ADVERTISEMENT

ಹಳ್ಳಿಗಳಲ್ಲಿ ಸ್ವಚ್ಛತೆ ಕೊರತೆ: ವರದಿ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 5:05 IST
Last Updated 6 ಜುಲೈ 2013, 5:05 IST

ಚಿತ್ರದುರ್ಗ: ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲ್ಲೂಕಿನ ಹಳ್ಳಿಗಳಲ್ಲಿ ಡೆಂಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಪಾರ್ವತಿ ಅವರು ಒತ್ತಾಯಿಸಿದರು.

ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ, ಆರೋಗ್ಯ ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡುವ ವೇಳೆ, ತಾಲ್ಲೂಕಿನಲ್ಲಿ ಡೆಂಗೆ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಅಧ್ಯಕ್ಷರು ಮತ್ತು ಕಾರ್ಯ ನಿರ್ವಹಣಾಧಿಕಾರಿಗಳ ಗಮನ ಸೆಳೆದರು.

`ತಾಲ್ಲೂಕಿನಲ್ಲಿ 36 ಶಂಕಿತ ಡೆಂಗೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಹಿರೇಗುಂಟನೂರಿನಲ್ಲಿ 4, ಗೊಡಬನಾಳು, ವಿಜಾಪುರದಲ್ಲಿ ತಲಾ ಒಂದು, ಚಿತ್ರದುರ್ಗ ಗ್ರಾಮಾಂತರ ಪ್ರದೇಶದಲ್ಲಿ 14 ಪ್ರಕರಣಗಳು ಪತ್ತೆಯಾಗಿವೆ. ಡೆಂಗೆ ನಿಯಂತ್ರಣಕ್ಕೆ ಈ ಹಳ್ಳಿಗಳಲ್ಲಿ ಫಾಗಿಂಗ್, ಲಾರ್ವಾ ಸಮೀಕ್ಷೆ ಮಾಡುತ್ತಿದ್ದೇವೆ. ಹೊಂಡಗಳಲ್ಲಿ ಗಪ್ಪಿ ಮೀನಿನ ಮರಿಗಳನ್ನು ಬಿಟ್ಟಿದ್ದೇವೆ' ಎಂದು ವಿವರಿಸಿದರು.

`ಸ್ವಚ್ಛತೆ ಕೊರತೆಯೇ ಹಳ್ಳಿಗಳಲ್ಲಿ ಡೆಂಗೆ ಹೆಚ್ಚಲು ಕಾರಣವಾಗಿದೆ. ಪಿಡಿಒ ಕಚೇರಿಗಳೇ ಕೊಳಕಾಗಿರುತ್ತವೆ. ಆಸ್ಪತ್ರೆಗಳೂ ಕೂಡ ಇದಕ್ಕೆ ಹೊರತಾಗಿಲ್ಲ. ಈ ಬಗ್ಗೆ ಪಿಡಿಒಗಳಿಗೆ ಸಲಹೆ ನೀಡಿದ್ದೇವೆ. ಏನೂ ಪ್ರಯೋಜನವಾಗಿಲ್ಲ. ಈ ಬಗ್ಗೆ ನಿಮ್ಮ ಇಲಾಖೆಯೇ ಕ್ರಮ ಕೈಗೊಳ್ಳಬೇಕು' ಎಂದು ಕಾರ್ಯ ನಿರ್ವಹಣಾಧಿಕಾರಿ ರುದ್ರಮುನಿ ಅವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರುದ್ರಮುನಿ ಅವರು, ಹಳ್ಳಿಗಳಲ್ಲಿನ ಸ್ವಚ್ಛತೆ ನಿರ್ವಹಣೆ ಕುರಿತು ವರದಿ ನೀಡುವಂತೆ ಪಾರ್ವತಿ ಅವರಿಗೆ ಸೂಚಿಸಿದರು.

ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ  ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಾರೆಡ್ಡಿ ಅವರು `9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳು ಬಂದಿಲ್ಲ. 200 ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಂದಿಲ್ಲ. ಬಂದ ಕೂಡಲೇ ವಿತರಣೆ ಮಾಡಲಾಗುತ್ತದೆ' ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದೊಡ್ಡಾಪುರದ ಶಿಕ್ಷಕ ಹೇಮಚಂದ್ರ ಅವರ ಮೇಲೆ ಹಲ್ಲೆ ಕುರಿತು ತಾ.ಪಂ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಹಣಾಧಿಕಾರಿ ಮಾಹಿತಿ ಪಡೆದುಕೊಂಡರು.

ಎಂಜಿಎನ್‌ಆರ್‌ಇಜಿಎಸ್ ಯೋಜನೆಯಡಿ ಸುಮಾರು 175 ಹೆಕ್ಟೇರ್ ಪ್ರದೇಶದಲ್ಲಿ ಸಸ್ಯಗಳನ್ನು ನಾಟಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ ರೈತರ ಜಮೀನಿನಲ್ಲಿ 1 ಲಕ್ಷ 50 ಸಾವಿರ ಅರಣ್ಯ ಸಸಿಗಳನ್ನು ನೆಡುವ ಗುರಿ ಇದೆ ಎಂದು ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ) ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ ರುದ್ರಮುನಿ, ನಗರದಲ್ಲಿ ಈಗಾಗಲೇ ಗುಂಡಿ ತೆಗೆದಿರುವ ಸ್ಥಳಗಳಲ್ಲಿ ಸಸಿಗಳನ್ನು ನೆಡುವಂತೆ ಅಧಿಕಾರಿಗೆ ಸೂಚನೆ ನೀಡಿದರು.

ತೋಟಗಾರಿಕಾ ಇಲಾಖೆಯಿಂದ ಕಳೆದ ವರ್ಷ ಹಲಸಿನ ಮೌಲ್ಯವರ್ಧನೆ ಕುರಿತು ಮೇಳ ನಡೆಸಿದ್ದೆವು. ಈ ಬಾರಿ ಮತ್ತೊಂದು ಹಣ್ಣಿನ ಮೌಲ್ಯವರ್ಧನೆ ಬಗ್ಗೆ ರೈತರಿಗೆ ತರಬೇತಿ ನೀಡಲಾಗುತ್ತದೆ ಎಂದು ಹಿರಿಯ ತೋಟಗಾರಿಕಾ ಇಲಾಖೆ ನಿರ್ದೇಶಕರು ಸಭೆಗೆ ತಿಳಿಸಿದರು.

ಪಶುಸಂಗೋಪನೆ ಇಲಾಖೆಯ ಪ್ರಗತಿಯ ಮಾಹಿತಿ ನೀಡಿದ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು, ಕೃತಕ ಗರ್ಭಧಾರಣೆ,ಪ್ರಾಣಿಗಳ ಗರ್ಭ ತಪಾಸಣೆ, ಹಾಗೂ ಕೊಕ್ಕರೆ ರೋಗಕ್ಕೆ ಲಸಿಕೆ ಹಾಕುವ ಕಾರ್ಯ ಕುರಿತು  ಮಾಹಿತಿ ನೀಡಿದರು.

ಪ್ರಸಕ್ತ ವರ್ಷ ಆರು ತಿಂಗಳಲ್ಲಿ ತಾಲ್ಲೂಕಿನಲ್ಲಿ 356 ಮಿಮೀ ಮಳೆಯಾಗಿದ್ದು, ಭರಮಸಾಗರದಲ್ಲಿ ಶೇ 80ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮುಸುಕಿನ ಜೋಳ, ಸೂರ್ಯಕಾಂತಿ, ತೊಗರಿ ಮತ್ತು ಇತರ ದ್ವಿದಳ ಧಾನ್ಯಗಳು ಬಿತ್ತನೆ ಹಂತದಿಂದ ಬೆಳವಣಿಗೆ ಹಂತ ತಲುಪಿವೆ. ಶೇಂಗಾ, ರಾಗಿ ಮತ್ತು ಹತ್ತಿ ಬಿತ್ತನೆ ಹಂತದಲ್ಲಿವೆ ಎಂದು ಸಹಾಯಕ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ತಾ.ಪಂ ಎದುರೇ ಸ್ವಚ್ಛತೆ ಕೊರತೆ
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಂಗೆ ಪ್ರಕರಣಗಳ ಕುರಿತು ಚರ್ಚೆ ನಡೆಯುತ್ತಿದ್ದಾಗ, ಪಿಡಿಒಗಳೇ ತಮ್ಮ ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ ಎಂಬ ವಿಚಾರ ಚರ್ಚೆಯಾಯಿತು.

ಈ ಚರ್ಚೆಗೆ ಪುಷ್ಠಿ ನೀಡುವಂತೆ ತಾಲ್ಲೂಕು ಪಂಚಾಯ್ತಿ ಬಾಗಿಲಿನಲ್ಲೇ ಕೊಚ್ಚೆ ಗುಂಡಿ ನಿರ್ಮಾಣವಾಗಿದ್ದು, ಕಚೇರಿಗೆ ಬರುವವರಿಗೆಲ್ಲ ಕಿರಿ ಕಿರಿ ಉಂಟು ಮಾಡುತ್ತಿದೆ. ಮಾತ್ರವಲ್ಲ, ಸೊಳ್ಳೆಗಳಿಗೆ ಆಶ್ರಯ ತಾಣವಾಗಿದೆ. ಹಾಗಾದರೆ ತಾ.ಪಂ ಕಚೇರಿ ಆವರಣದ ಸ್ವಚ್ಛತೆ ಬಗ್ಗೆ ಯಾರು ಕ್ರಮ ಕೈಗೊಳ್ಳಬೇಕು ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.