ADVERTISEMENT

ಹಿಂದುಳಿದವರಿಗೆ ರಾಜಕೀಯ ಸ್ಥಾನಮಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:40 IST
Last Updated 8 ಅಕ್ಟೋಬರ್ 2011, 9:40 IST

ಚಿತ್ರದುರ್ಗ: ಹಿಂದುಳಿದ ಎಲ್ಲ ವರ್ಗಗಳಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಪ್ರತಿಪಾದಿಸಿದರು.

ವಿಶ್ವಕರ್ಮ ಸಮಾಜ ವತಿಯಿಂದ ಶುಕ್ರವಾರ ನಗರದ ಬುರುಜನಹಟ್ಟಿ ರಸ್ತೆಯಲ್ಲಿನ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಳೇಬೀಡು, ಬೇಲೂರಿನಲ್ಲಿ ಕೆತ್ತನೆ ಕಾರ್ಯ ಮಾಡಿರುವ ಶಿಲ್ಪಿ ಜಕಣಾಚಾರಿ ಮೂಲಕವೇ ವಿಶ್ವಕರ್ಮ ಸಮಾಜಕ್ಕೆ ಹೆಸರು ಬಂದಿದೆ ಎಂದು ನುಡಿದರು.

ವಿಶ್ವಕರ್ಮ ಕಲ್ಯಾಣ ಮಂಟಪದ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ರೂ. 5ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ವಿಶ್ವಕರ್ಮ ಸಮಾಜವು ರಕ್ತಗತವಾಗಿ ಬಂದಿರುವ ಕಲೆಯ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಬಗ್ಗೆ ಚಿಂತನೆ ಮಾಡಬೇಕು ಎಂದರು.

ಹಾಸನ ಜಿಲ್ಲೆ ಅರಕಲಗೂಡು ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಗುರುಶಿವ ಸುಜ್ಞಾನಮೂರ್ತಿ ಸ್ವಾಮೀಜಿ ಕಲ್ಯಾಣ ಮಂಟಪ ಉದ್ಘಾಟಿಸಿದರು. ಹಿರಿಯೂರು ಚಿಗಟು ಮಲ್ಲೇಶ್ವರ ಮಹಾಸಂಸ್ಥಾನದ ಜ್ಞಾನಭಾಸ್ಕರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಸದಸ್ಯರಾದ ಎಂ. ಮಲ್ಲಿಕಾರ್ಜುನ್, ಮಹಮದ್ ಅಹಮದ್ ಪಾಷಾ, ಮಾಜಿ ಅಧ್ಯಕ್ಷರಾದ ಜಿ. ಚಂದ್ರಪ್ಪ, ಎಚ್.ಸಿ. ನಿರಂಜನಮೂರ್ತಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ. ಮಲ್ಲಿಕಾರ್ಜುನಚಾರ್ ಭಾಗವಹಿಸಿದ್ದರು. ಎಲ್. ನಾರಾಯಣಚಾರ್, ಎ. ಶಂಕರಚಾರ್, ವಿ. ಗಂಗಾಧರಚಾರ್, ಎಂ. ಶಂಕರಮೂರ್ತಿ, ಎಂ.ವಿ. ತಿಮ್ಮಾಚಾರ್, ಎನ್. ಮಾಣಿಕ್ಯಾಚಾರ್, ರಾಜೇಂದ್ರಚಾರ್ ಹಾಜರಿದ್ದರು. ರೇಖಾಮಣಿ ಪ್ರಾರ್ಥಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.