ADVERTISEMENT

ಸೂರಿಲ್ಲದೆ ಪರದಾಡುತ್ತಿದೆ ಅಲೆಮಾರಿ ಜನಾಂಗ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 8:20 IST
Last Updated 26 ಫೆಬ್ರುವರಿ 2012, 8:20 IST

ನಾಯಕನಹಟ್ಟಿ: ಇಲ್ಲಿನ ನಾಡಕಚೇರಿ ಬಳಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರ ಗೋಳು ಕೇಳುವವರಿಲ್ಲದಂತಾಗಿದೆ.  ಅಲೆಮಾರಿಗಳು ಎಂದಾಕ್ಷಣ ಊರಿನ ಹೊರಭಾಗದಲ್ಲಿ ಬಟ್ಟೆಯ ಗುಡಿಸಲುಗಳನ್ನು ಕಟ್ಟಿಕೊಂಡು ಕೆಲವು ದಿನ ಮಾತ್ರ ಗ್ರಾಮದಲ್ಲಿ ಭಿಕ್ಷಾಟನೆ ಮಾಡಿಕೊಂಡು ಮುಂದಿನ ಗ್ರಾಮಕ್ಕೆ ತೆರಳುವವರು ಎಂಬ ಕಲ್ಪನೆ ಜನಸಾಮಾನ್ಯರಲ್ಲಿದೆ. 

 ಆದರೆ, ಇದಕ್ಕೆ ಅಪವಾದವೆಂಬಂತೆ ಇಲ್ಲಿನ ಅಲೆಮಾರಿ ಜನಾಂಗ ಸುಮಾರು ಹದಿನೇಳು ವರ್ಷಕ್ಕೂ ಹಿಂದಿನಿಂದ ಇಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಸ್ವಂತ ಸೂರಿಲ್ಲ. ಜೀವನ ನಿರ್ವಹಣೆಗಾಗಿ ಬೀಗ, ಕೀಲಿ, ಬಟ್ಟೆ ಮತ್ತು ಸ್ಟೇಷನರಿ ವ್ಯಾಪಾರ ಮಾಡುತ್ತಾರೆ. 

 ಸುಮಾರು 18 ಗುಡಿಸಲುಗಳಿದ್ದು, ಒಂದೊಂದು ಗುಡಿಸಲಿನಲ್ಲಿ ಎರಡು ಕುಟುಂಬಗಳು ವಾಸಿಸುತ್ತಿವೆ. ಜೀವನ ಸಾಗಿಸುವುದು ಕಷ್ಟಕರವಾದರೂ ಎಂದೂ ಭಿಕ್ಷಾಟನೆಗೆ ಇಳಿದಿಲ್ಲ. ಇವರ ಮೂಲ ಊರು ದಾವಣಗೆರೆ ಜಿಲ್ಲೆಯ ಈಚಲ ಸಿದ್ಧಮ್ಮನಹಳ್ಳಿ.

ವ್ಯಾಪಾರಕ್ಕೆಂದು ಬಂದವರು ಬಿಎಸ್‌ಎನ್‌ಎಲ್ ಕಚೇರಿಯ ಬಳಿ ಗುಡಿಸಲು ಹಾಕಿಕೊಂಡು ಕಾಯಂ ಆಗಿ ವಾಸಿಸತೊಡಗಿದೆವು. ಅಲ್ಲಿ ಬೆಂಕಿ ಆಕಸ್ಮಿಕದಿಂದ ಗುಡಿಸಲುಗಳೆಲ್ಲಾ ಸುಟ್ಟು ಹೋದವು. ಆಗ ಅಲ್ಲಿನ ಇತರ ಜನಾಂಗದವರಿಗೆ ತಾಲ್ಲೂಕು ಆಡಳಿತ ಆಂಜನೇಯ ಬಡಾವಣೆಯಲ್ಲಿ ನಿವೇಶನ ನೀಡಿತು. ದನಿ ಇಲ್ಲದವರ ನಮ್ಮ ಗೋಳನ್ನು ಕೇಳುವವರಿಲ್ಲದೆ ಅಂದಿನಿಂದ ಇಲ್ಲಿವರೆಗೂ ಇದೇ ನಾಡಕಚೇರಿ ಬಳಿ ವಾಸಿಸುತ್ತಿದ್ದೇವೆ ಎಂದು ಅಳಲು ತೋಡಿಕೊಳ್ಳುತ್ತಾರೆ ಅಣ್ಣಪ್ಪ.

ಪ್ರತಿ ವರ್ಷ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಜಾತ್ರೆ ಸಂದರ್ಭದಲ್ಲಿ ಗುಡಿಸಲು ತೆರವುಗೊಳಿಸಲು ಬರುತ್ತಾರೆ. ಆದರೆ, ನಮ್ಮ ಗೋಳು ಕೇಳುವವರಿಲ್ಲ. ನಮಗೂ ಆ ಸ್ವಾಮಿ ಕಾರ್ಯಕ್ಕೆ ಅಡ್ಡಿಯಾಗುತ್ತೇವಲ್ಲ ಎಂಬ ಕೊರಗಿದೆ. ಈ ಬಗ್ಗೆ ನಮ್ಮ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ರಂಗನಾಥ.

ನಮಗೂ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಇದೆ. ನಮ್ಮ ಮಕ್ಕಳು ಈ ಗ್ರಾಮದ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇಲ್ಲಿನ ಕಾಯಂ ನಿವಾಸಿಗಳು ಎನ್ನುವುದಕ್ಕೆ ಸಾಕಷ್ಟು ದಾಖಲೆಗಳಿವೆ. ಆದರೆ, ಪ್ರಯೋಜನ ಮಾತ್ರ ಶೂನ್ಯ. ಸೂರಿಲ್ಲದೇ ಬಟ್ಟೆಯ ಗುಡಿಸಲುಗಳಲ್ಲಿ ವಾಸಿಸುತ್ತಿರುವ ನಮ್ಮ ಜ್ಞಾಪಕ ಕೇವಲ ಚುನಾವಣೆಯಲ್ಲಿ ಮಾತ್ರ. ತುಳಿತಕ್ಕೊಳಗಾದ ಜನಾಂಗವೆಂದು ನಮ್ಮ ಕಡೆ ಕಣ್ಣೆತ್ತಿ ಸಹ ನೋಡುವುದಿಲ್ಲ ಎಂದು ಕಣ್ಣಿರಿಡುತ್ತಾರೆ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.