ADVERTISEMENT

ಹರಿಶ್ಚಂದ್ರಘಾಟ್ ಬಡಾವಣೆಗೆ ಸೌಲಭ್ಯದ ಕೊರತೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 12:30 IST
Last Updated 23 ಅಕ್ಟೋಬರ್ 2011, 12:30 IST

ಹಿರಿಯೂರು: ನಗರದ ಹರಿಶ್ಚಂದ್ರಘಾಟ್ ಬಡಾವಣೆಯ ಬಡವರಿಗೆ ಸ್ಮಶಾನ ಮಂಜೂರು ಮಾಡಲಾಗಿದೆ. ಆದರೆ,  ಮೂಲಸೌಲಭ್ಯ ಕಲ್ಪಿಸದೇ ಇರುವುದು ಬೇಸರದ ಸಂಗತಿ ಎಂದು ಶನಿವಾರ ಬಡಾವಣೆಯಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕುಂದು-ಕೊರತೆ ಸಭೆಯಲ್ಲಿ ನಾಗರಿಕರು ದೂರಿದರು.

ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಪುರಸಭೆ ಹಾಗೂ ತಾಲ್ಲೂಕು ಕಚೇರಿ ಮುಂದೆ ನಿವಾಸಿಗಳು ಧರಣಿ ನಡೆಸಿದ್ದರಿಂದ ತಹಶೀಲ್ದಾರ್ ಪ್ರಯತ್ನ ನಡೆಸಿ, ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಸಿದ್ದಾರೆ.

ಆದರೆ, ಬಡಾವಣೆಯಲ್ಲಿ ಸರಿಯಾದ ರಸ್ತೆಯಿಲ್ಲ, ಚರಂಡಿ ನಿರ್ಮಿಸಿಲ್ಲ. ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿಲ್ಲ. ಖಾಲಿ ನಿವೇಶನಗಳಲ್ಲಿ ಬಳ್ಳಾರಿಜಾಲಿ ಮುಳ್ಳು ಬೆಳೆದು ಹಂದಿಗಳ ವಾಸಸ್ಥಾನವಾಗಿದೆ. ಓವರ್ ಹೆಡ್‌ಟ್ಯಾಂಕ್ ನಿರ್ಮಿಸುತ್ತೇವೆ ಎಂದು ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ ಎಂದು ನಿವಾಸಿಗಳ ಪರವಾಗಿ ಮಾತನಾಡಿದ ಘಾಟ್‌ರವಿ ಆರೋಪಿಸಿದರು.

ಬಡಾವಣೆಯಲ್ಲಿ 25-30 ವರ್ಷಗಳಿಂದ ವಾಸಿಸುತ್ತಿರುವವರಿಗೆ ನಿವೇಶನದ ಹಕ್ಕುಪತ್ರ ನೀಡಿಲ್ಲ. ತಕ್ಷಣ ಹಕ್ಕುಪತ್ರ ನೀಡಿ ಸರ್ಕಾರದ ಯಾವುದಾದರೂ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕು. ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಚಂದ್ರಶೇಖರಪ್ಪ ಮಾತನಾಡಿ, ಸುಮಾರು 2 ಸಾವಿರ ನಿವೇಶನರಹಿತರಿಗೆ ನಿವೇಶನ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದಷ್ಟು ಬೇಗ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಾಗರಿಕರು ಸಭೆಯಲ್ಲಿ ನಾಗರಿಕರು ವಿವಿಧ ಬೇಡಿಕೆಗಳನ್ನು ಮಂಡಿಸಿದರು. ಪುರಸಭಾ ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಕುಂದು- ಕೊರತೆ ಸಭೆ ಉದ್ಘಾಟಿಸಿದರು. ಉಪಾಧ್ಯಕ್ಷೆ ಜ್ಯೋತಿಲಕ್ಷ್ಮೀ ಗೋಪಿಯಾದವ್, ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಡಿವೈಎಸ್ಪಿ ಎನ್. ರುದ್ರಮುನಿ, ರಂಗಪ್ಪ, ಫಕೃದ್ದೀನ್‌ಸಾಬ್ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.