ADVERTISEMENT

ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 6:18 IST
Last Updated 13 ಅಕ್ಟೋಬರ್ 2017, 6:18 IST
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿರುವ ಎಂ.ಡಿ. ಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆಯ ಪಕ್ಕದಲ್ಲಿ ಹರಿಯುವ ಹಳ್ಳದ ನೀರನ್ನು ಸಂಗ್ರಹಿಸಿಡಲು ಸುತ್ತಮುತ್ತ ಸಿಗುವ ಕಲ್ಲು, ಮಣ್ಣು ಬಳಸಿ ಚೆಕ್ ಡ್ಯಾಂ ನಿರ್ಮಾಣದಲ್ಲಿ ತೊಡಗಿರುವುದು.
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿರುವ ಎಂ.ಡಿ. ಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಾಲೆಯ ಪಕ್ಕದಲ್ಲಿ ಹರಿಯುವ ಹಳ್ಳದ ನೀರನ್ನು ಸಂಗ್ರಹಿಸಿಡಲು ಸುತ್ತಮುತ್ತ ಸಿಗುವ ಕಲ್ಲು, ಮಣ್ಣು ಬಳಸಿ ಚೆಕ್ ಡ್ಯಾಂ ನಿರ್ಮಾಣದಲ್ಲಿ ತೊಡಗಿರುವುದು.   

ಹಿರಿಯೂರು: ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂದಯ ತಿಳಿಯುವುದಕ್ಕೆ ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿರುವ ಎಂ.ಡಿ.ಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಮ್ಮೆ ಭೇಟಿ ನೀಡಬೇಕು.

ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಹಳ್ಳವೊಂದಿದ್ದು, ಸ್ವಲ್ಪ ಮಳೆ ಬಿದ್ದರೂ ನೀರು ಬೇರೆ ಕಡೆ ಹರಿದು ಹೋಗುತ್ತಿತ್ತು. ಹಳ್ಳದಲ್ಲಿ ಹರಿದು ಹೋಗುವ ನೀರನ್ನು ಶಾಲೆಯ ಹತ್ತಿರವೇ ಇಂಗುವಂತೆ ಮಾಡಿದರೆ ಅಂತರ್ಜಲ ಹೆಚ್ಚುತ್ತದೆ.

ಶಾಲೆಯ ಪರಿಸರವನ್ನು ಹಸಿರಾಗಿಡಲು ಸಹಾಯಕವಾಗುತ್ತದೆ ಎಂದು ಯೋಚಿಸಿ, ಹಳ್ಳದ ಇಳಿಜಾರಿಗೆ ಅಡ್ಡಲಾಗಿ ನಾಲ್ಕೈದು ಕಡೆ ಏಕೆ ಒಡ್ಡು ನಿರ್ಮಿಸಬಾರದು ಎಂದು ಮಕ್ಕಳಿಗೆ ತಿಳಿಸಿದ್ದೇ ತಡ ಸಮುದ್ರಕ್ಕೆ ಸೇತುವೆ ಕಟ್ಟಿದ ವಾನರ ಸೇನೆಯಂತೆ ಮುಂದಾದ ಆರು ಮತ್ತು ಏಳನೇ ತರಗತಿ ಮಕ್ಕಳು ಬಿಡುವಿನ ವೇಳೆಯನ್ನು ಚೆಕ್ ಡ್ಯಾಂ ನಿರ್ಮಿಸುವ ಕೆಲಸಕ್ಕೆ ಮೀಸಲಿಟ್ಟರು.

ADVERTISEMENT

ಮೊದಲು ಶಾಲೆಯ ಸುತ್ತ ಮುತ್ತ ಸಿಗುವ ಕಲ್ಲು ಮಣ್ಣು ಸಂಗ್ರಹಿಸಿಕೊಂಡಿದ್ದಾರೆ. ವಿಜ್ಞಾನ ಶಿಕ್ಷಕ ಎಂ.ಆರ್.ಲೋಕೇಶ್ ಮಾರ್ದರ್ಶನದಲ್ಲಿ ಅವರು ಸೂಚಿಸಿದ ಜಾಗದಲ್ಲಿ ಕಲ್ಲುಗಳನ್ನು ಪೋಣಿಸಿ, ನೀರು ಸೋರಿ ಹೋಗದಂತೆ ಮಣ್ಣನ್ನು ತುಂಬಿದ್ದಾರೆ. ಅಂತರ್ಜಲ ಸಂರಕ್ಷಣೆ ಮಾಡುವ ಬಗ್ಗೆ ಭಾಷಣ ಮಾಡಿ ಹೋಗುವವರಿಗೆ ಎಂ.ಡಿ. ಕೋಟೆ ಶಾಲೆಯ ಮಕ್ಕಳು ಮಾದರಿಯಾಗಿದ್ದಾರೆ.

ಈ ಬಗ್ಗೆ ಪ್ರಜಾವಾಣಿ ಜತೆ ಮಾತನಾಡಿದ ಶಿಕ್ಷಕ ಲೋಕೇಶ್, ‘ಮಳೆ ಬಂದಾಗಲೆಲ್ಲ ಶಾಲೆಯ ಪಕ್ಕದಲ್ಲಿನ ಹಳ್ಳದಲ್ಲಿ ಮಳೆನೀರು ಹರಿದು ಹೋಗುತ್ತಿತ್ತು. ಇದನ್ನು ಕಂಡಾಗ ಹೇಗಾದರೂ ಮಾಡಿ ಹರಿದು ಹೋಗುವ ನೀರನ್ನು ಸ್ವಲ್ಪ ಮಟ್ಟಿಗಾದರೂ ತಡೆ ಹಿಡಿಯಬೇಕು. ಕೆಲವು ದಿನ ನೀರು ನಿಂತರೂ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ.

ವಾತಾವರಣದಲ್ಲಿ ತೇವಾಂಶ ವೃದ್ಧಿಗೊಳ್ಳುವ ಕಾರಣ ಗಿಡಮರಗಳು ಹಸಿರಿನಿಂದ ಕೂಡಿರುತ್ತವೆ. ದೊಡ್ಡ ಪ್ರಮಾಣದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಹಣದ ಕೊರತೆ. ಹೀಗಾಗಿ ಚಿಕ್ಕ ಚಿಕ್ಕ ಚೆಕ್ ಡ್ಯಾಂ ನಿರ್ಮಿಸಲು ಮುಂದಾದೆವು. ಮಕ್ಕಳ ಉತ್ಸಾಹ, ಸಹೋದ್ಯೋಗಿಗಳ ಸಹಕಾರದಿಂದ ಶಾಲೆಯ ಪಕ್ಕದಲ್ಲಿಯೇ ಮಳೆಯ ನೀರು ನಿಲ್ಲಲು ಸಾಧ್ಯವಾಗಿದೆ’ ಎನ್ನುತ್ತಾರೆ.

‘ಮಳೆಗಾಲದಲ್ಲಿ ಸಾಧ್ಯವಿರುವ ವಿಧಾನಗಳ ಮೂಲಕ ನೀರನ್ನು ಇಂಗಿಸುವ ಕೆಲಸವನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಜಾರಿಗೆ ತರಬೇಕು. ಇದಕ್ಕಾಗಿ ಅಗತ್ಯ ಅನುದಾನ ನೀಡಬೇಕು. ಇದರಿಂದ ಮಕ್ಕಳಿಗೆ ಅಂತರ್ಜಲ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಟ್ಟಂತೆ ಆಗುತ್ತದೆ’ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.