ADVERTISEMENT

ಹೆಚ್ಚುವರಿ ಭೋಜನ ವೆಚ್ಚ ಪಾವತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 6:35 IST
Last Updated 12 ಫೆಬ್ರುವರಿ 2011, 6:35 IST

ಚಿತ್ರದುರ್ಗ: ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವರ್ಗ-1ರ ಅಭ್ಯರ್ಥಿಗಳಿಗೆ ಸರ್ಕಾರದಿಂದ ನೀಡಲಾಗುವ ಹೆಚ್ಚುವರಿ ಭೋಜನ ವೆಚ್ಚವನ್ನು ಪ್ರತಿ ತಿಂಗಳೂ ಪಾವತಿಸುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ. ಮಹಲಿಂಗಪ್ಪ ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ತಿಳಿಸಿದರು.

ಪಿಯುನಿಂದ ಪದವಿ, ಡಿ.ಇಡಿ., ಬಿ.ಇಡಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ ಹಾಗೂ ಎಂಜಿನಿಯರಿಂಗ್, ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವರ್ಗ-1 ಅಡಿ ಬರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ್ಙ 200 ನಂತೆ ಹೆಚ್ಚುವರಿ ಭೋಜನ ವೆಚ್ಚವನ್ನಾಗಿ ಸರ್ಕಾರ ನೀಡುತ್ತಾ ಬಂದಿದೆ. ಆದರೆ ಪ್ರತಿ ತಿಂಗಳು ಪಾವತಿಸುತ್ತಿಲ್ಲ.ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಗಿಯುವ ವರ್ಷದ ಕೊನೆಯಲ್ಲಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಅಧಿಕಾರಿಗಳು ಇದನ್ನು ಪ್ರತಿ ತಿಂಗಳು ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಸಕಾಲಕ್ಕೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನೀಡಿ. ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಸದ್ಬಳಕೆಯಾಗುತ್ತಿಲ್ಲ. ಅಧಿಕಾರಿಗಳು ಈ ವಿಷಯದಲ್ಲಿ ಬೇಜವಾಬ್ದಾರಿ ವಹಿಸಬಾರದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಹೆಚ್ಚು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿದ್ದು, ಜೀವನ ನಿರ್ವಹಣೆಗಾಗಿ ಕುರಿ ಸಾಕಾಣಿಕೆ, ಜಾನುವಾರು ಸಾಕಾಣಿಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ಮುಂದಿನ 15 ದಿನಗಳಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ವಾಸಿಸುವ ಕಾಲೋನಿಗಳಿಗೆ ಭೇಟಿ ನೀಡಿ ಅಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಒತ್ತು ನೀಡಲಿದ್ದೇನೆ. ಅಭಿವೃದ್ದಿಯ ಹಿತದೃಷ್ಟಿಯಿಂದ ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.

 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಗೇಗೌಡ ಮಾತನಾಡಿ, ಜಿಲ್ಲೆಯಲ್ಲಿನ ಖಾಸಗಿ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳಿಗೆ ಅನುದಾನವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲು ತಿಳಿಸಿ ವಿದ್ಯಾರ್ಥಿ ನಿಲಯಗಳಲ್ಲಿನ ಹಾಜರಾತಿಯ ಪರಿಶೀಲನೆ ನಡೆಸಿ ಹಣ ಪಾವತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಹಾಜರಾತಿಯನ್ನು ಪರಿಶೀಲಿಸಿದ ನಂತರ ಪಾವತಿಸಬೇಕು ಎಂದು ತಿಳಿಸಿದರು.

ಅಂಗವಿಕಲರಿಗೆ ಶೌಚಾಲಯ: ಜಿಲ್ಲೆಯ ಎಲ್ಲ ಅಂಗವಿಕಲರ ಮನೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯವನ್ನು ಕಲ್ಪಿಸಲು ಜಿಲ್ಲಾ ಪಂಚಾಯತ್‌ನಿಂದ ನಿರ್ಮಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿನ ಅಂಗವಿಕಲರನ್ನು ಗುರುತಿಸಿ ಪಟ್ಟಿ ನೀಡಿ. ಶೌಚಾಲಯ ನಿರ್ಮಿಸಿಕೊಡುವ ಜವಾಬ್ದಾರಿ ಜಿಲ್ಲಾ ಪಂಚಾಯ್ತಿಯದ್ದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಜಯಸ್ವಾಮಿ ಅವರಿಗೆ ಸೂಚಿಸಿದರು.

ಸೋರುವ ಡಿಎಚ್‌ಒ ಕಚೇರಿ: ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸೋರುತ್ತಿರುವುದನ್ನು ಸಿಇಒ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದರು. ಕಳೆದ ಎರಡು ವರ್ಷಗಳಿಂದ ದುರಸ್ತಿ ಮಾಡಲಾಗುತ್ತಿದೆ. ದರೂ ಸುಧಾರಿಸಿಲ್ಲ. ನೀವು ಯಾಕೆ ಅವರ ಮುಂದೆ ಪ್ರತಿಭಟನೆ ಮಾಡಬಾರದಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಪ್ರಶ್ನಿಸಿದರು.ಜಿ.ಪಂ. ಉಪಾಧ್ಯಕ್ಷೆ  ವಿಜಯಮ್ಮ ಎಂ. ಜಯಣ್ಣ, ಉಪ ಕಾರ್ಯದರ್ಶಿ ರುದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.