನ್ನು ಕ್ರೋಡೀಕರಿಸಿ ಬಿಜೆಪಿ ‘ಸುಳ್ಳುಗಳ ಸರದಾರ ಸಿದ್ದು ಸರ್ಕಾರ’ ಎಂಬ ಶೀರ್ಷಿಕೆಯ ವರದಿಯೊಂದನ್ನು ಸಿದ್ಧಪಡಿಸಿ ಬಿಡುಗಡೆ ಮಾಡುತ್ತಿದೆ’ ಎಂದು ವರದಿಯ ಪ್ರತಿಯನ್ನು ಪ್ರದರ್ಶಿಸಿದರು.

ADVERTISEMENT

‘ನೀರಾವರಿ ಯೋಜನೆಗೆ ಪ್ರತಿ ವರ್ಷ ₹ 50 ಸಾವಿರ ಕೋಟಿ ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಆದರೆ, ಅಷ್ಟು ಪ್ರಮಾಣದ ಹಣ ಖರ್ಚಾಗಿಲ್ಲ. ಜಿಲ್ಲೆಯ ಪ್ರಮುಖ ಯೋಜನೆ ಭದ್ರಾ ಮೇಲ್ದಂಡೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ರಾಜ್ಯದ ಪ್ರತಿ ತಾಲ್ಲೂಕುಗಳಲ್ಲಿ ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಪರಿಸ್ಥಿತಿ ಹೇಗಿದೆ ಎಂದು ನಿಮಗೂ ಗೊತ್ತಿದೆ. ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುತ್ತೇವೆ ಎಂದು ಹೇಳಿದ ಮಾತು ಈಡೇರಿಲ್ಲ’ ಎಂದು ಈಡೇರದ ಭರವಸೆಗಳ ಪಟ್ಟಿಯನ್ನು ನವೀನ್ ತೆರೆದಿಟ್ಟರು.

‘ಈ ಬಾರಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲೂ ಯಾವುದೇ ವಾಸ್ತವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಸೌಧವನ್ನು ನಿರ್ಮಿಸಿದ್ದಾರೆ. ಕಾಂಗ್ರೆಸ್ ಹೇಳುವ ಸುಳ್ಳನ್ನು ಯಾರೂ ನಂಬಬೇಡಿ. ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.