ADVERTISEMENT

ಹಿರಿಯೂರು: ಕಗ್ಗಂಟಾದ ಕಾಂಗ್ರೆಸ್ ಟಿಕೆಟ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 8:58 IST
Last Updated 14 ಏಪ್ರಿಲ್ 2013, 8:58 IST

ಚಿತ್ರದುರ್ಗ: ಜಿಲ್ಲೆಯಲ್ಲೇ ಸದಾ ಸುದ್ದಿಯಲ್ಲಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಸ್ಪಷ್ಟ ಚಿತ್ರಣ ಇನ್ನೂ ಮೂಡಿ ಬರುತ್ತಿಲ್ಲ.
ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇದುವರೆಗೆ ಪ್ರಕಟಿಸದಿರುವುದು ಕಗ್ಗಂಟಾಗಿ ಪರಿಣಮಿಸಿದೆ. ಕಾರ್ಯಕರ್ತರು, ಮುಖಂಡರಲ್ಲಿಯೂ ಗೊಂದಲ ಮೂಡಿದೆ. ಪಕ್ಷದಲ್ಲಿ ಬಂಡಾಯದ ಭೀತಿ ಉಂಟಾಗುವ ಹಿನ್ನೆಲೆಯಲ್ಲಿ ವರಿಷ್ಠರು ಎಲ್ಲ ರೀತಿಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಟಿಕೆಟ್ ಘೋಷಣೆ ವಿಳಂಬವಾಗಿದೆ.

ಪಕ್ಷೇತರ ಶಾಸಕ ಡಿ. ಸುಧಾಕರ್ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಸಹ ಟಿಕೆಟ್ ಘೋಷಣೆಗೆ ವಿಳಂಬವಾಗಿತ್ತು. ಪ್ರಮುಖವಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ  ಕೋದಂಡರಾಮಯ್ಯ ಮತ್ತು ಬೆಂಬಲಿಗರು ಮೊದಲಿನಿಂದಲೂ ಸುಧಾಕರ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸುಧಾಕರ್‌ಗೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲೇಬಾರದು ಮತ್ತು ಕಳೆದ ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಎಂದು ವಾದ ಮಂಡಿಸಲಾಗಿತ್ತು.

ಆದರೆ, ಹೈಕಮಾಂಡ್ ವಿರೋಧಕ್ಕೆ ಮಣಿದಿಲ್ಲ. ಡಿ. ಸುಧಾಕರ್‌ಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು, ಭಾನುವಾರ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತಮ್ಮದೇ ಆದ ತಂತ್ರಗಳ ಮೂಲಕ ಸುಧಾಕರ್ ಕಾಂಗ್ರೆಸ್ ವರಿಷ್ಠರನ್ನು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಧಿಕೃತ ಪ್ರಕಟಣೆಯ ನಂತರ ಕಾಂಗ್ರೆಸ್‌ನಲ್ಲಿ ಬಂಡಾಯ ಸೃಷ್ಟಿಯಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ತೀವ್ರ ಬಂಡಾಯ ಎದುರಿಸಬೇಕಾಯಿತು. ಗೀತಾ ನಂದಿನಿಗೌಡ ಅವರಿಗೆ ಟಿಕೆಟ್ ದೊರೆತ ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿಯೇ ಡಿ. ಸುಧಾಕರ್, ಎ.ವಿ. ಉಮಾಪತಿ, ಆರ್. ಮಂಜುನಾಥ್, ರಾಜ್ಯ ಪೌರಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್ ಸ್ಪರ್ಧಿಸಿ ಬಂಡಾಯ ವ್ಯಕ್ತಪಡಿಸಿದ್ದರು.

ಈಗ ಸುಧಾಕರ್‌ಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿರುವ ಸುಳಿವು ಪಡೆದಿರುವ ಎದುರಾಳಿ ಬಣಗಳು ಸಹ ಮುಂದಿನ ಲೆಕ್ಕಾಚಾರದಲ್ಲಿ ತೊಡಗಿವೆ.

ಉಳಿದಂತೆ ಹಿರಿಯೂರಿನಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಎಂ. ಜಯಣ್ಣ, ಜೆಡಿಎಸ್‌ನಿಂದ ಲಕ್ಷ್ಮೀಕಾಂತ, ಬಿಜೆಪಿಯಿಂದ ಸಿದ್ದೇಶ್ ಯಾದವ್ ಸ್ಪರ್ಧಿಸಲಿದ್ದಾರೆ.

ಪಕ್ಷ ತ್ಯಜಿಸುವುದಿಲ್ಲ: ಕೋದಂಡರಾಮಯ್ಯ
ಹಿರಿಯೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಬೇಕು. ನನಗೆ ಅರ್ಹತೆ ಇಲ್ಲವೇ ಎಂದು ಪಿ. ಕೋದಂಡರಾಮಯ್ಯ ಪ್ರಶ್ನಿಸಿದ್ದಾರೆ.

ಆದರೆ, ಒಂದು ವೇಳೆ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಟಿಕೆಟ್ ಕೊಡಲಿಲ್ಲ ಎಂದು ಬೇರೆ ಪಕ್ಷಕ್ಕೆ ಹಾರುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.